ಬಿಜೆಪಿ ನಾಯಕರ ವಿರೋಧಿ ಅಲೆಯಲ್ಲಿ ಹಾಸನವನ್ನೂ ಕಳೆದುಕೊಳ್ಳುತ್ತಾ ಜೆಡಿಎಸ್?

ಬಿಜೆಪಿ ನಾಯಕರ ವಿರೋಧಿ ಅಲೆಯಲ್ಲಿ ಹಾಸನವನ್ನೂ ಕಳೆದುಕೊಳ್ಳುತ್ತಾ ಜೆಡಿಎಸ್?

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋ ಜೆಡಿಎಸ್​ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸೋದಾಗಿ ಘೋಷಣೆ ಮಾಡಿದೆ. ಮಂಡ್ಯ, ಹಾಸನ ಮತ್ತು ಕೋಲಾರ. ಮೂರರ ಪೈಕಿ ಮಂಡ್ಯ ಮತ್ತು ಹಾಸನದಲ್ಲಿ ನಾವು ಸಿಂಗಲ್ಲಾಗಿ ಸ್ಪರ್ಧಿಸಿದ್ರೂ ಗೆಲ್ಲೋದು ನಾವೇ ಅಂತಾ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ದೃಢ ವಿಶ್ವಾಸ ಹೊಂದಿದ್ದಾರೆ. ಆದ್ರೆ ಈ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್​ ಗೆಲುವು ಅಷ್ಟು ಸುಲಭವಾಗಿಲ್ಲ. ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಗಳಾಗಿದ್ದ ಈ ಎರಡೂ ಜಿಲ್ಲೆಗಳ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಅದೂ ಅಲ್ದೇ ಮೈತ್ರಿ ಪಕ್ಷವಾಗಿರೋ ಬಿಜೆಪಿಗರೇ ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಸನದಲ್ಲಂತೂ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡ್ಬೇಡಿ ಅಂತಾ ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ಮೈತ್ರಿಯಲ್ಲೇ ಅಸಮಾಧಾನ ಜಾಸ್ತಿಯಾಗ್ತಿರೋದೇಕೆ..? ಮಂಡ್ಯದಲ್ಲಿ ಜೆಡಿಎಸ್ ಗೆ ಏನೆಲ್ಲಾ ಸವಾಲಿದೆ..? ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿಗರು ಸಿಟ್ಟಾಗಿರೋದೇಕೆ..? ಈ ಬಗೆಗಿನ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:  ಸಿಲಿಕಾನ್‌ ಸಿಟಿ ಬೆಂಗಳೂರಿನ ಅಪಾರ್ಟ್ಮೆಂಟ್​​ಗಳಲ್ಲಿ ನೀರಿನ ಸಂಕಷ್ಟ – ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡಲು ಹೆಚ್ಚಾಯ್ತು ಆಗ್ರಹ

ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದ್ರೆ ಚುನಾವಣೆಗೂ ಮೊದ್ಲೇ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ ಮೈತ್ರಿಯಲ್ಲಿ ಬಿರುಕು ಮೂಡಿದೆ. ಅದ್ರಲ್ಲೂ ಹಾಸನ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್​​ಗೆ ಆತಂಕ ಶುರುವಾಗಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು 5 ಬಾರಿ ಪ್ರತಿನಿಧಿಸಿದ್ದ ಹಾಸನ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಮತ್ತು ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿಯೇ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ತಮ್ಮ ಕ್ಷೇತ್ರದಲ್ಲೇ ಹೀಗೆ ಅಪಸ್ಪರ ಎದುರಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಂದೆಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಬಿ.ಎಸ್ ಯಡಿಯೂರಪ್ಪ ಸಮಾಧಾನ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ಜೆಡಿಎಸ್ ಜೊತೆ ಬಿಜೆಪಿ ಕೆಲಸ ಮಾಡಲಿದೆ ಎಂಬ ಭರವಸೆ ನೀಡಿದ್ದಾರೆ.

ಪ್ರಜ್ವಲ್ ಸ್ಪರ್ಧೆಗೆ ವಿರೋಧ! 

ಹೇಳಿ ಕೇಳಿ ಹಾಸನ ಜೆಡಿಎಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ. ಆದರೆ, ಸಂಸದ ಪ್ರಜ್ವಲ್ ರೇವಣ್ಣ ಸ್ಥಳೀಯ ಬಿಜೆಪಿ ನಾಯಕರಿಂದ ಅದರಲ್ಲೂ ಹಾಸನದ ಮಾಜಿ ಶಾಸಕ ಪ್ರೀತಂ ಗೌಡರಿಂದ ಪ್ರತಿರೋಧ ಎದುರಿಸುತ್ತಿದ್ದಾರೆ. ಪಕ್ಷದ ಚಿಹ್ನೆಯಿಂದ ಸ್ಪರ್ಧಿಸದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ನಾನು ಪಕ್ಷದ ಕಾರ್ಯಕರ್ತರಿಗೆ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಪ್ರೀತಂ ಹೇಳಿದ್ದಾರೆ. ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಸಾಧ್ಯವಿಲ್ಲ ಎಂಬುದು ಇದರ ಅರ್ಥ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ನಾಲ್ಕು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ಕ್ಷೇತ್ರಗಳನ್ನು ಹೊಂದಿವೆ. ಮಾಜಿ ಸಂಸದ ದಿವಂಗತ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕಳೆದ ವರ್ಷ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಡಿ ರೇವಣ್ಣ ವಿರುದ್ಧ ಕೇವಲ 3,152 ಮತಗಳಿಂದ ಶ್ರೇಯಸ್ ಪಟೇಲ್ ಸೋಲು ಕಂಡಿದ್ದರು.

ದಶಕಗಳಿಂದಲೂ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಈ ಸಲ ಮೈತ್ರಿಯಿಂದಾಗಿ ಜೆಡಿಎಸ್​ಗೆ ಆತಂಕ ಎದುರಾಗಿದೆ. ಅದ್ರಲ್ಲೂ ಪ್ರಜ್ವಲ್ ರೇವಣ್ಣಗೆ ಈ ಸಲ ಗೆಲುವು ಅಷ್ಟು ಸುಲಭವೂ ಅಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಇದ್ರೂ ಕೂಡ ಅದು ಲೋಕಸಭಾ ಚುನಾವಣೆಗೆ ವರ್ಕೌಟ್ ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಯಾಕಂದ್ರೆ ಮೈತ್ರಿ ಪಕ್ಷ ಬಿಜೆಪಿಯ ನಾಯಕರು ಬಹಿರಂಗವಾಗೇ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಬಿಜೆಪಿಗರ ಅಸಮಾಧಾನ!   ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಿರುವುದು ಸ್ಥಳೀಯ ಬಿಜೆಪಿ ಮುಖಂಡರಿಗೆ ಇಷ್ಟ ಇಲ್ಲ. ಹೀಗಾಗಿ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದು ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಕಾರಣಹಾಲಿ ಸಂಸದ ಪ್ರಜ್ವಲ್ ರೇವಣ್ಣ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಕಳೆದ ವರ್ಷ ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಸೋತಿದ್ದ ಬಿಜೆಪಿಯ ಜಿ.ದೇವರಾಜೇಗೌಡ ಮತ್ತು ಬೆಂಬಲಿಗರು, ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸುವುದು ದೂರದ ಮಾತು. ಬಿಜೆಪಿ ನಾಯಕರೇ ಈ ಬಗ್ಗೆ ಸೂಚನೆ ನೀಡಿದರೂ ಕೂಡ ಅವರು ಪ್ರಚಾರದಲ್ಲಿ ಭಾಗಿಯಾಗುವುದು ಅಸಾಧ್ಯ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಅಥವಾ  ದೇವೇಗೌಡ ಹಾಸನದಿಂದ ಸ್ಪರ್ಧಿಸಲು ನಮ್ಮ ಅಭ್ಯಂತರವಿಲ್ಲ. ಪ್ರಜ್ವಲ್ ರೇವಣ್ಣ ಅವರು ಎದುರಿಸುತ್ತಿರುವ ಆಡಳಿತ ವಿರೋಧಿ ನೀತಿಯಿಂದ ಈ ಸ್ಥಾನವನ್ನು ಕಳೆದುಕೊಳ್ಳಬಹುದು ಎಂಬ ಕಾರಣಕ್ಕೆ ನಾವು ಅವರನ್ನು ವಿರೋಧಿಸುತ್ತಿದ್ದೇವೆ. ಅಲ್ಲದೆ, ಅವರ 2019 ರ ಆಯ್ಕೆಯ ವಿರುದ್ಧದ ಪ್ರಕರಣವು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಇಂತಹ ಸ್ಥಿತಿಯಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಕೂಡ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಒಟ್ನಲ್ಲಿ ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನ ಈಸಿಯಾಗಿ ಗೆಲ್ಬೋದು ಅಂದುಕೊಂಡಿದ್ದ ಜೆಡಿಎಸ್​ಗೆ ಹಾಸನ ಕೂಡ ಸವಾಲಾಗೋ ಎಲ್ಲಾ ಲಕ್ಷಣ ಕಾಣ್ತಿದೆ. ಮೈತ್ರಿಯಲ್ಲೇ ಬಿರುಕು ಮೂಡಿರೋದ್ರಿಂದ ಕಾಂಗ್ರೆಸ್​ಗೆ ಪ್ಲಸ್ ಆದ್ರೂ ಆಗಬಹುದು.

Shwetha M