ಒಂದೇ ತಿಂಗಳ ಅವಧಿಯಲ್ಲಿ ಅಗಲಿದ ತಂದೆ ತಾಯಿ – ಕೈ ಅಭ್ಯರ್ಥಿ ದರ್ಶನ್ ಧ್ರುವನಾರಾಯಣಗೆ ಬೆಂಬಲ ಘೋಷಿಸಿದ ಜೆಡಿಎಸ್

ಒಂದೇ ತಿಂಗಳ ಅವಧಿಯಲ್ಲಿ ಅಗಲಿದ ತಂದೆ ತಾಯಿ – ಕೈ ಅಭ್ಯರ್ಥಿ ದರ್ಶನ್ ಧ್ರುವನಾರಾಯಣಗೆ ಬೆಂಬಲ ಘೋಷಿಸಿದ ಜೆಡಿಎಸ್

ಒಂದು ತಿಂಗಳ ಅವಧಿಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ದರ್ಶನ್ ಧ್ರುವನಾರಾಯಣಗೆ ಅನುಕಂಪದ ಅಲೆ ಎದ್ದಿದೆ. ಮಹಾದೇವಪ್ಪ ಟಿಕೆಟ್ ಬಿಟ್ಟು ಕೊಟ್ಟ ಬೆನ್ನಲ್ಲೇ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದರ್ಶನ್ ಧ್ರುವನಾರಾಯಣ್ ಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ, ಬೆಂಬಲಿಸಲು ದಳಪತಿಗಳು ಮುಂದಾಗಿದ್ದಾರೆ. ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ದರ್ಶನ್‌ಗೆ ಬೆಂಬಲ ಘೋಷಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ದರ್ಶನ್ ತಂದೆಯನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಬೆಂಬಲ ಕೊಡುವ ಬಗ್ಗೆ ಚರ್ಚೆಯಾಗಿತ್ತು. ಇದೀಗ ದರ್ಶನ್ ತಾಯಿ ಸಹಾ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಖಂಡಿತಾ ಬೆಂಬಲ ನೀಡುತ್ತಾರೆ. ಅವರೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುತ್ತಾರೆ ಎಂದು ಸಾ.ರಾ ಮಹೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:   ದಿ. ಆರ್. ಧ್ರುವನಾರಾಯಣ್ ಪತ್ನಿ ವಿಧಿವಶ

ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರು ಕಳೆದ ತಿಂಗಳು ತಂದೆ ಆರ್ ಧ್ರುವನಾರಾಯಣ ಅವರನ್ನು ಕಳೆದುಕೊಂಡಿದ್ದರು. ಇದೇ ನೋವಿನಲ್ಲಿ ಚುನಾವಣೆ ಪ್ರಚಾರಕ್ಕಿಳಿದಿದ್ದರು. ಆದ್ರೆ, ಇದೀಗ ದರ್ಶನ್ ತಾಯಿ ವೀಣಾರನ್ನು ಸಹ ಕಳೆದುಕೊಂಡು ಅನಾಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವರಿಗೆ ಬೆಂಬಲಿಸಲು ದಳಪತಿಗಳು ನಿರ್ಧರಿಸಿದ್ದಾರೆ. ಖುದ್ದು ಕುಮಾರಸ್ವಾಮಿ ಅವರು ದರ್ಶನ್‌ಗೆ ಸಾಂತ್ವನ ಹೇಳಿ ಬೆಂಬಲ ಘೋಷಿಸುತ್ತಾರೆ ಎಂದು ಮೈಸೂರು ಭಾಗದ ಜೆಡಿಎಸ್ ನಾಯಕರು ಹೇಳಿದ್ದಾರೆ. ಧ್ರುವನಾರಾಯಣ ಅವರು ಈ ಬಾರಿ ನಂಜನಗೂಡು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದರು. ಇನ್ನು ಡಾ. ಹೆಚ್.ಸಿ ಮಹಾದೇವಪ್ಪ ಸಹ ಇದೇ ನಂಜನಗೂಡು ಕ್ಷೇತ್ರದ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಸಿದ್ದರು. ಮಹಾದೇವಪ್ಪ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಧ್ರುವನಾರಾಯಣ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ, ದುರದೃಷ್ಟವಶಾತ್ ಅವರು ಮಾರ್ಚ್ 11 ರಂದು ಅಕಾಲಿಕ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನಂಜನಗೂಡು ಕಾಂಗ್ರೆಸ್ ಟಿಕೆಟ್ ಮಹಾದೇವಪ್ಪ ಅವರಿಗೆ ಖಚಿತ ಎನ್ನಲಾಗಿತ್ತು. ಆದ್ರೆ, ಧ್ರುವನಾರಾಯಣ ಅವರ ಅಭಿಮಾನಿಗಳು ಪುತ್ರ ದರ್ಶನ್ ಅವರಿಗೆ ಟಿಕೆಟ್ ನಿಡಬೇಕೆಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಾದೇವಪ್ಪ ಅವರ ಬಳಿ ಮನವಿ ಮಾಡಿದ್ದರು. ಅಂತಿಮವಾಗಿ ಮಾನವೀಯತೆ ಆಧಾರದ ಮೇಲೆ ಮಹಾದೇವಪ್ಪ ಅವರು ಟಿಕೆಟ್ ರೇಸ್‌ನಿಂದ ಹಿಂದೆ ಸರಿದು ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್ ನೀಡಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದೀಗ ಜೆಡಿಎಸ್ ಸಹ ದರ್ಶನ್ ಧ್ರುವನಾರಾಯಣ ಅವರ ಬೆಂಬಲಿಸಲು ಮುಂದಾಗಿದೆ.

suddiyaana