ಬುಮ್ರಾ ಇನ್ನೆಷ್ಟು ಕಾಯ್ಬೇಕು? – ಜಸ್ಪ್ರೀತ್ ಸಂಭ್ರಮಕ್ಕೆ ಅಡ್ಡಿ ಯಾರು?
ದಾಖಲೆ ವೀರನಿಗೆ ಸಿಗುತ್ತಾ ಗಿಫ್ಟ್?
ಟೀಂ ಇಂಡಿಯಾದ ಟಾಪ್ ಟು ಬಾಟಮ್ ಪ್ಲೇಯರ್ಸ್ ಎಲ್ರೂ ಕಳಪೆ ಫಾರ್ಮ್ ನಿಂದ ಒದ್ದಾಡ್ತಿದ್ದಾರೆ. ಒಂದು ಮ್ಯಾಚ್ ಆಡಿದ್ರೆ ಇನ್ನೊಂದು ಪಂದ್ಯಕ್ಕೆ ಕೈ ಕೊಡ್ತಾರೆ. ಬಟ್ ಇಡೀ ಭಾರತ ಭರವಸೆ ಇಡುವಂತ ಒಬ್ಬನೇ ಒಬ್ಬ ಆಟಗಾರ ಅಂದ್ರೆ ಅದು ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ. ಬುಮ್ರಾ ಯಾವತ್ತೂ ನಿರಾಸೆ ಮಾಡೇ ಇಲ್ಲ. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಪತ್ಬಾಂಧವನಂತೆ ಕಾಪಾಡೋ ಬುಮ್ರಾಗೆ ಮಾತ್ರ ತನ್ನ ಗೆಲುವನ್ನ ಸಂಭ್ರಮಿಸೋ ಅವಕಾಶವೇ ಸಿಗ್ತಿಲ್ಲ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಮೊದಲ ಮಾತು – ಆರೋಗ್ಯ ಹೇಗಿದೆ?
ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ನಿಜಕ್ಕೂ ಭಾರತದ ಪಾಲಿಗೆ ಬೆಲೆ ಕಟ್ಟಲಾಗದ ಆಸ್ತಿ. ಅದಕ್ಕೇ ಬಿಸಿಸಿಐ ಕೂಡ ಅವ್ರನ್ನ ಅಷ್ಟೇ ಜೋಪಾನ ಮಾಡುತ್ತೆ. ತುಂಬಾ ಇಂಪಾರ್ಟೆಂಟ್ ಇರೋ ಮ್ಯಾಚ್ಗಳಲ್ಲಿ ಮಾತ್ರ ಕಣಕ್ಕಿಳಿಸುತ್ತೆ. ಬಟ್ ಆಡೋ ಎಲ್ಲಾ ಪಂದ್ಯಗಳಲ್ಲೂ ಬೆಸ್ಟ್ನಲ್ಲಿ ಬೆಸ್ಟ್ ಕೊಡೋ ಬುಮ್ರಾ ಇತರೆ ಆಟಗಾರರ ಫೇಲ್ಯೂರ್ನಿಂದಾಗಿ ತಾನೂ ಸೋಲನ್ನ ಅನುಭವಿಸಬೇಕಾಗಿದೆ.
ಜಗತ್ತಿನ ಶ್ರೇಷ್ಠ ಬೌಲರ್ ಗಳನ್ನೇ ಕಾಡಿದ ಜಸ್ಪ್ರೀತ್ ಬುಮ್ರಾ!
ಸದ್ಯ ವಿಶ್ವಕ್ರಿಕೆಟ್ ನ ಬೌಲಿಂಗ್ ವಿಭಾಗದಲ್ಲಿ ಅತ್ಯದ್ಭುತ ಫಾರ್ಮ್ನಲ್ಲಿರೋ ಜಸ್ಪ್ರೀತ್ ಬುಮ್ರಾ ಜಗತ್ತಿನ ಶ್ರೇಷ್ಠ ಬ್ಯಾಟರ್‌ಗಳನ್ನೇ ಬೆಂಡೆತ್ತಿದ್ದಾರೆ. ಬುಮ್ರಾ ಎದುರಲ್ಲಿ ಬ್ಯಾಟ್ ಬೀಸೋಕೂ ಹಿಂದೆ ಮುಂದೆ ನೋಡುತ್ತಾರೆ. ಆಸಿಸ್ ಸರಣಿಯಲ್ಲಿರೋ ಟೀಂ ಇಂಡಿಯಾ ಹೇಳಿಕೊಳ್ಳುವಂಥ ಪ್ರದರ್ಶನ ನೀಡದೇ ಇದ್ರೂ ಬುಮ್ರಾ ಬೌಲಿಂಗ್ನಲ್ಲಿ ಮಾತ್ರ ಎಳ್ಳಷ್ಟೂ ದೋಷ ಹುಡುಕೋಕೆ ಸಾಧ್ಯನೇ ಇಲ್ಲ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಬರೋಬ್ಬರಿ 30 ವಿಕೆಟ್ ಪಡೆದು ಮಿಂಚಿದ್ದಾರೆ. ಮಾತ್ರವಲ್ಲ ಕ್ಯಾಲೆಂಡರ್ ಇಯರ್ ಒಂದರಲ್ಲೇ ಟೆಸ್ಟ್‌ನಲ್ಲಿ 13 ಪಂದ್ಯಗಳಲ್ಲಿ ಬರೋಬ್ಬರಿ 71 ವಿಕೆಟ್ ಪಡೆದು ತನ್ನ ಬೌಲಿಂಗ್ ಸ್ಟ್ರೆಂಥ್ ಏನು ಅನ್ನೋದನ್ನ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಆಸಿಸ್ ಸರಣಿಯಲ್ಲಿ ಬುಮ್ರಾ ತೆಕ್ಕೆಗೆ 30 ವಿಕೆಟ್!
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಮಿಂಚುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಆಸೀಸ್ ಬ್ಯಾಟರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಭಾರತೀಯ ತಂಡ ಕೂಡ ಬುಮ್ರಾ ಬೌಲಿಂಗ್ ಗೆ ಬಂದ್ರೆ ವಿಕೆಟ್ ಪಕ್ಕಾ ಎನ್ನುವಷ್ಟ್ರರ ಮಟ್ಟಿಗೆ ಅವ್ರ ಮೇಲೆ ಭರವಸೆ ಇಡುತ್ತೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದ ಬುಮ್ರಾ ಅಡಿಲೇಡ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 4 ವಿಕೆಟ್, ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ್ರು.. ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 9 ವಿಕೆಟ್ ಉರುಳಿಸಿದ್ರು. ಈ ಮೂಲಕ 4 ಪಂದ್ಯಗಳ 8 ಇನ್ನಿಂಗ್ಸ್ ಗಳಿಂದ ಒಟ್ಟು 30 ವಿಕೆಟ್ಗಳನ್ನ ಕಿತ್ತಿದ್ದಾರೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಆವೃತ್ತಿಯೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ದಾಖಲೆ ಜಸ್ಪ್ರೀತ್ ಬುಮ್ರಾ ಹೆಸರಿಗೆ ಸೇರ್ಪಡೆಯಾಗಿದೆ. ಈ ದಾಖಲೆ ಆಸೀಸ್ ವೇಗಿ ಬೆನ್ ಹಿಲ್ಫೆನ್ಹಾಸ್ ಹೆಸರಿನಲ್ಲಿತ್ತು. 2011-12ರ ಸರಣಿಯಲ್ಲಿ 4 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಕಬಳಿಸಿದ್ದರು.
ಐಸಿಸಿ ಟೆಸ್ಟ್ ಕ್ರಿಕೆಟಿಗ ನಾಮನಿರ್ದೇಶನಗೊಂಡ ಬುಮ್ರಾ!
ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ 2024ರ ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇವರೊಂದಿಗೆ ಶ್ರೀಲಂಕಾದ ಆಲ್‌ರೌಂಡರ್ ಕಮಿಂಡು ಮೆಂಡಿಸ್, ಇಂಗ್ಲೆಂಡ್ ಆಟಗಾರರಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಈ ಪ್ರತಿಷ್ಠಿತ ಗೌರವಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಟೀಮ್ ಇಂಡಿಯಾ ಸ್ಟಾರ್ ಬುಮ್ರಾ ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದರು. ಅಲ್ಲಿಂದ ಹಿಂತಿರುಗಿ ನೋಡದ ಬುಮ್ರಾ 2024ರಲ್ಲಿ 13 ಟೆಸ್ಟ್‌ಗಳಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದ ಪರ ಕ್ಯಾಲೆಂಡರ್ ವರ್ಷದಲ್ಲಿ 71 ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ.
200 ವಿಕೆಟ್‌ಗಳ ಮೈಲಿಗಲ್ಲು ಸ್ಥಾಪಿಸಿದ ಭಾರತದ ವೇಗದ ಬೌಲರ್
ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಠರಾಗುತ್ತಿದ್ದಾರೆ. ಒಂದೆಡೆ ಟೀಂ ಇಂಡಿಯಾ ಎಡವುತ್ತಿದ್ದರೆ, ಬುಮ್ರಾ ಮಾತ್ರ ತಮ್ಮ ಸೆನ್ಸೇಷನಲ್ ಬೌಲಿಂಗ್ ಮೂಲಕ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಈಗಾಗಲೇ ಟೆಸ್ಟ್‌ನಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ಸ್ಥಾಪಿಸಿದ ಭಾರತದ ವೇಗದ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 30 ವಿಕೆಟ್ ಪಡೆದಿದ್ದಾರೆ. ಎರಡೂ ತಂಡದ ಯಾವುದೇ ಬೌಲರ್ ಬುಮ್ರಾಗೆ ಹತ್ತಿರವಾಗಿಲ್ಲ. 2ನೇ ಸ್ಥಾನದಲ್ಲಿರುವ ಕಮಿನ್ಸ್ 20 ವಿಕೆಟ್ ಪಡೆದಿದ್ದಾರೆ.
ಹೀಗೆ ಬುಮ್ರಾ ದಿನದಿನಕ್ಕೂ ಸ್ಟ್ರಾಂಗ್ ಆಗ್ತಿದ್ದಾರೆ. ಕ್ಯಾಪ್ಟನ್ ಆಗಿಯೂ ಭರವಸೆ ಮೂಡಿಸಿದ್ದಾರೆ. ಪರ್ತ್ ಟೆಸ್ಟ್ ನಲ್ಲಿ ಭಾರತವನ್ನ ಮುನ್ನಡೆಸಿದ್ದ ಬುಮ್ರಾ ತಂಡವನ್ನ ಗೆಲ್ಲಿಸಿದ್ರು. ಮೂರನೇ ಪಂದ್ಯದಲ್ಲಿ ಆಕಾಶ್ ದೀಪ್ ಜೊತೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆದಿ ತಂಡವನ್ನ ಫಾಲೋ ಆನ್ ನಿಂದ ತಪ್ಪಿಸಿದ್ರು. ಆ ಬಳಿಕ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.ಹೀಗೆ ಪ್ರತೀ ಹೆಜ್ಜೆಯಲ್ಲೂ ಬುಮ್ರಾ ಬೆಸ್ಟ್ ಪರ್ಫಾಮ್ ಮಾಡ್ತಿದ್ರೂ ತಂಡದ ಸೋಲಿನಿಂದಾಗಿ ತಮ್ಮ ಗೆಲುವನ್ನೂ ಸಂಭ್ರಮಿಸೋ ಅವಕಾಶ ಕಳ್ಕೊಂಡಿದ್ದಾರೆ. ಸಿಡ್ನಿ ಪಂದ್ಯದಲ್ಲಾದ್ರೂ ಗೆಲುವಿನ ಮೂಲಕ ಬುಮ್ರಾಗೆ ತಮ್ಮ ಪ್ರತಿಭೆಯನ್ನ ಸಂಭ್ರಮಿಸೋ ಚಾನ್ಸ್ ಕೊಡ್ತಾರಾ ಕಾದು ನೋಡ್ಬೇಕು.