ಹುಲಿ ಉಗುರು ಪ್ರಕರಣ – ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್

ಹುಲಿ ಉಗುರು ಪ್ರಕರಣ – ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್

ಸದ್ಯ ಕರ್ನಾಟಕದಲ್ಲಿ ಹುಲಿ ಉಗುರಿನ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಅರೆಸ್ಟ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಹುಲಿ ಉಗುರಿನ ಲಾಕೆಟ್ ಹೊಂದಿದ್ದರು ಎನ್ನುವ ಫೋಟೋ ವೈರಲ್ ಆಗುತ್ತಿದೆ. ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹುಲಿ ಉಗುರು ಧರಿಸಿದವರ ವಿರುದ್ಧ, ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ದರ್ಶನ್, ನಿಖಿಲ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ್ದರು. ಜೊತೆಗೆ ಅವರ ನಿವಾಸಕ್ಕೂ ಅಧಿಕಾರಿಗಳು ತೆರಳಿ ದಾಳಿ ಮಾಡಿದ್ದರು. ಇದನ್ನು ಪ್ರಶ್ನಿಸಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

ಬುಧವಾರ ಅರಣ್ಯಾಧಿಕಾರಿಗಳ ತಂಡ ಜಗ್ಗೇಶ್‌ ಮನೆಗೆ ದಾಳಿ ನಡೆಸಿದ್ದಾರೆ. ಈ ದಾಳಿ ಕಾನೂನು ಬಾಹಿರವಾಗಿದೆ. ಅರಣ್ಯಾಧಿಕಾರಿಗಳ ಕ್ರಮ ಸರಿ ಇಲ್ಲ ಎಂದು ಹೈಕೋರ್ಟ್‌ಗೆ ಜಗ್ಗೇಶ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ನಡೆ ಕಾನೂನು ಬಾಹಿರ ಎಂದು ಘೋಷಿಸಲು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್ ಅರೆಸ್ಟ್.. ಸೆಲೆಬ್ರಿಟಿಗಳಿಗೆ ಬರೀ ನೋಟಿಸ್ – ಹುಲಿ ಉಗುರಿನ ಕೇಸ್​ ನಲ್ಲಿ ರೈತನಿಗೊಂದು ನ್ಯಾಯ, ಸ್ಟಾರ್ಸ್ ಗೊಂದು ನ್ಯಾಯ!

ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಪಡಿಸಬೇಕು. ನೋಟಿಸ್​​ಗೆ ಉತ್ತರಿಸುವ ಮೊದಲೇ 14 ಅಧಿಕಾರಿಗಳಿಂದ ದಾಳಿ ನಡೆದಿದೆ. ಪೂರ್ತಿ ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನಾಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರವೆಂದು ಘೋಷಿಸಬೇಕು  ಎಂಬುದಾಗಿ ಜಗ್ಗೇಶ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?

ಜಗ್ಗೇಶ್ ಅವರು 20ನೇ ವಯಸ್ಸಿನಲ್ಲಿದ್ದಾಗ ಅವರ ತಾಯಿ ಹುಲಿಯ ಉಗುರಿನ ಪೆಂಡೆಂಟ್​ನ ಗಿಫ್ಟ್ ಆಗಿ ನೀಡಿದ್ದರು. ಇದು ಜಗ್ಗೇಶ್ ಕೊರಳಲ್ಲೇ ಇತ್ತು. ಈ ಬಗ್ಗೆ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ಬಳಿಕ ಜಗ್ಗೇಶ್ ಬಳಿಯೂ ಹುಲಿ ಉಗುರು ಇದೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು.

ಜಗ್ಗೇಶ್ ಟ್ವೀಟ್ನಲ್ಲೇನಿದೆ?

ಇನ್ನು ನಟ ಜಗ್ಗೇಶ್‌ ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ. ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಇದು ಎಂದು ತಿಳಿಸಿದ್ದೇನೆ. ಎಷ್ಟೋ ದೋಚುವ ಮನುಷ್ಯರು, ದೇಶದ್ರೋಹಿಗಳು, ಕೊಲೆ ಪಾತಕರು, ಸಮಾಜ ಘಾತುಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಒಂದು ವಿಷಯ ಅದ್ಭುತವಾಗಿ ಅರಿತೆ. ಪ್ರೀತಿಸುವವರು 1000 ಜನ ಇದ್ದರೂ ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೇ ಇರುತ್ತಾರೆ. ಒಂದು ವಿಷಯ ನೆನಪಿಟ್ಟುಕೊಳ್ಳಿ. ಒಳ್ಳೆಯ ಗುಣ, ನಡತೆ ಇದ್ದಾಗ ಕೊಲ್ಲೋಕೆ ಸಾವಿರಮಂದಿ ಬಂದರೂ ಕಾಯಲು ಒಬ್ಬ ಬರುತ್ತಾನೆ ಅವನೇ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕುಬಯಸಿ ಬಾಳಿದರೆ ನಾಶ ಎಂದು ಅವರು ಬರೆದಿದ್ದಾರೆ.

Shwetha M