ಉಗ್ರರ ವಿರುದ್ಧ ಎನ್‌ಕೌಂಟರ್ – ಕರ್ನಾಟಕದ ಯೋಧ ಸೇರಿ ನಾಲ್ವರು ಹುತಾತ್ಮ
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಸೇನಾಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನ್ನಡಿಗ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಬುಧವಾರ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಜಮೀರ್ ಅಹ್ಮದ್ ವಾಸ್ತವ್ಯವಿದ್ದ ಹೋಟೆಲ್ ಮೇಲೆ ಪೊಲೀಸರಿಂದ ದಾಳಿ – ಸಿಕ್ಕಿದ್ದೇನು?
ಹುತಾತ್ಮರ ಪೈಕಿ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಪ್ರಾಂಜಲ್ ಅವರು ಮಂಗಳೂರು ಎಂಆರ್’ಪಿಎಲ್ ನಿವೃತ್ತ ಎಂಡಿ ವೆಂಕಟೇಶ್ ಅವರ ಏಕೈಕ ಪುತ್ರ. ಮೂಲತಃ ಅವಿಭಜಿತ ದಕ್ಷಿಣ ಕನ್ನಡದವರಾಗಿದ್ದ ವೆಂಕಟೇಶ್ ಅವರು ಮೇ.31ರಂದು ನಿವೃತ್ತರಾಗಿದ್ದರು. ಕೆಲಕಾಲ ಮೈಸೂರಲ್ಲೂ ಇದ್ದರು. ತಂದೆಯ ನಿವೃತ್ತ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ನಿವೃತ್ತಿ ಬಳಿಕ ವೆಂಕಟೇಶ್ ಅವರು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಈ ನಡುವೆ ಅಡಗಿ ಕುಳಿತಿರುವ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ರಜೌರಿಯಲ್ಲಿ ಸ್ಥಳೀಯರಿಗೆ ಮನೆ ಬಿಟ್ಟು ಹೊರಗೆ ಬರದಂತದೆ ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ತಿಳಿದುಬಂದಿದೆ.