ಬುಮ್ರಾಗೆ ಬೇಕಂತೆ BIG ಬ್ರೇಕ್! – ಭುವಿ ಬೆನ್ನಿಗೆ ಶಾಸ್ತ್ರಿ ಸಪೋರ್ಟ್
RCB ಪ್ಲೇಯರ್‌ಗೆ ಖಾಯಂ ಸ್ಥಾನ?

ಬುಮ್ರಾಗೆ ಬೇಕಂತೆ BIG ಬ್ರೇಕ್!  – ಭುವಿ ಬೆನ್ನಿಗೆ ಶಾಸ್ತ್ರಿ ಸಪೋರ್ಟ್RCB ಪ್ಲೇಯರ್‌ಗೆ ಖಾಯಂ ಸ್ಥಾನ?

ಒಂದೆಡೆ ಯಾರ್ಕರ್ ಕಿಂಗ್ ಜಸ್‌ಪ್ರೀತ್ ಬುಮ್ರಾ ಅವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಬಾರದು ಎಂಬ ಮಾತು ಕೇಳಿಬರುತ್ತಿದೆ. ಮತ್ತೊಂದೆಡೆ, ನಾಲ್ಕು ವರ್ಷಗಳ ಬಳಿಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಲ್ಲಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರ ಅಭಿಪ್ರಾಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹಾಗಾದರೆ, ಬುಮ್ರಾಗೆ ವಿಶ್ರಾಂತಿ ನೀಡಬೇಕಾ? ಭುವಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಸಿಗುತ್ತಾ? ಅನ್ನೋದ್ದನ್ನ ನೋಡ್ತಾ ಹೋಗೋಣ ಬನ್ನಿ.

ಭಾರತೀಯ ಕ್ರಿಕೆಟ್ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಪಾತ್ರ ಎಷ್ಟು ಮಹತ್ವದ್ದು ಅನ್ನೋದು ಎಲ್ಲರಿಗೂ ಗೊತ್ತು. ಹೊಸ ಚೆಂಡಿನಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಸಾಮರ್ಥ್ಯ, ಡೆತ್ ಓವರ್‌ಗಳಲ್ಲಿ ಯಾರ್ಕರ್‌ಗಳ ಮೂಲಕ ರನ್ ನಿಯಂತ್ರಿಸುವ ಕಲೆ ಮತ್ತು ಒತ್ತಡದ ಸಂದರ್ಭಗಳಲ್ಲಿ ವಿಕೆಟ್ ಕಬಳಿಸುವ ಚಾಣಾಕ್ಷ ತನಕ್ಕೆ ಬುಮ್ರಾ ವಿಶೇಷ ಬೌಲರ್ ಆಗಿದ್ದಾರೆ. ಆದರೆ, ಟೆಸ್ಟ್, ಏಕದಿನ ಮತ್ತು ಟಿ20 ಹೀಗೆ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡುವುದು ವೇಗದ ಬೌಲರ್‌ಗಳಿಗೆ ದೊಡ್ಡ ಸವಾಲು.

ವೇಗದ ಬೌಲರ್‌ಗಳ ಮೇಲೆ ಹೆಚ್ಚುವರಿ ಒತ್ತಡ ಬಿದ್ದರೆ ಗಾಯದ ಅಪಾಯವೂ ಹೆಚ್ಚಾಗಬಹುದು. ಅದರಲ್ಲೂ ಬುಮ್ರಾ ಅವರಂತಹ ಪ್ರಮುಖ ಆಟಗಾರರನ್ನು ದೊಡ್ಡ ಟೂರ್ನಿಗಳಿಗೆ, ಹಾಗೇ ಮುಂದಿನ ODI ವಿಶ್ವಕಪ್ ದೃಷ್ಟಿಯಿಂದ ಸಂಪೂರ್ಣ ಫಿಟ್ ಆಗಿ ಉಳಿಸಿಕೊಳ್ಳುವುದು ಟೀಂ ಇಂಡಿಯಾಕ್ಕೆ ಅತ್ಯಂತ ಮುಖ್ಯ. ಹೀಗಾಗಿ, ಯಾವ ಸರಣಿಯಲ್ಲಿ ಆಡಿಸಬೇಕು, ಯಾವ ಪಂದ್ಯದಲ್ಲಿ ವಿಶ್ರಾಂತಿ ನೀಡಬೇಕು ಎನ್ನುವ ವಿಚಾರದಲ್ಲಿ ಟೀಂ ಮ್ಯಾನೇಜ್‌ಮೆಂಟ್ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಬುಮ್ರಾಗೆ ವಿಶ್ರಾಂತಿ ನೀಡುವುದು ಅವರನ್ನು ತಂಡದಿಂದ ದೂರ ಇಡುವುದಲ್ಲ; ಬದಲಾಗಿ, ಪ್ರಮುಖ ಪಂದ್ಯಗಳಿಗೆ ಸಿದ್ಧವಾಗಿಡುವ ತಂತವಾಬೇಕು.

ಇದನ್ನೂ ಓದಿ: ನೌಟಂಕಿ ನಖ್ವಿಗಿಲ್ಲ ಉಳಿಗಾಲ! ACC ಅಧ್ಯಕ್ಷ ಸ್ಥಾನದಿಂದ ಔಟ್?

ಇನ್ನು ಮತ್ತೊಂದೆಡೆ, ಭುವನೇಶ್ವರ್ ಕುಮಾರ್ ಅವರ ಕಂಬ್ಯಾಕ್ ವಿಚಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸ್ವಿಂಗ್ ಬೌಲಿಂಗ್‌ನಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ಭುವಿ, ಹೊಸ ಚೆಂಡಿನ ಮೂಲಕ ಆರಂಭಿಕ ವಿಕೆಟ್ ಪಡೆಯುವುದರಲ್ಲಿ ಪರಿಣತಿ ಹೊಂದಿದ್ದಾರೆ. ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಅವರ ಕೌಶಲ್ಯ ಭಾರತಕ್ಕೆ ಹಲವು ಪಂದ್ಯಗಳಲ್ಲಿ ನೆರವಾಗಿದೆ.ಭುವಿಯ ಟಿ20 ಕ್ರಿಕೆಟ್‌ನಲ್ಲಿ ಅನುಭವಕ್ಕೆ ಬಹಳ ಮಹತ್ವವಿದೆ. ವಿಶೇಷವಾಗಿ ಪವರ್‌ಪ್ಲೇ ಮತ್ತು ಕೊನೆಯ ಓವರ್‌ಗಳಲ್ಲಿ ರನ್ ನಿಯಂತ್ರಿಸುವ ಬೌಲರ್‌ಗಳು ತಂಡಕ್ಕೆ ದೊಡ್ಡ ಆಸ್ತಿಯಾಗುತ್ತಾರೆ. ಭುವನೇಶ್ವರ್ ತಮ್ಮ ಹಳೆಯ ಲಯವನ್ನು ಮರಳಿ ಪಡೆದು ಫಿಟ್‌ನೆಸ್ ಸಾಬೀತುಪಡಿಸಿದರೆ, ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಆಯ್ಕೆ ಸಿಗಬಹುದು. ಆದರೆ, ಅಂತಿಮವಾಗಿ ಅವರ ಪ್ರದರ್ಶನದ ಮೇಲೆ ಎಲ್ಲಾ ನಿಂತಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ಚೆನ್ನಾಗಿ ಆಡಿದ್ರೆ ಟೀಂ ಇಂಡಿಯಾದಲ್ಲಿ ಭುವಿ ಖಾಯಂ ಸ್ಥಾನ ಹೊಂದುವುದು ಫಿಕ್ಸ್ ಆಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ.

ಈ ಟೈಂನಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ಮಾತು ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಹಿರಿಯ ಆಟಗಾರರ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಮತ್ತು ಗಾಯದ ಅಪಾಯವನ್ನು ಕಡಿಮೆ ಮಾಡುವುದು ಆಧುನಿಕ ಕ್ರಿಕೆಟ್‌ನಲ್ಲಿ ಬಹಳ ಮುಖ್ಯ. ಒಬ್ಬ ಆಟಗಾರನ ಮೇಲೆ ಎಲ್ಲ ಮಾದರಿಗಳಲ್ಲೂ ನಿರಂತರವಾಗಿ ಅವಲಂಬಿತರಾಗುವ ಬದಲು, ಸೂಕ್ತ ಆಟಗಾರರನ್ನು ಸೂಕ್ತ ಸಮಯದಲ್ಲಿ ಬಳಸಿಕೊಳ್ಳುವ ಪ್ಲ್ಯಾನ್ ತಂಡಕ್ಕೆ ಅಗತ್ಯವಾಗಿದೆ ಎಂದಿದ್ದಾರೆ. ಅಂದ್ರೆ ಭುವನೇಶ್ವರ್ ಕುಮಾರ್‌ರನ್ನ ಸರಿಯಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.

2027 ರ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ಜಸ್ಪ್ರೀತ್ ಬುಮ್ರಾ ಅವರ ಕೆಲಸದ ಹೊರೆಯನ್ನು ಭಾರತ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಒತ್ತಿ ಹೇಳಿದ್ದಾರೆ. ವಿಶ್ವಕಪ್ ವರೆಗೆ ಅವರು ಮೂರು ಸ್ವರೂಪಗಳ ಕ್ರಿಕೆಟ್ ಆಡಬಾರದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.  ಬುಮ್ರಾ ಹೆಚ್ಚಾಗಿ ಟೆಸ್ಟ್ ಕ್ರಿಕೆಟ್‌ನತ್ತ ಗಮನಹರಿಸಬೇಕು, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಆಗಾಗ ಒಂದೊಂದು ಪಂದ್ಯ ಮಾತ್ರ ಆಡಬೇಕು ಎಂದಿದ್ದಾರೆ.

ಒಟ್ಟಿನಲ್ಲಿ, ಟೀಂ ಇಂಡಿಯಾ ಮುಂದೆ ಈಗ ಎರಡು ಪ್ರಮುಖ ಸವಾಲುಗಳಿವೆ. ಬುಮ್ರಾ ಅವರ ಫಿಟ್‌ನೆಸ್ ಮತ್ತು ಸಾಮರ್ಥ್ಯವನ್ನು ಸರಿಯಾಗಿ ನಿರ್ವಹಿಸುವುದು ಒಂದು ಕಡೆಯಾದರೆ, ಭುವನೇಶ್ವರ್ ಅವರಂತಹ ಅನುಭವಿ ಬೌಲರ್‌ಗಳಿಗೆ ಅವಕಾಶ ನೀಡುವ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವುದು ಮತ್ತೊಂದು ಸವಾಲು. ನ್ಯೂಜಿಲೆಂಡ್ ಸರಣಿಯ ಹಿನ್ನೆಲೆಯಲ್ಲಿ ಈ ಚರ್ಚೆ ಇನ್ನಷ್ಟು ಕುತೂಹಲ ಮೂಡಿಸಿದೆ.

Kishor KV

Leave a Reply

Your email address will not be published. Required fields are marked *