ಇಂಗ್ಲೆಂಡ್ ಸರಣಿಯಿಂದ ರೋಹಿತ್, ವಿರಾಟ್ ಗೆ ರೆಸ್ಟ್ – ಫಾರ್ಮಲ್ಲಿ ಇಲ್ಲದವ್ರಿಗೆ ವಿಶ್ರಾಂತಿ ಏಕೆ?
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿರೋ ಟೀಂ ಇಂಡಿಯಾ ಜನವರಿ 3ರಿಂದ ಕೊನೇ ಪಂದ್ಯ ಆಡಲಿದೆ. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧದ ಸಿರೀಸ್ ಶುರುವಾಗಲಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳು ಇರಲಿವೆ. 5 ಟಿ-20 ಹಾಗೇ 3 ಏಕದಿನ ಪಂದ್ಯಗಳು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗ್ಳೇ ಟಿ-20 ವಿಶ್ವಕಪ್ಗೆ ಗುಡ್ ಬೈ ಹೇಳಿರೋದ್ರಿಂದ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯೋ ನಿರೀಕ್ಷೆ ಇತ್ತು. ಬಟ್ ಬಿಸಿಸಿಐ ಇಲ್ಲೂ ಟ್ವಿಸ್ಟ್ ಇಟ್ಟಿದೆ. ರೆಸ್ಟ್ ನೆಪದಲ್ಲಿ 1 ತಿಂಗಳು ರಜೆ ನೀಡ್ತಿದೆ.
ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸಿಸ್ ಸರಣಿಯಲ್ಲಿ ಫ್ಲ್ಯಾಪ್ ಆಗಿದ್ದಾರೆ. ಬ್ಯಾಟಿಂಗ್ ಕಂಪ್ಲೀಟ್ ಸೈಲೆಂಟ್ ಆಗಿದೆ. ಇದೀಗ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತೆ ಎನ್ನಲಾಗ್ತಿದೆ. ಬಟ್ ಈ ನಿರ್ಧಾರದಿಂದ ಭಾರತಕ್ಕೆ ಬಿಗ್ ಶಾಕ್ ಎದುರಾಗೋದಂತೂ ಗ್ಯಾರಂಟಿ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡ ಫೆಬ್ರವರಿಯಲ್ಲಿ ನಡೆಯಲಿದ್ದು, ಅದೂ ಸಹ ಏಕದಿನ ಮಾದರಿಯಲ್ಲಿ ಮಾತ್ರ ನಡೆಯಲಿದೆ. ಇಂಥಾ ಟೈಮಲ್ಲಿ ಟೀಂ ಇಂಡಿಯಾದ ಈ ಇಬ್ಬರು ದಿಗ್ಗಜರು ಯಾವುದೇ ಸಿದ್ಧತೆ ಇಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಡೈರೆಕ್ಟ್ ಕಣಕ್ಕಿಳಿದ್ರೆ ಆಡ್ತಾರಾ ಎನ್ನುವಂತ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ : ಭಾರತದ ಸೋಲಿಗೆ ಮಾಜಿ ಕ್ರಿಕೆಟಿಗರ ಅಸಮಾಧಾನ – ಮಾಡಿದ ತಪ್ಪನ್ನ ಮಾಡುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಮಾಜಿ ಆಟಗಾರರು
ಇಂಗ್ಲೆಂಡ್ ಸರಣಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳ ಮುಂಚೆ ನಡೆಯೋದ್ರಿಂದ ಐಸಿಸಿ ಟೂರ್ನಿಯ ತಯಾರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಒಂಥರಾ ಪ್ರಾಕ್ಟೀಸ್ ಮ್ಯಾಚ್ ಇದ್ದಂಗೆ ಅಂದ್ರೂ ತಪ್ಪಾಗಲ್ಲ. ಹೀಗಾಗಿ ಈ ಇಬ್ಬರೂ ಆಟಗಾರರು ಇಂಗ್ಲೆಂಡ್ ಸರಣಿಯಲ್ಲಿ ಆಡುವುದು ಅತ್ಯವಶ್ಯಕ. ಹೀಗಿದ್ರೂ ವಿಶ್ರಾಂತಿ ನೀಡುತ್ತಿರುವುದು ಆಡಳಿತ ಮಂಡಳಿಯ ಮೇಲೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಟೆಸ್ಟ್ ಮಾದರಿಯಲ್ಲಿ ಭಾರತ ತಂಡ ಸತತ ಸೋಲುಗಳನ್ನ ಅನುಭವಿಸ್ತಾ ಇದೆ. ಭಾರತದ ಸೋಲಿಗೆ ಈ ಇಬ್ಬರು ಲೆಜೆಂಡರಿ ಆಟಗಾರರ ವೈಫಲ್ಯ ಕೂಡ ಕಾರಣ ಇದೆ. ಹೀಗಿದ್ರೂ ರೆಸ್ಟ್ ಕೊಟ್ಟು ಏಕ್ಧಂ ಚಾಂಪಿಯನ್ಸ್ ಟ್ರೋಫಿಗೆ ಇಳಿಸೋದು ದೊಡ್ಡ ಹೊಡೆತ ಕೊಡೋ ಚಾನ್ಸಸ್ ಕೂಡ ಇದೆ.
ಇದೇ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವೆ ಮೊದಲ 5 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲ ಏಕದಿನ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದಲ್ಲಿ, ಎರಡನೇ ಏಕದಿನ ಫೆಬ್ರವರಿ 9 ರಂದು ಕಟಕ್‌ನಲ್ಲಿ ಮತ್ತು ಮೂರನೇ ಏಕದಿನ ಪಂದ್ಯವು ಜನವರಿ 12 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದರ ನಂತರ, ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಫೆಬ್ರವರಿ 20ರಿಂದ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾದ ಅಭಿಯಾನ ಆರಂಭವಾಗಲಿದೆ. ಸೋ ಅಲ್ಲಿಗೆ ಇಂಗ್ಲೆಂಡ್ ಸರಣಿ ಬಳಿಕ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಗೆ ಒಂದು ವಾರವಷ್ಟೇ ಟೈಂ ಸಿಗಲಿದೆ.
ಇನ್ನು 2024 ರಲ್ಲಿ ಟೀಂ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿದೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಏಕದಿನ ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿಲ್ಲ. ಮೊದಲ ಪಂದ್ಯ ಟೈ ಆಗಿದ್ದು, ನಂತರದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಶ್ರೀಲಂಕಾ ಸರಣಿಯನ್ನು ಗೆದ್ದುಕೊಂಡಿತು. ಈ ಸರಣಿಯ ಕೊನೆಯ ಪಂದ್ಯವನ್ನು 7 ಆಗಸ್ಟ್ 2024 ರಂದು ಆಡಲಾಯ್ತು, ಇದ್ರಲ್ಲಿ ರೋಹಿತ್ 35 ರನ್ ಮತ್ತು ವಿರಾಟ್ 20 ರನ್ ಗಳಿಸಿದ್ದರು. ಅಂದಿನಿಂದ ಟೀಂ ಇಂಡಿಯಾ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಹಾಗೂ ವಿರಾಟ್ ಯಾವುದೇ ಪೂರ್ವಸಿದ್ಧತೆ ಇಲ್ಲದೆ ನೇರವಾಗಿ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶಿಸಿದರೆ, ಫಾರ್ಮ್ ಕಂಡುಕೊಳ್ಳೋದೇ ದೊಡ್ಡ ಸಮಸ್ಯೆಯಾಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್ಸ್. ಹೀಗಿದ್ರೂ ಇಂಗ್ಲೆಂಡ್ ಸರಣಿಗೆ ಬುಮ್ರಾಗೆ ರೆಸ್ಟ್ ಕೊಡೋದು ಓಕೆ. ಬಟ್ ಕೊಹ್ಲಿ, ರೋಹಿತ್ ಗೆ ಯಾಕೆ ಅನ್ನೋ ಪ್ರಶ್ನೆಗಳು ಕೇಳಿ ಬರ್ತಿವೆ. ಯಾಕಂದ್ರೆ ಬುಮ್ರಾ ಯಾವತ್ತಿದ್ರೂ ಬ್ರಹ್ಮಾಸ್ತ್ರ. ಮೂರ್ನಾಲ್ಕು ತಿಂಗಳು ರೆಸ್ಟ್ ಮಾಡಿ ಫೀಲ್ಡಿಗಿಳಿದ್ರೂ ಡೈನಮೈಟ್ನಂತೆ ಸಿಡೀತಾರೆ. ಎದುರಾಳಿಗಳನ್ನ ಚೆಂಡಾಡ್ತಾರೆ. ಆಸಿಸ್ ಸರಣಿಯಲ್ಲೂ ಬೂಮಾಸ್ತ್ರ ಚೆನ್ನಾಗೇ ವರ್ಕೌಟ್ ಆಗ್ತಿದೆ. ಬಟ್ ಕೊಹ್ಲಿ ಮತ್ತು ರೋಹಿತ್ ಕಥೆ ಹೀಗಿಲ್ಲ. ಇಬ್ಬರೂ ಡಲ್ ಆಗಿದ್ದಾರೆ. ಹೀಗಾಗಿ ಈ ಇಬ್ಬರಿಗೆ ರೆಸ್ಟ್ ಬೇಡ ಎನ್ನೋ ವಾದವೂ ಇದೆ. ಇನ್ನು ಇದೆಲ್ಲದ್ರ ನಡುವೆ ಈ ಮೂವರು ಟೀಂ ಇಂಡಿಯಾದಿಂದ ಹೊರಗುಳಿದ್ರೆ ಏಕದಿನ ಪಂದ್ಯವನ್ನ ಮುನ್ನಡೆಸೋದು ಯಾರು ಅನ್ನೋ ಚರ್ಚೆಯೂ ನಡೀತಿದೆ.