ಕಮ್‌ಬ್ಯಾಕ್, ಗೋಬ್ಯಾಕ್ ಬುಮ್ರಾ – ಬಾಲ್ಯದ ನೋವು, ಗಾಯದ ಭೂತ
ಭಾರತದ ಬಲ, ದೇವರ ಮಗ ಜಸ್‌ಪ್ರೀತ್

ಕಮ್‌ಬ್ಯಾಕ್, ಗೋಬ್ಯಾಕ್ ಬುಮ್ರಾ – ಬಾಲ್ಯದ ನೋವು, ಗಾಯದ ಭೂತಭಾರತದ ಬಲ, ದೇವರ ಮಗ ಜಸ್‌ಪ್ರೀತ್

ಜಸ್ಪ್ರಿತ್ ಬುಮ್ರಾ.. ಟೀಂ ಇಂಡಿಯಾ ಬೌಲಿಂಗ್​ನ ಆಧಾರ ಸ್ತಂಭ. ಪದೇ ಪದೇ ಎದುರಾಗ್ತಿರೋ ಗಾಯದ ಸುಳಿಯಲ್ಲಿ ಸಿಲುಕಿರುವ ಬುಮ್ರಾ ಬೇಸತ್ತು ಹೋಗಿದ್ದರು. ಆದ್ರೆ, ದೇವರು ಎಂದೆಂದಿಗೂ ಬೂಮ್ರಾ ಕೈಬಿಡಲಿಲ್ಲ. ಭಾರತದ ಕೋಟಿ ಕೋಟಿ ಅಭಿಮಾನಿಗಳ ಹರಕೆ ಬೂಮ್ರಾಗೆ ಗೆಲುವಿನ ಶಕ್ತಿ ತಂದುಕೊಟ್ಟಿತ್ತು. ಬೂಮ್ರಾ ಅವರ ಬಾಲ್ಯದ ನೋವು, ಹತಾಶೆಯ ಬದುಕು, ಕ್ರಿಕೆಟ್‌ಗಾಗಿ ಬದುಕು ರೂಪಿಸಿಕೊಂಡ ರೀತಿ, ಅಮ್ಮ, ಅಕ್ಕನ ವಾತ್ಸಲ್ಯ, ಕಷ್ಟಕಾಲದಲ್ಲಿ ಅಮ್ಮನ ಸ್ನೇಹಿತೆಯ ಸಹಾಯ, ಪತ್ನಿಯ ಪ್ರೀತಿ ಮತ್ತು ಸ್ಪೂರ್ತಿ ಈಗ ಬೂಮ್ರಾ ನಂಬರ್ ಒನ್ ಬೌಲರ್ ಆಗಿ ಮೆರೆಯಲು ಸಾಧ್ಯವಾಗಿದೆ. ಅಷ್ಟೇ, ಅಲ್ಲ ಸ್ನೇಹಿತರೇ, ನೀವು ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ನೋಡಿರ್ತೀರಾ, ಇಡೀ ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾ ಗೆಲುವಿನ ದಡ ಸೇರಲು ಬೂಮ್ರಾ ಕೊಡುಗೆ ಕೂಡಾ ಸಾಕಷ್ಟಿತ್ತು. ಭಾರತದ ಬಲವಾಗಿರೋ ಬೂಮ್ರಾ ಬದುಕಲ್ಲಿ ಅನೇಕ ಕಹಿನೆನಪುಗಳಿವೆ, ಅನೇಕ ಕಷ್ಟ ಸಂಕಷ್ಟಗಳಿವೆ, ಇದೆಲ್ಲವನ್ನೂ ಮೀರಿ ಬೂಮ್ರಾ ಟೀಮ್ ಇಂಡಿಯಾದಲ್ಲಿ ಮ್ಯಾಜಿಕ್ ಮಾಡಿದ್ದೇ ಅಚ್ಚರಿ. ಬುಮ್ರಾ ಬದುಕಿನ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:HITಮ್ಯಾನ್ ಉತ್ತರಾಧಿಕಾರಿ ಯಾರು? -ಐವರ ರೇಸ್.. ಯಾರಿಗೆ ಕ್ಯಾಪ್ಟನ್ ಪಟ್ಟ?

ಜಸ್ಪ್ರೀತ್ ಬೂಮ್ರಾ. ಈ ಮ್ಯಾಜಿಕಲ್ ಬೌಲರ್ ಟೀಮ್ ಇಂಡಿಯಾದಲ್ಲಿ ಇದ್ರಂತೂ ಫ್ಯಾನ್ಸ್ ಯಾವಾಗ್ಲೂ ಟೆನ್ಷನ್ ಫ್ರೀ. ಅಂಥಾ ಮಾಂತ್ರಿಕ ಶಕ್ತಿ ಇರೋ ಜಗತ್ತಿನ ಏಕೈಕ ಬೌಲರ್ ಅಂದ್ರೆ ಅದು ಬೂಮ್ರಾ ಮಾತ್ರ. ಟಿ20 ವಿಶ್ವಕಪ್‌ನಲ್ಲಿ ಬೂಮ್ರಾ ಸರಣಿ ಶ್ರೇಷ್ಠ ಪುರಸ್ಕಾರ ಪಡೆದಿರೋದು ಕಡಿಮೆ ಸಾಧನೆಯಲ್ಲ. ಅದರ ಹಿಂದೆ ಸಾಕಷ್ಟು ಕನಸಿತ್ತು, ಸಾಕಷ್ಟು ನೋವಿತ್ತು, ಸಾಕಷ್ಟು ಶ್ರಮವಿತ್ತು. ಅದೆಲ್ಲವನ್ನೂ ಹೇಳೋ ಮೊದ್ಲು ಬೂಮ್ರಾ ಅವರ ಬಾಲ್ಯದ ದಿನಗಳನ್ನ ಹೇಳ್ತೇನೆ. ಬುಮ್ರಾ ಅವರ ತಂದೆ ತಾಯಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ರು. ಮೊದಲು ಮಗಳು ಹುಟ್ಟಿದ್ರಿಂದ ಸಹಜವಾಗಿಯೇ ಹೆತ್ತವರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಅಂದು ಡಿಸೆಂಬರ್ 6, 1993. ಪತ್ನಿ ದಲ್ಜಿತ್ ಮತ್ತು ಪತಿ ಜಸ್ಬೀರ್ ಜಗತ್ತನ್ನೇ ಗೆದ್ದ ಸಂಭ್ರಮದಲ್ಲಿದ್ದರು. ಯಾಕೆಂದರೆ ಅವರ ಮಡಿಲು ತುಂಬಿದ್ದು ಮುದ್ದು ಕಂದ ಬೂಮ್ರಾ. ಅಹಮದಾಬಾದ್‌ನಲ್ಲಿ ಪಾಲ್ಡಿ ಪ್ರದೇಶದ ಆಸ್ಪತ್ರೆಯಲ್ಲಿ ಜನಿಸಿದ ಬೂಮ್ರಾ, ಹುಟ್ಟಿದ ಸಂದರ್ಭದಲ್ಲಿ ತುಂಬಾ ತೆಳ್ಳಗಿದ್ದ. ಹೀಗಾಗಿ ವೈದ್ಯರು ಸ್ವಲ್ಪ ಸಮಯ ಆಸ್ಪತ್ರೆಯಲ್ಲೇ ಪುಟ್ಟ ಕಂದನ ಆರೈಕೆ ಮಾಡಿದ್ದರು.  ಅಕ್ಕ ಜೂಹಿಕಾಗೂ ಪುಟ್ಟ ತಮ್ಮ ಆಗಮನದಿಂದ ಖುಷಿಯಲ್ಲಿ ತೇಲಾಡುತ್ತಿದ್ದಳು. ಆದ್ರೆ ವಿಧಿಯಾಟ ಅಂದ್ರೆ ಪುಟ್ಟ ಬಾಲಕ ಬೂಮ್ರಾಗೆ ಕೇವಲ 5 ವರ್ಷ ಇರುವಾಗಲೇ ತಂದೆ ಜಸ್ಬೀರ್ ನಿಧನರಾದರು. ಎರಡು ಪುಟ್ಟ ಪುಟ್ಟ ಮಕ್ಕಳು, ತಾಯಿ ದಲ್ಜಿತ್ ಕಂಗಾಲಾಗಿ ಹೋಗಿದ್ರು. ಆಗ ದಲ್ಜಿತ್ ಜೊತೆ ನಿಂತಿದ್ದು ಸ್ನೇಹಿತೆ ದೀಪಲ್ ತ್ರಿವೇದಿ. ದೀಪಲ್ ಅವರೇ ಹೇಳಿಕೊಂಡಂತೆ ಬೂಮ್ರಾಗೆ ಓದು ಬರಹದಲ್ಲಿ ಎಂದಿಗೂ ಆಸಕ್ತಿ ಇರಲಿಲ್ಲ. ಯಾವಾಗಲೂ ಪ್ಲಾಸ್ಟಿಕ್ ಚೆಂಡಿನೊಂದಿಗೆ ಆಟವಾಡುತ್ತಿದ್ದ. ಬೂಮ್ರಾ ಸದಾ ಕ್ರಿಕೆಟರ್ ಆಗುವ ಕನಸು ಕಾಣುತ್ತಿದ್ದ. ಆದ್ರೆ, ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ ದಲ್ಜಿತ್ ಮತ್ತು ಅವರ ಸ್ನೇಹಿತೆ ದೀಪಲ್ ಬೂಮ್ರಾನ ಬೆಳೆಸಲು ಕಷ್ಟ ಪಡುವಂತಾಗಿತ್ತು. ತಾಯಿ ದಲ್ಜಿತ್ ದಿನಕ್ಕೆ ಕನಿಷ್ಠ 16-18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಬೂಮ್ರಾ ಸಹೋದರಿ ಜೂಹಿಕಾ ಸ್ವಭಾವವೇ ಬೇರೆ, ಈತನ ಸ್ವಭಾವವೇ ಬೇರೆ ಅಂತಾರೆ ದೀಪಲ್. ಅವನು ಸಹೋದರಿ ಜೂಹಿಕಾಳಂತೆ ಅಲ್ಲ. ತುಂಬಾ ನಾಚಿಕೆ ಸ್ವಭಾವದವನು. ಅದೇ ನಾಚಿಕೆ ಸ್ವಭಾದ ಹುಡುಗ ಈಗ ದಂತಕಥೆಯಾಗಿದ್ದಾನೆ. ಪ್ರತಿಯೊಬ್ಬ ಭಾರತೀಯನೂ ಅವನ ಬಗ್ಗೆ ಹೆಮ್ಮೆಪಡಬೇಕು ಮತ್ತು ಅವನಿಂದ ಕಲಿಯಬೇಕು. ಏಕೆಂದರೆ ಇಂದಿಗೂ ಆತ ತನ್ನ ನಮ್ರತೆ-ವಿನಯತೆಯನ್ನು ಉಳಿಸಿಕೊಂಡಿದ್ದಾನೆ ಅಂತಾ ದಲ್ಜಿತ್ ಸ್ನೇಹಿತೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೇವರು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಇದಕ್ಕೆ ಸಾಕ್ಷಿಯೇ ಜಸ್​ಪ್ರೀತ್ ಬುಮ್ರಾ ದಂತಕಥೆಯಾಗಿ ನಿಂತಿರೋದು ಎಂದು ಬಾಲ್ಯದಿಂದಲೂ ಅಮ್ಮನಂತೆ ನೋಡಿಕೊಂಡ ದೀಪಲ್ ಹೇಳಿದ್ದಾರೆ. ಈಗ ನನ್ನ ಮಗು ಜಸ್​ಪ್ರೀತ್​ಗೆ ಸ್ವಂತ ಮಗು ಅಂಗದ್ ಇದ್ದಾನೆ. ಸಹಜವಾಗಿ, ಜಸ್ಪ್ರೀತ್ ಅವರಿಗಿಂತ ಅಂಗದ್ ಹೆಚ್ಚು ಸುಂದರವಾಗಿದ್ದಾನೆ! ಜಸ್​ಪ್ರೀತ್ ಬುಮ್ರಾ ಬಗ್ಗೆ ಯೋಚಿಸಿ. ಅವನ ಹೋರಾಟಗಳು, ದೇವರು ಅವನಿಗೆ ಹೇಗೆ ಸಹಾಯ ಮಾಡಿದ್ದಾನೆ ಎಂಬುದು ತಿಳಿಯುತ್ತದೆ ಎಂದು ಅಭಿಮಾನಿಗಳ ಮನಮುಟ್ಟವಂತಾ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ ದೀಪಲ್ ‏‎ತ್ರಿವೇದಿ.

ದೀಪಲ್ ಹೇಳಿರುವಂತೆ ಇಷ್ಟು ಅದ್ಭುತ ಬೌಲರ್​ ಆಗುವ ಮೊದಲು ಬೂಮ್ರಾ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಹುಡುಗ, ಅದು ಕೂಡಾ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿರುವಾಗ ಕ್ರಿಕೆಟಿಗನಾಗುವ ಕನಸನ್ನು ನನಸಾಗಿಸುವುದು ಅಷ್ಟು ಸುಲಭವಾಗಿರಲಿಲ್ಲ. ತಾಯಿ ದಲ್ಜಿತ್ ಅಹಮದಾಬಾದ್‌ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಕ್ರಿಕೆಟಿಗನಾಗುವ ಬುಮ್ರಾ ಕನಸನ್ನು ನನಸು ಮಾಡುವಷ್ಟು ಆದಾಯವಿರಲಿಲ್ಲ. ತನ್ನ ಹೋರಾಟದ ದಿನಗಳ ಕಥೆಯನ್ನು ಒಮ್ಮೆ ಬುಮ್ರಾ ಅವರೇ ಹೇಳಿಕೊಂಡಿದ್ದಾರೆ. ನಮ್ಮ ತಂದೆಯನ್ನು ಕಳೆದುಕೊಂಡ ನಂತರ ನಾನು ತುಂಬಾ ಕಷ್ಟವನ್ನು ಅನುಭವಿಸಿದ್ದೇನೆ. ನನ್ನ ಬಳಿ ಒಂದು ಜೊತೆ ಶೂ ಮತ್ತು ಒಂದು ಜೊತೆ ಟಿ-ಶರ್ಟ್ ಇತ್ತು. ನಾನು ಪ್ರತಿ ದಿನ ಟೀ ಶರ್ಟ್ ಒಗೆದು ನಂತರ ಧರಿಸುತ್ತಿದ್ದೆ. ನೀವು ಮಗುವಾಗಿದ್ದಾಗ, ಕೆಲವೊಮ್ಮೆ ನೀವು ಇಂತಹ ಕಥೆಗಳನ್ನು ಕೇಳುತ್ತೀರಿ. ಆದರೆ ಇದು ಅನೇಕರಿಗೆ ನಿಜ ಜೀವನದಲ್ಲಿಯೂ ಸಂಭವಿಸಿರುತ್ತದೆ ಎಂದಿದ್ದರು. ಮುಂಬೈ ಇಂಡಿಯನ್ಸ್‌ನ ಸಾಕ್ಷ್ಯಚಿತ್ರದಲ್ಲಿ, ಮಾತಾನಡಿದ ಬುಮ್ರಾ ತಾಯಿ ದಲ್ಜಿತ್, ಮಗ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವುದನ್ನು ನೋಡಿದಾಗ, ನನ್ನ ಕಣ್ಣುಗಳಿಂದ ನೀರು ಬಂದಿತ್ತು ಎಂದು ಹೇಳಿದ್ದಾರೆ. ಬುಮ್ರಾ 2013ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ವಿದರ್ಭವನ್ನು 85 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿದರು. ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್​ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದರು. 2012-13ರಲ್ಲಿ ಮಹಾರಾಷ್ಟ್ರ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್‌ ಪರ ಟಿ20 ಕ್ರಕೆಟ್​ಗೆ ಪಾದಾರ್ಪಣೆ ಮಾಡಿದರು. ಆದರೆ 2016ರಲ್ಲಿ ಗಾಯಗೊಂಡಿದ್ದ ಮೊಹಮ್ಮದ್ ಶಮಿ ಬದಲಿಗೆ ಬುಮ್ರಾ ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ಈ ಮೂಲಕ 2016ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಅಂತರಾಷ್ಟ್ರೀಯ ODI ಮತ್ತು T20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ಅಂದರೆ 2016ರಲ್ಲಿ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಹೀಗೆ ಸಕ್ಸಸ್ ಜರ್ನಿ ಶುರುವಾಗುವಾಗ್ಲೇ ನಂಬರ್ ಒನ್ ಬೌಲರ್ ಬೂಮ್ರಾರನ್ನು ಕಾಡೋದು ಗಾಯದ ಸಮಸ್ಯೆ. ಕಳೆದ ಐದು ವರ್ಷಗಳಿಂದ ಜಸ್ಪ್ರಿತ್ ಬುಮ್ರಾರನ್ನ ಗಾಯದ ಸಮಸ್ಯೆ ಬೆನ್ನು ಬಿಡದ ಬೇತಾಳನಂತೆ ಕಾಡ್ತಿದೆ. 2018ರಲ್ಲಿ ಟಿ-20 ಸರಣಿಯನ್ನಾಡೋಕೆ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಕ್ಯಾಚ್ ಪಡೆಯುವ ವೇಳೆ ಬುಮ್ರಾ ಹೆಬ್ಬೆರಳಿಗೆ ಗಾಯವಾಗಿತ್ತು. ಮೂರು ವಾರಗಳ ಕಾಲ ಬುಮ್ರಾ ವಿಶ್ರಾಂತಿ ಪಡೆಯಬೇಕಾಯ್ತು. 2019ರಲ್ಲಿ ವೆಸ್ಟ್​​ಇಂಡೀಸ್ ಪ್ರವಾಸ ಕೈಗೊಂಡಿದ್ದ ವೇಳೆ ಜಸ್ಪ್ರಿತ್ ಬುಮ್ರಾ ಸೊಂಟದಲ್ಲಿ ಫ್ಯಾಕ್ಚರ್​​ ಆಗಿತ್ತು. ಇಂಗ್ಲೆಂಡ್​​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ್ರು. ಹೀಗಾಗಿ ಭಾರತದಲ್ಲೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಬುಮ್ರಾ ಹೊರಗುಳಿಯಬೇಕಾಯ್ತು. 2021ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಟೂರ್​​ ಕೈಗೊಂಡಿತ್ತು. ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್​ ಪಂದ್ಯದ ವೇಳೆ ಫೀಲ್ಡಿಂಗ್​ ಸಂದರ್ಭದಲ್ಲಿ ಬುಮ್ರಾ ಹೊಟ್ಟೆಗೆ ಗಾಯವಾಗಿತ್ತು. ಹೀಗಾಗಿ 4ನೇ ಟೆಸ್ಟ್​ ಪಂದ್ಯದಲ್ಲಿ ಆಡಿರಲಿಲ್ಲ. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಪ್ರಾಕ್ಟೀಸ್ ಮ್ಯಾಚ್ ಸಂದರ್ಭ ಇದ್ದಕ್ಕಿದ್ದಂತೆ ಬುಮ್ರಾ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬೆಂಗಳೂರಿನಲ್ಲಿ ಸ್ಕ್ಯಾನ್​ ಮಾಡಿಸಿಕೊಂಡಾಗ ಬುಮ್ರಾ ಬೆನ್ನಿಗೆ ಸಮಸ್ಯೆಯಾಗಿರೋದು ಖಚಿತವಾಗಿತ್ತು. ಬಳಿಕ ದಕ್ಷಿಣ ಆಫ್ರಿಕಾ ಸೀರಿಸ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್​​ನಿಂದಲೂ ಬುಮ್ರಾ ಔಟ್ ಆಗಿದ್ರು. ವರ್ಲ್ಡ್​​ಕಪ್​ನಲ್ಲಿ ಕೂಡ ಬುಮ್ರಾ ಆಡಿರಲಿಲ್ಲ. ಜಸ್ಪ್ರಿತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿ 8 ವರ್ಷಗಳಾಗಿವೆ. ಆದ್ರೆ ಕಳೆದ ಐದು ವರ್ಷಗಳಿಂದ ಬುಮ್ರಾ ಒಂದಲ್ಲಾ ಒಂದು ಗಾಯದ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಬುಮ್ರಾ ಸ್ಟೈಲ್​​ನಲ್ಲಿ ಬೌಲಿಂಗ್​​ ಮಾಡುವ ವೇಳೆ ಅವರ ಕಾಲು ಮತ್ತು ಬೆನ್ನಿನ ಭಾಗಕ್ಕೆ ಹೆಚ್ಚು ಒತ್ತಡ ಬೀಳುತ್ತೆ. ಬುಮ್ರಾ ತೆಗೆದುಕೊಳ್ಳುವ ರನ್​ ​​ಅಪ್​ ಕೂಡ ತುಂಬಾ ಶಾರ್ಟ್. ಉಳಿದ ಪೇಸ್​​ ಬೌಲರ್​ಗಳಂತೆ ಲಾಂಗ್​​ ರನ್ ​ಅಪ್​ ಬುಮ್ರಾ ಹೊಂದಿಲ್ಲ. ಶಾರ್ಟ್​​ ರನ್ನಿಂಗ್​​ನಲ್ಲೇ ಬಂದು ಗಂಟೆಗೆ 145 ಕಿಲೋ ಮೀಟರ್​​ ​​ವೇಗದಲ್ಲಿ ಬೌಲ್ ಮಾಡ್ತಾರೆ. ಬುಮ್ರಾ ಬೌಲಿಂಗ್​ನ ಮೈನ್ ಸ್ಟ್ರೆಂಥ್ ಇರೋದೆ ಶೋಲ್ಡರ್ ಮೇಲೆ. ಸ್ಪೀಡ್ ಜನರೇಟ್ ಮಾಡೋದೆ ಶೋಲ್ಡರ್ ಮೂಲಕ. ಹೀಗಾಗಿ ಬುಮ್ರಾಗೆ ಯಾವ ರೀತಿ ತಮ್ಮ ಬೌಲಿಂಗ್ ಆ್ಯಕ್ಷನ್ ವರವಾಗಿತ್ತೋ, ಅದೇ ಬೌಲಿಂಗ್ ಆ್ಯಕ್ಷನ್​ ಒಂಥರಾ ಶಾಪವಾಗಿಯೂ ಪರಿಣಮಿಸಿದೆ.  ಬೌಲಿಂಗ್​ ಆ್ಯಕ್ಷನ್​​ನಿಂದಾಗಿಯೇ ಬುಮ್ರಾಗೆ ಹೆಚ್ಚು ಇಂಜ್ಯೂರಿಯಾಗ್ತಿದೆ. ಹಾಗಂತಾ ಜಸ್ಪ್ರಿತ್ ಬುಮ್ರಾ ತಮ್ಮ ಬೌಲಿಂಗ್​ ಆ್ಯಕ್ಷನ್​​ನಲ್ಲಿ ಇನ್ನೇನು ಬದಲಾವಣೆ ಮಾಡೋಕೆ ಆಗೋದಿಲ್ಲ. ಆದ್ರೆ, ತಮ್ಮ ಫಿಟ್ನೆಸ್​ ಬಗ್ಗೆ ಹೆಚ್ಚು ಗಮನವಹಿಸಬೇಕಾದ ಅವಶ್ಯಕತೆ ಇದೆ.

ಇನ್ನು ಬುಮ್ರಾ ಮಾಡೆಲ್ ಹಾಗೇ ಸ್ಪೋರ್ಟ್ ಜರ್ನಲಿಸ್ಟ್ ಆಗಿರುವ ಸಂಜನಾ ಗಣೇಶನ್ ಅವ್ರನ್ನ ಮದುವೆಯಾಗಿದ್ದಾರೆ. ಇವರಿಬ್ಬರ ಲವ್‌ ಸ್ಟೋರಿ ಸಖತ್ ಇಂಟರೆಸ್ಟಿಂಗ್‌. 2013-14ನೇ ಸಾಲಿನ ಐಪಿಎಲ್‌ ಮ್ಯಾಚ್‌ ವೇಳೆ ಬುರ್ಮಾ ಅನ್ನೋ ಎನರ್ಜಿಟಿಕ್‌ ಫಾಸ್ಟ್ ಬೌಲರ್‌ ತಮ್ಮ ಆಕರ್ಷಕ ಬೌಲಿಂಗ್‌ನಿಂದ ಜಗತ್ತಿನ ಗಮನ ಸೆಳೆಯುತ್ತಾರೆ. ಅದೇ ವೇಳೆ ಮಿಸ್‌ ಇಂಡಿಯಾ ಫೈನಲಿಸ್ಟ್ ಆಗಿದ್ದ ಯುವ ಸ್ಪೋರ್ಟ್ಸ್ ಜರ್ನಲಿಸ್ಟ್ ತಮ್ಮ ಡೇರಿಂಗ್‌ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಇಬ್ಬರ ಮೊದಲ ಭೇಟಿ ನಡೆದದ್ದು ಇಲ್ಲೇ. ಇದಾಗಿ ಕೆಲ ವರ್ಷ ಇಬ್ಬರ ನಡುವೆ ಜಸ್ಟ್ ಪರಿಚಯವಷ್ಟೇ ಇರುತ್ತದೆ. ಆದರೆ ಪರಿಚಯ ಸ್ನೇಹಕ್ಕೆ ತಿರುಗಿದ್ದು 2019ರಲ್ಲಿ. ಮುಂದೆ ಈ ಸ್ನೇಹ ಪ್ರೇಮವಾಗಿ ಅರಳಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. ಈ ಪ್ರೇಮಿಗಳು 2021ರಲ್ಲಿ ಪಂಜಾಬಿ ಸಂಪ್ರದಾಯದಂತೆ ಸಪ್ತಪದಿ ತುಳಿಯುತ್ತಾರೆ. ಈಗ ಇವರಿಬ್ಬರ ಪ್ರೇಮ ಬದುಕಿನಲ್ಲಿ ಮಗ ಅಂಗದ್ ಪ್ರವೇಶವಾಗಿದೆ. ಒಂದ್ಕಡೆ ಸ್ಟಾರ್ ಸ್ಪೋರ್ಟ್ ಌಂಕರ್ ಆಗಿ ಸಂಜನಾ ಫೀಲ್ಡಿಗಿಳಿದ್ರೆ ಟಿಂ ಇಂಡಿಯಾ ಪರ ಬುಮ್ರಾ ಕಣಕ್ಕಿಳಿಯುತ್ತಾರೆ. ಇಬ್ಬರೂ ಸತಿ ಪತಿ ಅನ್ನೋದನ್ನು ಮರೆತು ತಮ್ಮ ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಈ ಬಾರಿಯ ವರ್ಲ್ಡ್‌ ಕಪ್‌ ಗೆದ್ದ ಬಳಿಕವೂ ಬುಮ್ರಾ ತಮ್ಮ ಪತ್ನಿ ಸಂಜನ ಪ್ರಶ್ನೆಗೆ ಸಲೀಸಾಗಿಯೇ ಉತ್ತರಿಸಿದ್ರು. ಎಮೋಷನ್ಸ್ ಕಂಟ್ರೋಲ್ ಮಾಡೋಕೆ ಆಗದೆ ಕೊನೆಯಲ್ಲಿ ಹಗ್ ಮಾಡುವ ಮೂಲಕ ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ರು. ಭಾರತದ ನಂಬರ್ 1 ಬೌಲರ್ ಆಗಿರೋ ಬುಮ್ರಾ ರಿಯಲ್ ಲೈಫ್ ನಿಜಕ್ಕೂ ಕೂಡ ಎಷ್ಟೋ ಜನರ ಪಾಲಿಗೆ ಸ್ಪೂರ್ತಿಯಾಗಿದೆ.

Shwetha M

Leave a Reply

Your email address will not be published. Required fields are marked *