ರೇವಣ್ಣ ಕುಟುಂಬಕ್ಕೆ ಕಂಟಕವಾದ ಅದೊಂದು ಕೇಸ್! – ತಂದೆ, ಮಗ ಬಳಿಕ ಭವಾನಿಗೂ ಜೈಲು ಫಿಕ್ಸ್?

ರೇವಣ್ಣ ಕುಟುಂಬಕ್ಕೆ ಕಂಟಕವಾದ ಅದೊಂದು ಕೇಸ್! – ತಂದೆ, ಮಗ ಬಳಿಕ ಭವಾನಿಗೂ ಜೈಲು ಫಿಕ್ಸ್?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು, ಮತದಾರರಿಗಿಂತ ಜಾಸ್ತಿ ಸದ್ದು ಮಾಡಿದ್ದು ಪ್ರಜ್ವಲ್ ರೇವಣ್ಣ ಪ್ರಕರಣ. ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಪೆನ್​ಡ್ರೈವ್ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ 34 ದಿನಗಳ ಬಳಿಕ ಭಾರತಕ್ಕೆ ಮರಳಿದ್ದು ಎಸ್​ಐಟಿ ಪೊಲೀಸರ ವಶದಲ್ಲಿದ್ದಾನೆ. ಇದು ಒಂದ್ಕಡೆಯಾದ್ರೆ ಮತ್ತೊಂದೆಡೆ ಭವಾನಿ ರೇವಣ್ಣ ಕೂಡ ಬಂಧನವ ಭೀತಿಯಲ್ಲಿದ್ದಾರೆ. ಜೈಲೂಟದ ಭಯದಲ್ಲಿ ತಲೆಮರೆಸಿಕೊಂಡಿದ್ದು ಎಸ್​ಐಟಿ ಅಧಿಕಾರಿಗಳಿಗೆ ಹೊಸ ತಲೆಬಿಸಿ ಶುರುವಾಗಿದೆ.

ಇದನ್ನೂ ಓದಿ:   ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್‌ ಫಿಕ್ಸಾ?

ಹೆಚ್.ಡಿ ರೇವಣ್ಣ ಜೈಲಿಗೆ ಹೋಗಿ ಬಂದಿದ್ದಾಯ್ತು. ಪ್ರಜ್ವಲ್ ರೇವಣ್ಣ ಎಸ್​ಐಟಿ ಬಲೆಯೊಳಗೆ ಬಿದ್ದಿದ್ದೂ ಆಯ್ತು. ಇದೀಗ ಭವಾನಿ ರೇವಣ್ಣ ಸರದಿ. ಪತಿ, ಪತ್ನಿ ಹಾಗೂ ಮಗ ಮೂವರಿಗೂ ಸಹ ಉರುಳಾಗ್ತಿರೋದೇ ಅದೊಂದು ಕೇಸ್. ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಹಿಳೆ ಅಪಹರಣ ಪ್ರಕರಣ. ಕಿಡ್ನ್ಯಾಪ್ ಕೇಸ್​ನಲ್ಲಿ ಹೆಚ್.​​ಡಿ ರೇವಣ್ಣ ಕುಟುಂಬಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳೇ ಕಾಣ್ತಿಲ್ಲ. 34 ದಿನಗಳ ಕಾಲ ಕಣ್ಣಾಮುಚ್ಚಾಲೆ ಆಡಿದ್ದ ಪ್ರಜ್ವಲ್ ಎಸ್​ಐಟಿ ಖೆಡ್ಡಾಕ್ಕೆ ಬಿದ್ದಾಗಿದೆ. ಮತ್ತೊಂದೆಡೆ ಪೆನ್​ಡ್ರೈವ್ ಕೇಸ್​ಗೆ ಅಂಟಿಕೊಂಡಿರುವ ಮಹಿಳೆಯ ಕಿಡ್ನ್ಯಾಪ್ ಪ್ರಕರಣ ಭವಾನಿ ರೇವಣ್ಣಗೆ ಮುಳುವಾಗಿದೆ. ಇದೀಗ ಭವಾನಿ ಕೂಡ ತಲೆಮರೆಸಿಕೊಂಡಿರುವುದು ಎಸ್​ಐಟಿಯ ತಲೆನೋವಿಗೆ ಕಾರಣವಾಗಿದೆ.

ಭವಾನಿ ರೇವಣ್ಣ ಎಸ್ಕೇಪ್?   

ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ರಾಸಲೀಲೆ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಹೆಚ್.​​ಡಿ ರೇವಣ್ಣ ಮನೆಯ ಕೆಲಸದಾಕೆ ನಾಪತ್ತೆಯಾಗಿದ್ದರು. ಕೆಲಸದಾಕೆ ಮಗ ಕೆ.ಆರ್ ನಗರ ಪೊಲೀಸ್ ಠಾಣೆಗೆ ಅಪಹರಣದ ಕೇಸ್ ಕೊಟ್ಟಿದ್ದರು. ಇದೇ ಕೇಸ್ ಈಗ ಭವಾನಿ ರೇವಣ್ಣಗೆ ಉರುಳಾಗಿ ಪರಿಣಮಿಸಿದೆ. ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ನೋಟಿಸ್ ಕೊಟ್ಟಿದ್ದರು. ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಅವ್ರ ಹೆಸರೂ ಕೇಳಿ ಬಂದಿದ್ದು, ಜಾಮೀನು ಸಿಗದೆ ತಲೆಮರೆಸಿಕೊಂಡಿದ್ದಾರೆ. ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆಂದು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ತೆರಳಿದ ವೇಳೆ ಭವಾನಿ ರೇವಣ್ಣ ಅಲ್ಲಿರಲಿಲ್ಲ. 15 ದಿನಗಳ ಹಿಂದೆಯೇ ಅವರು ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಬಂಧನ ಭೀತಿಯಲ್ಲಿದ್ದ ಭವಾನಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಅರ್ಜಿ ವಜಾಗೊಳಿಸಿದೆ. ಈ ಬೆನ್ನಲ್ಲೇ ಎಸ್​ಐಟಿ ಅಧಿಕಾರಿಗಳು ಭವಾನಿ ನಿವಾಸಕ್ಕೆ ಭೇಟಿ ನೀಡಿದ್ರು. ಭವಾನಿ ರೇವಣ್ಣಗೆ ಎಸ್​ಐಟಿ ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಆದ್ರೆ ಎಸ್​ಐಟಿ ಅಧಿಕಾರಿಗಳು ಮನೆಗೆ ಹೋದ್ರೂ ಕೂಡ ಭವಾನಿ ನಾಪತ್ತೆಯಾಗಿದ್ದಾರೆ. ಹೊಳೆನರಸೀಪುರದಲ್ಲಿರುವ ಭವಾನಿ ರೇವಣ್ಣ ನಿವಾಸ ಖಾಲಿಯಾಗಿದ್ದು, ಬಂಧನದ ಭೀತಿಯಿಂದ ಭವಾನಿ 15 ದಿನಗಳ ಹಿಂದೆಯೇ ಮನೆ ತೊರೆದಿದ್ದಾರೆ. ಮತ್ತೊಂದೆಡೆ ಬಂಧನ ಭೀತಿಯಿಂದ ಭವಾನಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.  ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಪ್ರಜ್ವಲ್‌ ಪ್ರಕರಣ‌ ಬೆಳಕಿಗೆ ಬಂದಾಗ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ವಾಸ್ತವ್ಯ ಹೂಡಿದ್ದರು. ಕಿಡ್ನಾಪ್‌ ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿಯೂ ಅವರ ಸುಳಿವು ಇರಿಲ್ಲಿಲ್ಲ. ತಮ್ಮ ಅಣ್ಣ ಪ್ರಕಾಶ್ ಮೃತಪಟ್ಟಾಗ ಭವಾನಿ ರೇವಣ್ಣ ಇಲ್ಲಿಗೆ ಆಗಮಿಸಿದ್ದರು. ಇದೀಗ ಸಾಲಿಗ್ರಾಮದ ತವರು ಮನೆ ಕೂಡ ಖಾಲಿಯಾಗಿದೆ. ಸದ್ಯ ವಿದೇಶದಿಂದ ಆಗಮಿಸಿ ಎಸ್ಐಟಿಯಿಂದ ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣರನ್ನು ಸಹ ಎಸ್‌ಐಟಿ ಅಧಿಕಾರಿಗಳು ಈ ಪ್ರಕರಣದಲ್ಲಿ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಜೂನ್ 6ರ ತನಕ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ವಶಕ್ಕೆ ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ. ಮತ್ತೊಂದೆಡೆ ಕಿಡ್ನ್ಯಾಪ್ ಆಗಿದ್ದ ಮಹಿಳೆ ಅಪಹರಣದ ಬಳಿಕ ವಿಡಿಯೋ ಹೇಳಿಕೆ ಹೊರಬಂದಿತ್ತು. ಭವಾನಿ ಕಾರು ಚಾಲಕ ಅಜಿತ್ ಬೆದರಿಸಿ ವಿಡಿಯೋ ಮಾಡಿಸಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಜಿತ್ ನಾಪತ್ತೆಯಾಗಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಎಸ್​ಐಟಿ ಶೋಧ ನಡೆಸಿದೆ. ಚಿಕ್ಕಮಗಳೂರಿನ ಕಲ್ಯಾಣನಗರದಲ್ಲಿರೋ ಅವರ ಮಾವನ ಮನೆಯಲ್ಲೂ ತಲಾಶ್ ನಡೆಸಿದೆ. ಒಟ್ನಲ್ಲಿ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಹಾಗೂ ಕಿಡ್ನ್ಯಾಪ್ ಕೇಸ್ ಹೆಚ್.ಡಿ ರೇವಣ್ಣ ಕುಟುಂಬಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈಗಾಗ್ಲೇ ರೇವಣ್ಣ ಜೈಲಿಗೋಗಿ ಬಂದಿದ್ದು, ಭವಾನಿ ಕೂಡ ಬಂಧನದ ಭೀತಿಯಲ್ಲಿದ್ದಾರೆ. ವರ್ಷದ ಹಿಂದೆ ತಮ್ಮ ಕೋಟಿ ಬೆಲೆಯ ಕಾರಿಗೆ ಬೈಕ್ ಟಚ್ ಆಯ್ತು ಅಂತಾ ಹಾರಾಡಿದ್ದ ಭವಾನಿ ಇಂದು ತಾವೇ ತಲೆಮರೆಸಿಕೊಂಡು ಓಡಾಡ್ತಿರೋದು ನಿಜಕ್ಕೂ ವಿಪರ್ಯಾಸ.

Shwetha M