ರಾಜೌರಿಯಲ್ಲಿ ಪೊಲೀಸ್ ಗಸ್ತು ಪಡೆ ಮೇಲೆ ಗ್ರೆನೇಡ್ ದಾಳಿ
ಜಸ್ಟ್ ಮಿಸ್ ಆದ ಪೊಲೀಸ್ ಗಸ್ತು ಪಡೆ

ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಪೊಲೀಸ್ ಗಸ್ತು ಪಡೆಯನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆದಿದೆ. ರಾಜೌರಿ ಜಿಲ್ಲೆಯ ಥನಮಂಡಿ ತೆಹ್ಸಿಲ್‌ನ ಮಣಿಯಾಲ್ ಗಾಲಿ ಪ್ರದೇಶದಲ್ಲಿ ಪೊಲೀಸ್ ಗಸ್ತು ಪಡೆಯನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸಲಾಗಿದೆ. ಪೊಲೀಸ್ ವಾಹನದ ಮೇಲೆ ಗ್ರೆನೇಡ್ ಎಸೆಯಲಾಯಿತು.. ಆದರೆ ಅದೃಷ್ಟವಶಾತ್ ಅದು ವಾಹನದ ಪಕ್ಕದಲ್ಲಿ ಬಿದ್ದಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಪೊಲೀಸ್ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಸ್ಫೋಟದ ನಂತರ, ತಕ್ಷಣವೇ ದೊಡ್ಡ ಪ್ರಮಾಣದ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಈ ಕಾರ್ಯಾಚರಣೆಯನ್ನು ನಡೆಸುತ್ತಿವೆ. ದಾಳಿ ಅಥವಾ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ ಮತ್ತು ತನಿಖೆ ನಡೆಯುತ್ತಿದೆ.