ಜಯ್ ಶಾಗೆ ICC ಅಧ್ಯಕ್ಷಗಿರಿ ಫಿಕ್ಸ್? – BCCI ಕಾರ್ಯದರ್ಶಿ ಸ್ಥಾನಕ್ಕೆ ರಿಸೈನ್?
ದುಬೈನಿಂದ ಮುಂಬೈಗೆ ಕಚೇರಿ ಶಿಫ್ಟ್?
ಟಿ-20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ಲೋಕದ ರಾಜನಾಗಿ ಮೆರೆಯುತ್ತಿದೆ. ಇದ್ರ ನಡುವೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವ್ರಿಗೆ ಸಂಬಂಧಿಸಿದ ಸುದ್ದಿಯೊಂದು ಭಾರೀ ಸದ್ದು ಮಾಡುತ್ತಿದೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂಬ ಸುದ್ದಿ ಹಲ್ಚಲ್ ಸೃಷ್ಟಿಸಿದೆ. ಅದಕ್ಕೆ ಕಾರಣ ಐಸಿಸಿ ಅಧ್ಯಕ್ಷ ಗದ್ದುಗೆ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋದು. ತಮ್ಮ ಅಧಿಕಾರಾವಧಿಯಲ್ಲಿ ಭಾರತ ಕ್ರಿಕೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಇದೀಗ ಐಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಐಸಿಸಿಯ ನೂತನ ಅಧ್ಯಕ್ಷರ ಆಯ್ಕೆ ಮುಂದಿನ ನವೆಂಬರ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಹುದ್ದೆಗೆ ಬಿಸಿಸಿಐನ ಪ್ರಸ್ತುತ ಕಾರ್ಯದರ್ಶಿ ಜಯ್ ಶಾ ಅವರನ್ನು ಪ್ರಬಲ ಸ್ಪರ್ಧಿ ಎಂದೇ ಪರಿಗಣಿಸಲಾಗಿದೆ.
ಇದನ್ನೂ ಓದಿ: IND Vs ZIM 3ನೇ ಮ್ಯಾಚ್ಗೆ ಶಾಕ್ – ಗಿಲ್ ಔಟ್.. ಸಂಜು ಕ್ಯಾಪ್ಟನ್?
ಐಸಿಸಿ ಪಟ್ಟಕ್ಕೆ ಜಯ್ ಶಾ?
ಜಯ್ ಶಾ 2009 ರಿಂದ ಕ್ರಿಕೆಟ್ ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಯ್ ಶಾ 2015ರಲ್ಲಿ ಬಿಸಿಸಿಐಗೆ ಸೇರಿದ ಬಳಿಕ ಸೆಪ್ಟೆಂಬರ್ 2019ರಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಜಯ್ ಶಾ ಅವರಿಗೆ ಪ್ರಸ್ತುತ 35 ವರ್ಷ. ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಲಿದ್ದಾರೆ. ಆದ್ರೆ ಐಸಿಸಿ ಅಧ್ಯಕ್ಷರ ಚುನಾವಣೆಗೆ ಜಯ್ ಶಾ ಸ್ಪರ್ಧಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಜಯ್ ಶಾ ಐಸಿಸಿ ಕಾರ್ಯಚಟುವಟಿಕೆಗಳಲ್ಲಿ ಬದಲಾವಣೆಗಳನ್ನು ತರಲು ಬಯಸಿದ್ದಾರೆ ಎಂದು ವರದಿಗಳಾಗಿವೆ. ಜಯ್ ಶಾ ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದರೆ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ. ಪ್ರಸ್ತುತ ಗ್ರೆಗ್ ಬಾರ್ಕ್ಲೇ ಅವರು 4 ವರ್ಷಗಳಿಂದ ಐಸಿಸಿಯ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಮತ್ತೊಂದು ಅವಧಿಗೂ ಗ್ರೆಗ್ ಬಾರ್ಕ್ಲೇ ಅರ್ಹರಾಗಿದ್ದಾರೆ. ಆದಾಗ್ಯೂ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ವರದಿಯಾಗುತ್ತಿದೆ. ಐಸಿಸಿ ತನ್ನ ವಾರ್ಷಿಕ ಸಮ್ಮೇಳನವನ್ನು ಜುಲೈನಲ್ಲಿ ಕೊಲಂಬೊದಲ್ಲಿ ನಡೆಸಲಿದೆ. ಈ ಸಮ್ಮೇಳನದಲ್ಲಿ ಮುಂದಿನ ಅಧ್ಯಕ್ಷರ ಚುನಾವಣೆಯ ಟೈಮ್‌ಲೈನ್ ಅನ್ನು ಅಂತಿಮಗೊಳಿಸೋ ಸಾಧ್ಯತೆ ಇದೆ. ಇನ್ನು ಐಸಿಸಿ ಅಧ್ಯಕ್ಷ ಸ್ಥಾನವನ್ನು ಜಯ್ ಶಾ ವಹಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಇನ್ನೂ ಕೂಡ ಫೈನಲ್ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನು ಜಯ್ ಶಾ ಐಸಿಸಿ ಅಧ್ಯಕ್ಷಗಾದಿಗೆ ಏರೋ ಮುನ್ನವೇ ಹಲವು ವಿಚಾರಗಳು ಸದ್ದು ಮಾಡ್ತಿವೆ. ಹಾಗೇನಾದ್ರೂ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅವರು, ಐಸಿಸಿ ಪ್ರಧಾನ ಕಚೇರಿಯನ್ನು ದುಬೈನಿಂದ ಮುಂಬೈಗೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಊಹಾಪೋಹಗಳು ಸುದ್ದಿಯಾಗಿವೆ. ಇನ್ನು ಐಸಿಸಿ, ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ಅವಧಿಯಿಂದ ಮೂರು ವರ್ಷಗಳ ಎರಡು ಅವಧಿಗೆ ಬದಲಾಯಿಸಲಾಗಿದೆ. ಶಾ ಆಯ್ಕೆಯಾದರೆ ಮೂರು ವರ್ಷಗಳ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ನಂತರ, ಅವರು ಬಿಸಿಸಿಐ ಸಂವಿಧಾನದ ಪ್ರಕಾರ 2028 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಲು ಅರ್ಹರಾಗಿರುತ್ತಾರೆ.
ಇನ್ನು ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಜಯ್ ಶಾ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿದ್ದಾರೆ. ಐಸಿಸಿ ಪುರುಷರ ವಿಶ್ವಕಪನ್ನು ಅವರು ಹೊಸ ಎತ್ತರಕ್ಕೆ ಮುನ್ನಡೆಸಿದ್ದಾರೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು. ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ರಚನೆ, ಒಲಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ, ಹೀಗೆ ಅನೇಕ ಕಾರ್ಯಗಳ ಮೂಲಕ ಕ್ರಿಕೆಟ್ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಎಸಿಸಿ ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್ ಶಾ ಅವರದ್ದಾಗಿದೆ. ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಜಯ್ ಶಾ ಹಲವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗಾಗಲೇ ಜಯ್ ಶಾ ಬಿಸಿಸಿಐ ಜತೆಗೆ ಐಸಿಸಿ ಸಮಿತಿಯಲ್ಲಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಮಾತ್ರವಲ್ಲದೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಎಸಿಸಿ ಅಧ್ಯಕ್ಷರೂ ಆಗಿದ್ದಾರೆ. ಇದೀಗ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಸ್ಪರ್ಧಿಸಿರಲಿಲ್ಲ. ಬಟ್ ಈ ಸಲ ಸ್ಪರ್ಧೆ ಪಕ್ಕಾ ಎನ್ನುತ್ತಿವೆ ಜಯ್ ಶಾ ಅವರ ಆಪ್ತ ಮೂಲಗಳು. ಹಾಗೇನಾದ್ರೂ ಐಸಿಸಿ ಅಧ್ಯಕ್ಷ ಪಟ್ಟಕ್ಕೇರಿದ್ರೆ ಜಯ್ ಶಾ ಮತ್ತೆ ಯಾವೆಲ್ಲಾ ಬದಲಾವಣೆ ಮಾಡ್ತಾರೆ ಅನ್ನೋ ಕುತೂಹಲ ಕೂಡ ಮನೆ ಮಾಡಿದೆ.