ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಜೈ ಶ್ರೀರಾಮ್ ಘೋಷಣೆ – ಉದಯನಿಧಿ ಸ್ಟಾಲಿನ್‌ಗೆ ಗೌರವ್ ಭಾಟಿಯಾ ‘ನಮಾಜ್’ ಕೌಂಟರ್

ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಜೈ ಶ್ರೀರಾಮ್ ಘೋಷಣೆ – ಉದಯನಿಧಿ ಸ್ಟಾಲಿನ್‌ಗೆ ಗೌರವ್ ಭಾಟಿಯಾ ‘ನಮಾಜ್’ ಕೌಂಟರ್

ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ವಿವಾದ ಇರುತ್ತೋ ಬಿಡುತ್ತೋ.. ಆಟಗಾರರ ಮಧ್ಯೆ ಏನೂ ನಡೆಯದಿದ್ರೂ, ಸ್ಟೇಡಿಯಂನಲ್ಲಿ ಒಂದಷ್ಟು ಡ್ರಾಮಾ.. ಹಂಗಾಮವಂತೂ ನಡೆಯುತ್ತಲೇ ಇರುತ್ತದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಒಂದಷ್ಟು ಹೈಡ್ರಾಮ ನಡೆದಿದ್ದು, ಈಗಲೂ ವಿವಾದ ಮುಂದುವರೆಯುತ್ತಲೇ ಇದೆ. ಜೊತೆಗೆ ಈ ವಿವಾದ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನ ಕ್ರಿಕೆಟ್ ತಂಡವೇ ಬೆಟರ್ – ಅಫ್ಘಾನಿಸ್ತಾನ ಟೀಮ್ ಸಕ್ಸಸ್‌ನ ಹಿಂದಿದೆ ಭಾರತೀಯ ಮಾಜಿ ಕ್ರಿಕೆಟಿಗರ ಕೊಡುಗೆ..!

ಪಾಕಿಸ್ತಾನದ ​ ಮೊಹಮ್ಮದ್ ರಿಜ್ವಾನ್ ಬುಮ್ರಾ ಬೌಲಿಂಗ್​ಗೆ ಔಟಾಗಿದ್ದರು. ಈ ಸಂದರ್ಭದಲ್ಲಿ ರಿಜ್ವಾನ್ ಪೆವಿಲಿಯನ್​​ಗೆ ಮರಳುವಾಗ ಸ್ಟೇಡಿಯಂನಲ್ಲಿದ್ದ ಒಂದಷ್ಟು ಮಂದಿ ಜೈಶ್ರೀರಾಮ್.. ಜೈಶ್ರೀರಾಮ್ ಅಂತಾ ಘೋಷಣೆ ಕೂಗಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಒಂದಷ್ಟು ಮಂದಿ ಜೈಶ್ರೀರಾಮ್ ಅಂತಾ ಘೋಷಣೆ ಕೂಗಿದ್ದು ಸರಿಯಲ್ಲ. ಇದು ಪಾಕ್​ ಆಟಗಾರರಿಗೆ ಮಾಡಿರುವ ಅವಮಾನ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಸನಾತನ ಧರ್ಮವನ್ನ ಟೀಕಿಸಿ ಅನಗತ್ಯ ಕಾಂಟ್ರೋವರ್ಸಿಗೆ ಕಾರಣವಾಗಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕೂಡ ಜೈಶ್ರೀರಾಮ್ ಘೋಷಣೆ ಬಗ್ಗೆ ಮಾತನಾಡಿದ್ದಾರೆ. ಸ್ಟೇಡಿಯಂನಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದ್ದು ಸರಿಯಲ್ಲ. ಕ್ರೀಡೆ ಎರಡೂ ದೇಶಗಳನ್ನ ಒಂದುಗೂಡಿಸಬೇಕು. ಸಹೋದರತ್ವದ ಸಂಕೇತವಾಗಿರಬೇಕು. ಅದು ಬಿಟ್ಟು ಕ್ರೀಡೆಯನ್ನ ದ್ವೇಷ ಹರಡಿಸೋಕೆ ಬಳಸೋದು ಸರಿಯಲ್ಲ ಅಂತಾ ಉದಯನಿಧಿ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಸಂಸದ ಸಕೇತ್ ಗೋಖಲೆ ಕೂಡ ಜೈಶ್ರೀರಾಮ್ ಘೋಷಣೆಯನ್ನ ಟೀಕಿಸಿದ್ದಾರೆ. 2036ರಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಒಲಿಂಪಿಕ್ಸ್ ಆಯೋಜಿಸುವ ಉದ್ದೇಶ ಹೊಂದಿದ್ದಾರೆ. ಆದರೆ, ಜೈಶ್ರೀರಾಮ್ ಘೋಷಣೆ ಮೂಲಕ ಪಾಕಿಸ್ತಾನಿ ಕ್ರಿಕೆಟಿಗರನ್ನ ಅವಮಾನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನ ಆಯೋಜಿಸುವ ಯೋಗ್ಯತೆ ನಮಗೆ ನಿಜವಾಗಿಯೂ ಇದೆಯಾ ಅನ್ನೋ ಬಗ್ಗೆ ಅನುಮಾನ ಬರ್ತಿದೆ ಅಂತಾ ಕಾಂಗ್ರೆಸ್ ನಾಯಕ ಸಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.

ಯಾವಾಗ ಉದಯನಿಧಿ ಸ್ಟಾಲಿನ್ ಸೇರಿದಂತೆ ವಿಪಕ್ಷ ನಾಯಕರು ಸ್ಟೇಡಿಯಂನಲ್ಲಿ ಜೈಶ್ರೀರಾಮ್ ಅಂತಾ ಘೋಷಣೆ ಕೂಗಿ ಪಾಕಿಸ್ತಾನದ ಆಟಗಾರರಿಗೆ ಅವಮಾನ ಮಾಡಿದ್ದಾರೆ ಅಂತಾ ಆರೋಪಿಸಿದ್ರೋ, ಇತ್ತ ಬಿಜೆಪಿ ನಾಯಕರು ಕೂಡ ಕೆರಳಿದ್ದಾರೆ. ಉದಯನಿಧಿ ಸ್ಟಾಲಿನ್​ರನ್ನ ಡೆಂಗ್ಯೂ, ಮಲೇರಿಯಾ, ಸೊಳ್ಳೆಗೆ ಹೋಲಿಕೆ ಮಾಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಗ್ರೌಂಡ್​​ನಲ್ಲಿ ನಮಾಜ್​ ಮಾಡೋಕೆ ಪಂದ್ಯವನ್ನ ಸ್ಟಾಪ್​ ಮಾಡಿದಾಗ ನಿಮಗೆ ಯಾವುದೇ ಸಮಸ್ಯೆ ಆಗಿರಲಿಲ್ವಾ ಅಂತಾ ಪ್ರಶ್ನಿಸಿದ್ದಾರೆ.

ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆದರ್​ಲ್ಯಾಂಡ್​ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನಿ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ ಆಟದ ಮಧ್ಯೆ ಗ್ರೌಂಡ್​ನಲ್ಲೇ ನಮಾಜ್​ ಮಾಡಿದ್ರು. ಬೇರೆ ಇನ್ಯಾವ ಪ್ಲೇಯರ್​ ಕೂಡ ಈ ರೀತಿ ನಮಾಜ್ ಮಾಡಿರಲಿಲ್ಲ. ಆದ್ರೆ ಮೊಹಮ್ಮದ್ ರಿಜ್ವಾನ್​  ನಮಾಜ್​ನಿಂದಾಗಿ ಪಂದ್ಯ ಕೂಡ ವಿಳಂಬವಾಗಿತ್ತು. ಹೀಗಾಗಿ ವಿಪಕ್ಷದವರಿಗೆ ರಿಜ್ವಾನ್ ನಮಾಜ್ ಮಾಡಿದ್ರೆ ಸಮಸ್ಯೆ ಇಲ್ಲ. ಜೈ ಶ್ರೀರಾಮ್ ಅಂತಾ ಜನರು ಘೋಷಣೆ ಕೂಗಿದ್ರೆ ಮಾತ್ರ ಪ್ರಾಬ್ಲಂ ಅಂತಾ ಬಿಜೆಪಿಗರು ಕೌಂಟರ್ ಕೊಡ್ತಿದ್ದಾರೆ.

ಇವೆಲ್ಲದರ ಮಧ್ಯೆ ಭಾರತದ ವಕೀಲ ವಿನೀತ್ ಜಿಂದಾಲ್ ಅನ್ನೋರು ಮೈದಾನದಲ್ಲಿ ನಮಾಜ್ ಮಾಡಿದ ರಿಜ್ವಾನ್ ವಿರುದ್ಧ ಐಸಿಸಿಗೆ ದೂರು ನೀಡಿದ್ದಾರೆ. ಮೈದಾನದಲ್ಲಿ ಪ್ರೇಕ್ಷಕರ ಮುಂದೆ ಅದರಲ್ಲೂ ಭಾರತೀಯ ಮುಂದೆ ನಮಾಜ್ ಮಾಡಿರೋದು ಕ್ರೀಡಾ ಸ್ಪೂರ್ತಿ ಅಲ್ಲ ಅಂತಾ ಕಂಪ್ಲೇಂಟ್ ಮಾಡಿದ್ದಾರೆ. ರಿಜ್ವಾನ್​ ಗ್ರೌಂಡ್​​ನಲ್ಲೇ ನಮಾಜ್ ಮಾಡಬಹುದು ಅನ್ನೋದಾದ್ರೆ, ಸ್ಟೇಡಿಯಂನಲ್ಲಿ ಜನರು ಜೈಶ್ರೀರಾಮ್ ಅಂತಾ ಘೋಷಣೆ ಕೂಗೋದ್ರಲ್ಲಿ ತಪ್ಪೇನಿದೆ ಅನ್ನೋದು ಇನ್ನೂ ಕೆಲವರ ವಾದ.

ಇಲ್ಲಿ ಇನ್ನೊಂದು ಮಹತ್ವದ ಸಂಗತಿಯನ್ನ ಹೇಳಲೇಬೇಕು. ಜೈಶ್ರೀರಾಮ್ ಘೋಷಣೆ ಕೂಗಿದ್ದೇಕೆ ಅತಿಥಿಗಳಾದ ಪಾಕಿಸ್ತಾನಿಗಳಿಗೆ ಅವಮಾನ ಮಾಡಿದ್ದಾರೆ ಅಂತಾ ಕೇವರು ಹೇಳ್ತಿದ್ದಾರೆ. ಇದಕ್ಕೆ ಇನ್ನೂ ಕೆಲ ವಿಚಾರಗಳನ್ನ ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿವಾದ ಕೂಡ ನಡೆಸ್ತಿದ್ದಾರೆ. ಇಲ್ಲಿ ಜೈಶ್ರೀರಾಮ್ ಅನ್ನೋ ಘೋಷಣೆ ಹೇಳಿರೋದನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಯಾಕಂದ್ರೆ, ಪಾಕಿಸ್ತಾನ, ಶಾರ್ಜಾ, ದುಬೈನಲ್ಲಿ ಮ್ಯಾಚ್​ ನಡೆಯುವಾಗಲೆಲ್ಲಾ ಅಲ್ಲಾಹು ಅಕ್ಬರ್ ಅನ್ನೋ ಘೋಷಣೆಯನ್ನ ಪ್ರೇಕ್ಷಕರು ಕೂಗುತ್ತಲೇ ಇರ್ತಾರೆ. ಈ ಹಿಂದೆ ಭಾರತ-ಪಾಕ್ ಮ್ಯಾಚ್​ ನಡೆಯೋ ವೇಳೆ ಅಲ್ಲಾಹು ಅಕ್ಬರ್ ಅನ್ನೋ ಘೋಷಣೆ ಹಲವು ಬಾರಿ ಕೇಳಿ ಬಂದಿತ್ತು. ಆಗ ಯಾರು ಕೂಡ ಅದನ್ನ ಪ್ರಶ್ನಿಸಿರಲಿಲ್ಲ.

ಇನ್ನು ಅವಮಾನ ಮಾಡೋದ್ರಲ್ಲಿ ಪಾಕಿಸ್ತಾನಿ ಪ್ರೇಕ್ಷಕರು ನಮಗಿಂತ ಮುಂದೆಯೇ ಇದ್ದಾರೆ. 2017ರಲ್ಲಿ ಇಂಗ್ಲೆಂಡ್​ನಲ್ಲಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತವನ್ನ ಪಾಕಿಸ್ತಾನ ಮಣಿಸಿದಾಗ ಪಾಕಿಸ್ತಾನದ ಕೆಲ ಮಂದಿ ವಿರಾಟ್ ಕೊಹ್ಲಿ ಸರ್.. ಅಖಡ್ ಟೂಟ್​ ಗಯಾ.. ಬಾಪ್ ಕೌನ್ ಹೇ ಬಾಪ್.. ಅಪ್ಪ ಯಾರು ಅಪ್ಪ ಯಾರು ಅಂತಾ ಟೀಂ ಇಂಡಿಯಾ ಆಟಗಾರರನ್ನ ಗೇಲಿ ಮಾಡಿದ್ರು. ಆಗ ಕೆರಳಿದ ವೇಗಿ ಮೊಹಮ್ಮದ್ ಶಮಿ ಪಾಕಿಸ್ತಾನಿ ಪ್ರೇಕ್ಷಕರನ್ನ ದುರುಗುಟ್ಟಿ ನೋಡಿದ್ರು.

Sulekha