ಮಾಜಿ ಸಂಸದೆ ಜಯಪ್ರದಾಗೆ ಮತ್ತೆ ಸಂಕಷ್ಟ – ನಟಿಯನ್ನು ಬಂಧಿಸಲು ಸೂಚಿಸಿದ ಕೋರ್ಟ್
ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಸದ್ಯ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಯಪ್ರದಾ ಅವರು ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದೆ. ಜೊತೆಗೆ ಅವರನ್ನು ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ನಟ, ಐಎಎಸ್ ಅಧಿಕಾರಿ ಶಿವರಾಮ್ ಅನಾರೋಗ್ಯ – ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಮನ್ಸ್ ನೀಡಿದ ಹೊರತಾಗಿಯೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಜಯಪ್ರದಾ ಅವರಿಗೆ ನ್ಯಾಯಾಲಯದಿಂದ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು. ಆದರೆ, ಇದಕ್ಕೆ ಅವರು ಉತ್ತರಿಸಿಲ್ಲ. ಮಂಗಳವಾರ ಕೂಡ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು. ಆದರೂ ಕೂಡ ಜಯಪ್ರದಾ ಅವರು ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ನೇರವಾಗಿ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿತು. ಒಂದು ತಂಡವನ್ನು ರಚಿಸಿ ಜಯಪ್ರದಾ ಅವರನ್ನು ಮಾರ್ಚ್ 6ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯವು ಸೂಚಿಸಿದೆ. ಈಗ ತಂಡವೊಂದು ಜಯಪ್ರದಾ ಅವರನ್ನು ಹುಡುಕಲು ಹೊರಟಿದೆ.