ವಿಶ್ವ ಕ್ರಿಕೆಟ್‌ ಗೆ ಜಯ್ ಶಾ ಬಾಸ್ – 35 ವರ್ಷಕ್ಕೆ ICC ಗದ್ದುಗೆ ಯಾಕೆ?
BCCI ಮತ್ತೆ ಬಿಜೆಪಿ ತೆಕ್ಕೆಗೆ

ವಿಶ್ವ ಕ್ರಿಕೆಟ್‌ ಗೆ ಜಯ್ ಶಾ ಬಾಸ್ – 35 ವರ್ಷಕ್ಕೆ ICC ಗದ್ದುಗೆ ಯಾಕೆ?BCCI ಮತ್ತೆ ಬಿಜೆಪಿ ತೆಕ್ಕೆಗೆ

ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ, ಇದೀಗ ಐಸಿಸಿ ಮುಖ್ಯಸ್ಥರಾಗಿ ಅವಿರೋಧವಾಗಿ ನೇಮಕವಾಗಿದ್ದಾರೆ. ಬಿಸಿಸಿಐ ಬಿಟ್ಟು ಐಸಿಸಿ ಅಧ್ಯಕ್ಷರಾಗುವ ಹಠ ಜಯ್ ಶಾ ಅವ್ರಿಗೆ ಯಾಕೆ ಬಂತು. ಕೇವಲ 35 ವರ್ಷಕ್ಕೆ ವಿಶ್ವ ಕ್ರಿಕೆಟ್ ನಲ್ಲಿ ದಾಖಲೆ ಬರೆಯಲು ಬಿಜೆಪಿ ಚಾಣಕ್ಯನ ಮಗ ಹೊರಟಿದ್ದೇಕೆ? ಇಲ್ಲಿ ಬಿಸಿಸಿಐ ಬಾಸ್ ಐಸಿಸಿ ಮೇಲೆ ಕಣ್ಣಿಡಲು ಕಾರಣ ಯಾಕೆ ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಕಬಡ್ಡಿ ಅಖಾಡದಲ್ಲಿ ಕೋಟಿ ವೀರರು – ಬೆಂಗಳೂರು ಬುಲ್ಸ್ ಸ್ಟ್ರೆಂಥ್ ಹೇಗಿದೆ?

ಬಿಜೆಪಿ ಚಾಣಕ್ಯ ಅಮಿತ್ ಶಾ ಮಗ ಜಯ್ ಶಾ ಅಂದುಕೊಂಡಿದ್ದನ್ನ ಸಾಧಿಸಿ ತೋರಿಸಿದ್ದಾರೆ. ಜಸ್ಟ್ 35ನೇ ವಯಸ್ಸಿಗೆ ವಿಶ್ವ ಕ್ರಿಕೆಟ್ ನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೌದು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿ ಜೈ ಶಾ ಆಯ್ಕೆಯಾಗಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಜಯ್ ಶಾ , ಇದೀಗ ಐಸಿಸಿ ಚುಕ್ಕಾಣಿ ಹಿಡಿಯುವ ಮೂಲಕ ವಿಶ್ವ ಕ್ರಿಕೆಟ್​ನಲ್ಲೂ ತನ್ನ ಪ್ರಭಾವ ಬೀರಲು ಮುಂದಾಗಿದ್ದಾರೆ. ಜಯ್ ಶಾ ಈ ಬಾರಿಯ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರಿಗೆ ಪ್ರತಿಸ್ಫರ್ಧಿಯಾಗಿ ಯಾರು ಸಹ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಅಧಿಕೃತವಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಜಯ್‌ ಶಾರನ್ನು ಬೆಂಬಲಿಸಿದ್ದು ವಿಶೇಷವಾಗಿತ್ತು. ಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಒಟ್ಟು 17 ಮತಗಳು ಇರಲಿದ್ದು, ಇದರಲ್ಲಿ ಬಹುತೇಕ ಎಲ್ಲರೂ ಶಾ ಪರವಾಗೇ ಇದ್ದರು ಎನ್ನಲಾಗಿದೆ.

ಈಗ ಎಲ್ಲರನ್ನೂ ಕಾಡುವ ಒಂದೇ ಪ್ರಶ್ನೆ ಅಂದರೆ, ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐನಿಂದ ಐಸಿಸಿ ಚುಕ್ಕಾಣಿ ಹಿಡಿಯಲು ಕಾರಣ ಏನು ಅನ್ನೋದು. ಅದಕ್ಕೆ ಕಾರಣ ಈಗ ನೋಡ್ತಾ ಹೋಗೋಣ. 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್‌ ಶಾ, 2025ರಲ್ಲಿ 6 ವರ್ಷ ಪೂರೈಸಬೇಕಿತ್ತು. ಬಿಸಿಸಿಐನ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಬಿಸಿಸಿಐನಲ್ಲಿ 9, ರಾಜ್ಯ ಕ್ರಿಕೆಟ್‌ ಮಂಡಳಿಗಳಲ್ಲಿ 9 ವರ್ಷ ಸೇರಿ ಒಟ್ಟು 18 ವರ್ಷ ಕಾಲ ಕ್ರಿಕೆಟ್‌ ಆಡಳಿತದಲ್ಲಿ ಸಕ್ರಿಯರಾಗಿರಬಹುದು. ಆದರೆ 6 ವರ್ಷ ಅವಧಿ ಪೂರೈಸಿದ ಬಳಿಕ ಕಡ್ಡಾಯವಾಗಿ 3 ವರ್ಷ ಕೂಲಿಂಗ್‌ ಆಫ್‌  ಅಂದರೆ ಅಧಿಕಾರದಿಂದ ದೂರ ಇರಬೇಕು. ಈ ಕಾರಣಕ್ಕಾಗಿಯೇ ಶಾ ಐಸಿಸಿ ಗದ್ದುಗೆ ಮೇಲೆ ಕಣ್ಣಿಟ್ಟಿದ್ದರು. ಸತತ 2 ಅವಧಿಗೆ ಅಂದರೆ 4 ವರ್ಷ ಕಾಲ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ 2028ರಲ್ಲಿ ಮತ್ತೆ ಬಿಸಿಸಿಐಗೆ ವಾಪಸಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಬಹುದು. ಆಗ ಒಟ್ಟು 4 ವರ್ಷ ಬಿಸಿಸಿಐ ಅಧ್ಯಕ್ಷರಾಗಿ ಶಾ ಅಧಿಕಾರ ನಡೆಸಬಹುದು.

2024ರ ಡಿಸೆಂಬರ್ 1ರಂದು ಜೈ ಶಾ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿಯಲಿದ್ದು, ಇದಾದ ಬಳಿಕ ಜಯ್ ಶಾ ವಿಶ್ವ ಕ್ರಿಕೆಟ್ ಮಂಡಳಿಯ ಗದ್ದುಗೆ ಏರಲಿದ್ದಾರೆ. ಅದರಂತೆ ಡಿಸೆಂಬರ್ 1 ರಿಂದ ಜಯ್ ಶಾ ಕಾರ್ಯಾರಂಭ ಮಾಡಲಿದ್ದಾರೆ. 35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ, ಐಸಿಸಿಯ ಅತ್ಯಂತ ಕಿರಿಯ ಚೇರ್ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತೆ. ಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಇದೀಗ ಈ ಹುದ್ದೆಗೇರಿದ ಐದನೇ ಭಾರತೀಯರಾಗಿ ಜಯ್ ಶಾ ಅಧಿಕಾರ ಸ್ವೀಕರಿಸಲಿದ್ದಾರೆ.

ಜಯ್ ಶಾ 2019 ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಜೈ ಶಾ ಅವರಿಂದ ತೆರವಾದ BCCI ಕಾರ್ಯದರ್ಶಿ ಹುದ್ದೆ ಮತ್ತೆ ಬಿಜೆಪಿ ತೆಕ್ಕೆಗೆ ಸೇರೋದು ಪಕ್ಕಾ ಆಗಿದೆ. ಬಿಜೆಪಿಯ ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ಈ ಹುದ್ದೆಗೆ ಆಯ್ಕೆಯಾಗಲಿದ್ದಾರೆ. ರೋಹನ್ ಜೇಟ್ಲಿ ಬಿಸಿಸಿಐ ಕಾರ್ಯದರ್ಶಿಯಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ರೋಹನ್ ಜೇಟ್ಲಿ ಕೂಡಾ ಅನುಭವಿ ಕ್ರೀಡಾ ಆಡಳಿತಗಾರರಲ್ಲಿ ಒಬ್ಬರಾಗಿದ್ದು, ಅವರು ಎರಡು ಬಾರಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಅತ್ತ ಐಸಿಸಿ ಇತ್ತ ಬಿಸಿಸಿಐ ಎರಡರಲ್ಲೂ ಬದಲಾವಣೆಯ ಗಾಳಿ ಬೀಸಲಿದೆ. ಜೊತೆಗೆ ವಿಶ್ವಕ್ರಿಕೆಟ್ ನಲ್ಲಿ ಭಾರತದ ಪ್ರಾಬಲ್ಯವೂ ಹೆಚ್ಚಾಗಲಿದೆ.

Shwetha M

Leave a Reply

Your email address will not be published. Required fields are marked *