ಏಡಿ ಖಾದ್ಯ ತಿಂದ ಬಳಿಕ ಮಹಿಳೆಗೆ ಕಾದಿತ್ತು ಶಾಕ್! – ಗ್ರಾಹಕಿ ಪೊಲೀಸರಿಗೆ ಕರೆ ಮಾಡಿದ್ದೇಕೆ?
ಮಹಿಳೆಯೊಬ್ಬಳು ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದಾಳೆ. ಈ ವೇಳೆ ಆಕೆ “ಚಿಲ್ಲಿ ಕ್ರ್ಯಾಬ್” ಆರ್ಡರ್ ಮಾಡಿದ್ದಾಳೆ. ಆಕೆ ಆರ್ಡರ್ ಮಾಡಿದ ಆಹಾರವನ್ನು ತಿಂದ ಬಳಿಕ ರೆಸ್ಟೋರೆಂಟ್ ಸಿಬ್ಬಂದಿ ಬಳಿ ಬಿಲ್ ಕೇಳಿದ್ದಾಳೆ. ಫುಡ್ ಬಿಲ್ ನೋಡಿ ಆಕೆ ಬೆಚ್ಚಿಬಿದ್ದಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿರುವ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?
ಜಪಾನ್‌ನ ಮಹಿಳಾ ಪ್ರವಾಸಿ ಜುಂಕೊ ಶಿನ್ಬಾ ಎಂಬಾಕೆ ಕೆಲದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಸಿಂಗಾಪುರದ ರೆಸ್ಟೊರೆಂಟ್ “ಸೀಫುಡ್ ಪ್ಯಾರಡೈಸ್” ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಅಲ್ಲಿ “ಚಿಲ್ಲಿ ಕ್ರ್ಯಾಬ್” ಆರ್ಡರ್ ಮಾಡಿದ್ದಾರೆ. ಖಾದ್ಯ ಸೇವಿಸಿದ ಬಳಿಕ ಹೋಟೆಲ್ ಸಿಬ್ಬಂದಿ ಮಹಿಳೆಗೆ ಆಹಾರದ ಬಿಲ್ ನೀಡಿದ್ದಾನೆ ಇದನ್ನು ನೋಡಿದ ಮಹಿಳೆಗೆ ಶಾಕ್ ಆಗಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ನಿಧನ..! – ಟ್ರಂಪ್ ಪುತ್ರನ ಟ್ವಿಟರ್ ಖಾತೆಯಲ್ಲೇ ಸಾವಿನ ಪೋಸ್ಟ್!
‘ಚಿಲ್ಲಿ ಕ್ರ್ಯಾಬ್’ ಬೆಲೆ ಎಷ್ಟು ಗೊತ್ತಾ? ʼ
ರೆಸ್ಟೋರೆಂಟ್ ಸಿಬ್ಬಂದಿ ಬಿಲ್ ಕೊಟ್ಟ ತಕ್ಷಣ ಪರೀಕ್ಷಿಸಿದ್ದಾಳೆ. ಆಕೆ ತಿಂದ ‘ಚಿಲ್ಲಿ ಕ್ರ್ಯಾಬ್’ ಬೆಲೆ ನೂರು, ಇನ್ನೂರು ರೂಪಾಯಿ ಅಲ್ಲ. ಬರೋಬ್ಬರಿ 680 ಡಾಲರ್ (ರೂ. 56,503). ಇಷ್ಟೊಂದು ಮೊತ್ತದ ಬಿಲ್ ನೋಡಿದ ಮಹಿಳೆ ಹೋಟೆಲ್ ಸಿಬ್ಬಂದಿಯೊಂದಿಗೆ ಬಿಲ್ ವಿಚಾರವಾಗಿ ವಿವರ ಪಡೆದಿದ್ದಾರೆ. ಬಳಿಕ ಬಿಲ್ ಸರಿಯಾಗಿರುವುದಾಗಿ ಸಿಬ್ಬಂದಿ ಹೇಳಿದ ಬಳಿಕ ಇಷ್ಟು ಮೊತ್ತದ ಬಿಲ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಹಿಳೆ ಪೊಲೀಸರಿಗೆ ಕರೆ ಮಾಡಿದ್ದಾರೆ.
ರೆಸ್ಟೋರೆಂಟ್‌ಗೆ ಬಂದು ವಿಚಾರಣೆ ನಡೆಸಿದ ಪೊಲೀಸರು!
ಮಹಿಳೆ ಪೊಲೀಸರಿಗೆ ಕರೆ ಮಾಡಿದ ಬೆನ್ನಲ್ಲೇ ಪೊಲೀಸರು ರೆಸ್ಟೋರೆಂಟ್ ಗೆ ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ತನ್ನ ಸಮಸ್ಯೆ ತೋಡಿಕೊಂಡಿದ್ದಾರೆ. ತಾನು ಜಪಾನ್ ದೇಶದಿಂದ ಸಿಂಗಾಪುರಕ್ಕೆ ಪ್ರವಾಸಕ್ಕೋಸ್ಕರ ಬಂದಿದ್ದೇನೆ. ಇಲ್ಲಿನ ಚಿಲ್ಲಿ ಕ್ರ್ಯಾಬ್ ಬಹಳ ವಿಶೇಷವಾದ ಖಾದ್ಯ ಎಂದು ಹೇಳಿದ್ದರು. ಅದರ ಬೆಲೆಯ ಬಗ್ಗೆ ಕೇಳಿದಾಗ 20 ಡಾಲರ್ ಎಂದಷ್ಟೇ ಸಿಬಂದಿ ಹೇಳಿದ್ದಾನೆ. ಆದರೆ, ಪ್ರತಿ 100 ಗ್ರಾಂ ತೂಕಕ್ಕೆ ಈ ಬೆಲೆಗಳನ್ನು ನಿಗದಿಪಡಿಸಿರುವ ಕುರಿತು ವಿವರಿಸಲಿಲ್ಲ ಎಂದು ಶಿನ್ಬಾ ಹೇಳಿಕೊಂಡಿದ್ದಾರೆ.
ಹೋಟೆಲ್ ಬಿಲ್‌ನಲ್ಲಿ ರಿಯಾಯಿತಿ ನೀಡಿದ ಸಿಬ್ಬಂದಿ
ನಾವು ಒಟ್ಟು 4 ಸ್ನೇಹಿತರು ಹೆಚ್ಚಿನ ಏಡಿಗಳನ್ನು ತಿಂದಿದ್ದೆವು ಇದರ ಬೆಲೆ 680 ಡಾಲರ್ ಆಗಿತ್ತು. ಇದರಿಂದ ಕಂಗಾಲಾದ ನಾವು ಹೋಟೆಲ್ ಸಿಬಂದಿಯಲ್ಲೂ ಬಿಲ್ ಬಗ್ಗೆ ವಿಚಾರಿಸಿದಾಗ ಆತ ಬಿಲ್ ಮೊತ್ತ ಸರಿಯಾಗಿದೆ ಎಂದು ಹೇಳಿದ್ದಾನೆ. ಮೊದಲೇ ಇಷ್ಟು ಪ್ರಮಾಣದ ಖಾದ್ಯಕ್ಕೆ ಇಷ್ಟು ಹಣವೆಂದು ಹೇಳಿದ್ದರೆ ನಾವು ಇದನ್ನು ಖರೀದಿಸುತ್ತಿರಲ್ಲಿಲ್ಲ. ಹೋಟೆಲ್ ಸಿಬಂದಿಗಳು ಸರಿಯಾದ ಮಾಹಿತಿ ನೀಡದೆ ನಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ ಮಹಿಳೆ ಪೊಲೀಸರಲ್ಲಿ ನಮಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ. ಬಳಿಕ ಪೊಲೀಸರು ಮಹಿಳೆಯ ಮಾತು ಕೇಳಿ ಹೋಟೆಲ್ ಸಿಬ್ಬಂದಿಗಳನ್ನು ವಿಚಾರಿಸಿದಾಗ ಹೋಟೆಲ್ ಸಿಬ್ಬಂದಿಗಳು ತಾವು ನೀಡಿರುವ ಖಾದ್ಯದ ಸಂಪೂರ್ಣ ವಿವರ ನೀಡಿದ್ದಾರೆ. ಅಲ್ಲದೆ ಇತರರಿಗೂ ನೀಡಿರುವ ಬಿಲ್ ಗಳನ್ನು ಪೊಲೀಸರಿಗೆ ತೋರಿಸಿದ್ದಾರೆ. ಇದಾದ ಬಳಿಕ ಪೊಲೀಸರು ಹೋಟೆಲ್ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ ಸಹಾನುಭೂತಿಯ ನೆಲೆಯಲ್ಲಿ ಶಿನ್ಬಾಗೆ ಹೋಟೆಲ್ ಬಿಲ್ ನಲ್ಲಿ $78 (Rs 6,479) ರಿಯಾಯಿತಿಯನ್ನು ನೀಡಲು ಒಪ್ಪಿಕೊಂಡಿದ್ದಾರೆ.