ಲೋಕಸಭಾ ಚುನಾವಣೆಗೆ ಜೆಡಿಎಸ್ ಬಿಜೆಪಿ ಮೈತ್ರಿ ಮಂತ್ರ – 7 ಕ್ಷೇತ್ರಗಳಿಗೆ ಬೇಡಿಕೆ ಇಟ್ಟ ಹೆಚ್ ಡಿಕೆ

ಲೋಕಸಭಾ ಚುನಾವಣೆಗೆ ಜೆಡಿಎಸ್ ಬಿಜೆಪಿ ಮೈತ್ರಿ ಮಂತ್ರ – 7 ಕ್ಷೇತ್ರಗಳಿಗೆ ಬೇಡಿಕೆ ಇಟ್ಟ ಹೆಚ್ ಡಿಕೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬರುತ್ತದೆ. ಜೆಡಿಎಸ್ ಜೊತೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಅಂತಾನೇ ಹೇಳಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತದೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿದಿದೆ. ಇದೀಗ ಹೊಸ ರಾಜಕೀಯ ಬೆಳವಣಿಗೆಯಲ್ಲಿ ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಕೈ ಜೋಡಿಸಲಿವೆ ಎನ್ನಲಾಗಿದೆ. ಹಾಗಾದರೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಹಲವು ಸಂಸದರಿಗೆ ಟಿಕೆಟ್ ಕೈತಪ್ಪುವ ಲೆಕ್ಕಾಚಾರಗಳು ಶುರುವಾಗಿವೆ.

ಇದನ್ನೂ ಓದಿ : ಮೋದಿ ಮಣಿಸಲು ಬೆಂಗಳೂರಿನಲ್ಲಿ ವಿಪಕ್ಷಗಳ ರಣಕಹಳೆ – ಲೋಕಸಭಾ ಸಮರಕ್ಕೆ ಒಗ್ಗಟ್ಟಿನ ತಂತ್ರಗಾರಿಕೆ

2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿಯಾಗುವ ಸಾಧ್ಯತೆ ಇದೆ. ಸದ್ಯ ಪ್ರಾಥಮಿಕ ಹಂತದ ಮಾತುಕತೆ ಮುಗಿದಿದ್ದು ಈ ವೇಳೆ ಜೆಡಿಎಸ್‌ 7 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಎರಡು ಅಥವಾ ಮೂರು ದಿನದಲ್ಲಿ ಮೈತ್ರಿ ಬಗ್ಗೆ ಅಂತಿಮ ನಿರ್ಧಾರವಾಗುವ ನಿರೀಕ್ಷೆ ಇದೆ. ಬಿಜೆಪಿ ಜೊತೆ ಮೈತ್ರಿ ಅಂತಿಮವಾದರೆ 7 ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್‌ ಬೇಡಿಕೆ ಇಡಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಅಲ್ಲಿರುವ ಹಾಲಿ ಬಿಜೆಪಿ ಸಂಸದರಿಗೆ ಆತಂಕ ಶುರುವಾಗಿದ್ದು, ಕಮಲ ಪಕ್ಷದ ಹೈಕಮಾಂಡ್‌ ದಳಪತಿಗಳ ಬೇಡಿಕೆಗೆ ಒಪ್ಪಿಗೆ ಸೂಚಿಸಿದರೆ ನಮ್ಮ ಕಥೆ ಏನು ಎಂಬ ಚಿಂತೆಯಲ್ಲಿದ್ದಾರೆ.

ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದ 7 ಲೋಕಸಭಾ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್‌ ಮೈತ್ರಿಯ ಪ್ರಾಥಮಿಕ ಮಾತುಕತೆಯಲ್ಲಿ ಬಿಜೆಪಿ ನಾಯಕರ ಮುಂದಿಟ್ಟಿದೆ. ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಹಾಸನ ಕ್ಷೇತ್ರಗಳ ಮೇಲೆ ದಳಪತಿಗಳು ಕಣ್ಣಿಟ್ಟಿದ್ದಾರೆ. ಈ 7 ಕ್ಷೇತ್ರಗಳ ಪೈಕಿ ಸದ್ಯ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಸಂಸದರೇ ಇದ್ದು, ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಸಂಸದರಿದ್ದಾರೆ. ಉಳಿದ ಎರಡು ಕ್ಷೇತ್ರಗಳಲ್ಲಿ ತಲಾ ಒಂದರಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇದೆ.

ಐವರು ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಮತ್ತೊಂದು ಪಕ್ಷಕ್ಕೆ ಬಿಟ್ಟುಕೊಡಬೇಕಲ್ಲ ಎಂಬ ತಲೆಬಿಸಿಯಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ. ಜೆಡಿಎಸ್‌ ಬೇಡಿಕೆ ಸ್ವೀಕೃತವಾದರೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರ ಮುಂದಿನ ಕಥೆ ಏನು ಎಂಬುದು ಪ್ರಮುಖವಾಗಲಿದೆ. ಅದಲ್ಲದೇ, ಕೋಲಾರ ಸಂಸದ ಮುನಿಸ್ವಾಮಿ ಕೂಡ ಮತ್ತೊಂದು ಬಾರಿ ಸ್ಪರ್ಧೆಗೆ ಅಣಿಯಾಗಿದ್ದು, ಅವರ ಆಸೆ ಮೇಲೂ ಮೈತ್ರಿ ತಣ್ಣೀರೆರಚುತ್ತಾ ಎಂಬುದು ಸದ್ಯದ ಕುತೂಹಲ.

ಈಗಾಗಲೇ ಎರಡು ಬಾರಿ ಸಂಸದರಾಗಿರುವ ಪ್ರತಾಪ್‌ ಸಿಂಹ ಮತ್ತೊಂದು ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಇದೇ ನನ್ನ ಕೊನೆಯ ಚುನಾವಣೆ 2029ರವರೆಗೂ ಮಾತ್ರ ನಾನು ರಾಜಕೀಯದಲ್ಲಿ ಇರುತ್ತೇನೆ ಎಂದಿದ್ದರೂ ಕೂಡ ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಪ್ರತಾಪ್‌ ಸಿಂಹ ಅವರ ಸಂಸದ ಸ್ಥಾನಕ್ಕೆ ಕುತ್ತುಬರುವ ಸಾಧ್ಯತೆ ಇದೆ. ಹೀಗಿರುವಾಗ ಅವರು ಬಿಜೆಪಿ ನಡೆಯನ್ನು ಒಪ್ಪಿಕೊಂಡು ಸುಮ್ಮನಿರುತ್ತಾರಾ? ಅಥವಾ ಬೇರೆ ಕ್ಷೇತ್ರಕ್ಕೆ ವಲಸೆ ಹೋಗ್ತಾರಾ ಎಂಬುದು ಸದ್ಯದ ಪ್ರಶ್ನೆ.

ಹಾಗೇ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದಲೇ ಮಂಡ್ಯದಿಂದ ಸ್ಪರ್ಧಿಸಬೇಕು ಎಂಬ ಇರಾದೆಯಲ್ಲಿ ಇದ್ದಾರೆ. ಆದರೆ, ಹೆಚ್‌.ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಬಿಜೆಪಿ – ಜೆಡಿಎಸ್‌ ಮೈತ್ರಿಯಾದರೆ ಮಂಡ್ಯ ಜಾತ್ಯಾತೀತ ಜನತಾದಳದ ಪಾಲಾಗುವುದು ಖಂಡಿತ ಎಂದೇ ಹೇಳಲಾಗ್ತಿದೆ. ಇದರಿಂದ ಸುಮಲತಾ ಅಂಬರೀಶ್‌ ಅವರಿಗೆ ಬಿಜೆಪಿ ನಾಯಕರು ಬೇರೆ ಕ್ಷೇತ್ರ ನೀಡುವ ಸಾಧ್ಯತೆ ಇದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಆದರೆ, ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಎಲ್ಲಿಗೂ ಹೋಗಲ್ಲ ಎಂದು ಈಗಾಗಲೇ ಸುಮಲತಾ ಅಂಬರೀಶ್‌ ಹೇಳಿದ್ದು, ಬಿಜೆಪಿ ನಾಯಕರು ಜೆಡಿಎಸ್‌ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಸುಮಲತಾ ಅಂಬರೀಶ್‌ ಕಾಂಗ್ರೆಸ್‌ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಇಲ್ಲ ಎಂದರೆ ಮತ್ತೊಂದು ಬಾರಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಸದ್ಯ ಬಿಜೆಪಿಯ ಹಾಲಿ ಸಂಸದರಿದ್ದಾರೆ. ಕೋಲಾರದಿಂದ ಎಸ್‌.ಮುನಿಸ್ವಾಮಿ ಮತ್ತೊಂದು ಬಾರಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೋಲಾರದಲ್ಲಿ ಬಿಜೆಪಿ ಸಂಘಟನೆ ಕೂಡ ಸಕಾರಾತ್ಮಕವಾಗಿದ್ದು, ಪುನರಾಯ್ಕೆಯಾಗುವ ವಿಶ್ವಾಸದಲಿದ್ದಾರೆ. ಆದರೆ, ಬಿಜೆಪಿ – ಜೆಡಿಎಸ್‌ ಮೈತ್ರಿ ಮುನಿಸ್ವಾಮಿಗೂ ಕೂಡ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ. ಇನ್ನು, ತುಮಕೂರಲ್ಲಿ ಜಿಎಸ್‌ ಬಸವರಾಜು ಸಂಸದರಾಗಿದ್ದು, ವಯಸ್ಸಿನ ಕಾರಣದಿಂದ ಸ್ಪರ್ಧಿಸಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಇಲ್ಲಿ ಕೂಡ ಬಿಜೆಪಿ ಸಂಘಟನೆ ಉತ್ತಮವಾಗಿದ್ದು, ಹಲವು ಆಕಾಂಕ್ಷಿಗಳು ಮೈತ್ರಿ ಕಾರಣಕ್ಕೆ ಬೇಸರಗೊಳ್ಳುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆಎನ್‌ ಬಚ್ಚೇಗೌಡ ಸಂಸದರಾಗಿದ್ದು, ಈ ಬಾರಿ ಅವರಿಗೆ ರಾಜಕೀಯ ಕಾರಣದಿಂದ ಟಿಕೆಟ್‌ ಸಿಗುವುದು ಅನುಮಾನವಾಗಿದ್ದು, ಮಾಜಿ ಸಚಿವ ಡಾ ಕೆ ಸುಧಾಕರ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಿಜೆಪಿ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಇವರ ಭವಿಷ್ಯ ನಿರ್ಧಾರವಾಗಲಿದೆ.

ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ, ಎರಡು ಕ್ಷೇತ್ರದಲ್ಲಿ ಬಿಜೆಪಿ ಸಂಸದರಿಲ್ಲ. ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಯಾವುದೇ ರೀತಿಯ ತಕರಾರನ್ನು ಬಿಜೆಪಿ ನಾಯಕರು ಮಾಡುವುದಿಲ್ಲ. ಹಾಸನದಲ್ಲಿ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಸಂಸದರಾಗಿದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿಕೆ ಸುರೇಶ್‌ ಸಂಸದರು. ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಸಂಘಟನೆ ಅಷ್ಟಕ್ಕಷ್ಟೇ. ಆದ್ದರಿಂದ ಈ ಎರಡು ಕ್ಷೇತ್ರಗಳ ಬಗ್ಗೆ ಬಿಜೆಪಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿಯಿಂದ ಸಿ.ಪಿ ಯೋಗೀಶ್ವರ್‌ ಆಕಾಂಕ್ಷಿಯಾಗಿದ್ದು, ಬಿಜೆಪಿ – ಜೆಡಿಎಸ್‌ ಮೈತ್ರಿ ಹಾಗೂ ಸೀಟು ಹಂಚಿಕೆಯ ಮೇಲೆ ಅವರ ಕನಸು ನನಸಾಗುತ್ತೋ ಅಥವಾ ಕನಸಾಗಿಯೇ ಉಳಿಯುತ್ತೋ ಎಂಬುದು ಗೊತ್ತಾಗಲಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಬರೋಬ್ಬರಿ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದ ಮೂರು ಕ್ಷೇತ್ರಗಳಲ್ಲಿ ತಲಾ ಒಂದರಂತೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಅದರಲ್ಲು ವಿಧಾನಸಭಾ ಚುನಾವಣೆಗೂ ಮುನ್ನ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಕೂಡ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ, ಅವರು ಕೂಡ ಈಗ ಬಿಜೆಪಿಯ ಲೆಕ್ಕಕ್ಕೆ ಬರುತ್ತಿದ್ದಾರೆ. ಈ ರೀತಿ ಇರುವಾಗ 7 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಬಿಜೆಪಿಗೆ ನಷ್ಟ ಎಂಬುದು ರಾಜ್ಯ ನಾಯಕರ ಲೆಕ್ಕಾಚಾರ. ಅದರಲ್ಲೂ ಸಂಘಟನೆ ಬಲಗೊಂಡಿರುವ ಕ್ಷೇತ್ರಗಳನ್ನು ಮೈತ್ರಿ ಕಾರಣಕ್ಕೆ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಮತ್ತಷ್ಟು ನೆಲಕಚ್ಚುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈ ಮೈತ್ರಿಯಾದರೆ ಬಿಜೆಪಿಗಿಂತಲೂ ಜೆಡಿಎಸ್‌ಗೆ ಹೆಚ್ಚಿನ ಅನುಕೂಲ ಎಂದು ಹೇಳಲಾಗುತ್ತಿದೆ.

suddiyaana