ರಣರೋಚಕ ಘಟ್ಟ ತಲುಪಿದ ರಣಜಿ ಫೈನಲ್ – J & K ಆಲೌಟ್, ಕರ್ನಾಟಕಕ್ಕೆ ಬಿಗ್ ಚಾಲೆಂಜ್

ಹುಬ್ಬಳ್ಳಿಯ ಕೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯ ರಣ ರೋಚಕ ಘಟ್ಟ ತಲುಪಿದೆ. ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಮೊತ್ತಗಳಿಸಿದೆ. ಬರೋಬ್ಬರಿ 584 ರನ್ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು-ಕಾಶ್ಮೀರ ಪರ ಆರಂಭಿಕನಾಗಿ ಕಣಕ್ಕಿಳಿದ ಯಾವರ್ ಹಸನ್ 88 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂಡಿರ್ 121 ರನ್ ಗಳಿಸಿದ್ದರು.ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಪರಸ್ ಡೋಗ್ರಾ 70 ರನ್ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ ಅಬ್ದುಲ್ ಸಮದ್ 61 ರನ್ಗಳ ಕೊಡುಗೆ ನೀಡಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಕನ್ಹಯ್ಯಾ 70 ರನ್ ಬಾರಿಸಿದರೆ, ಸಾಹಿಲ್ ಲೋಟ್ರಾ 78 ರನ್ಗಳ ಇನಿಂಗ್ಸ್ ಆಡಿದರು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಕಲ್ಯಾಣ! – ಉದಯಪುರದಲ್ಲಿ ಶ್ರೀವಲ್ಲಿ ವಿವಾಹ!
ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 584 ರನ್ಗಳಿಸಿ ಆಲೌಟ್ ಆಗಿದೆ. ಕರ್ನಾಟಕ ಪರ ಉತ್ತಮ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ 34.1 ಓವರ್ಗಳಲ್ಲಿ 98 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ.ಜಮ್ಮು-ಕಾಶ್ಮೀರದ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಶುರು ಮಾಡಿದ್ದಾರೆ. ಇದೀಗ ಮೂರನೇ ದಿನದಾಟ ನಡೆಯುತ್ತಿರುವುದರಿಂದ ಪ್ರಥಮ ಇನಿಂಗ್ಸ್ ಕರ್ನಾಟಕ ತಂಡಕ್ಕೆ ನಿರ್ಣಾಯಕ. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದರೆ ಮಾತ್ರ ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಗೆಲುವು ದಕ್ಕಬಹುದು.ಅದಕ್ಕೂ ಮುನ್ನ ಕರ್ನಾಟಕ ತಂಡವು ಆಲೌಟ್ ಆದರೆ ಈ ಪಂದ್ಯವನ್ನು ಜಮ್ಮು-ಕಾಶ್ಮೀರ ಡ್ರಾನಲ್ಲಿ ಅಂತ್ಯಗೊಳಿಸಲಿದೆ. ಏಕೆಂದರೆ ರಣಜಿ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಕರ್ನಾಟಕ ತಂಡವು ಇನ್ನೆರಡು ದಿನದಾಟಗಳ ಕಾಲ ಬ್ಯಾಟಿಂಗ್ ಮುಂದುವರೆಸುವ ಮೂಲಕ 585 ರನ್ಗಳಿಸುವುದು ಅನಿವಾರ್ಯ. ಈ ಮೂಲಕ ಪಂದ್ಯವನ್ನು ಡ್ರಾಗೊಳಿಸಿ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಪಟ್ಟಕ್ಕೇರಬಹುದು. ಇಲ್ಲದಿದ್ದರೆ ಜಮ್ಮು-ಕಾಶ್ಮೀರ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಶತಾಯಗತಾಯ ಈ ಮ್ಯಾಚ್ ಅನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಪ್ರಯತ್ನಿಸಲಿದೆ.

ನೋಡಿರಿ

