ರಾಜ್ಯ ರಾಜಕೀಯದಲ್ಲಿ ರಕ್ತ ಶಪಥ – ‘ಶೆಟ್ಟರ್ ಗೆದ್ದೇ ಗೆಲ್ತಾರೆ’ ಎಂದು ರಕ್ತದಲ್ಲೇ ಪತ್ರ ಬರೆದ ಅಭಿಮಾನಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ‘ಧಾರವಾಡ ಸೆಂಟ್ರಲ್ ನಲ್ಲಿ ಜಗದೀಶ್ ಶೆಟ್ಟರ್ ಗೆಲ್ಲೋದಿಲ್ಲ.. ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ..’ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರ ಹೇಳಿಕೆಗಳು ವೈರಲ್ ಆಗಿದ್ದವು. ಇದೀಗ ಶೆಟ್ಟರ್ ಅವರ ಅಭಿಮಾನಿಯೊಬ್ಬ’ ಶೆಟ್ಟರ್ ಗೆಲ್ತಾರೆ’ ಎಂದು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಬಿಎಸ್ ವೈಗೆ ತಿರುಗೇಟು ನೀಡಿದ್ದಾನೆ.
ಹುಬ್ಬಳ್ಳಿ ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಎನ್. ಯಂಟ್ರುವಿ ಎಂಬಾತ ರಕ್ತದಲ್ಲಿ ಪತ್ರ ಬರೆದ ವ್ಯಕ್ತಿ. ಜಗದೀಶ್ ಶೆಟ್ಟರ್ 100ಕ್ಕೆ ನೂರರಷ್ಟು ವಿಜಯಶಾಲಿ ಆಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಸಾರಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುತ್ತದೆ. ಜೈ ಕಾಂಗ್ರೆಸ್.. ಎಂದು ಪತ್ರ ಬರೆಯುವ ಮೂಲಕ ತನ್ನ ಅಭಿಮಾನವನ್ನು ಮೆರೆದಿದ್ದಾನೆ.
ಇದನ್ನೂ ಓದಿ: ಮಾವನ ಪರ ಅಖಾಡಕ್ಕಿಳಿದ ಸೊಸೆ – ಮನೆ ಮನೆಗೂ ತೆರಳಿ ಮತಯಾಚಿಸಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ
ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣೆ ಎದುರಿಸುತ್ತಿರುವ ಜಗದೀಶ್ ಶೆಟ್ಟರ್ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬುಧವಾರ ಕಿಡಿಕಾರಿದ್ದರು. ಶೆಟ್ಟರ್ ಗೆ ಬಿಜೆಪಿ ಎಲ್ಲಾ ಅಧಿಕಾರಿವನ್ನೂ ಕೊಟ್ಟಿತ್ತು. ಎಲ್ಲವನ್ನೂ ಪಡೆದು ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ. ಅವರನ್ನು ಸೋಲಿಸುವ ಹೊಣೆ ನನ್ನದು ಎಂದು ಗುಡುಗಿದ್ದರು. ಅಷ್ಟೇ ಅಲ್ಲದೇ ಜಗದೀಶ್ ಶೆಟ್ಟರ್ ಸೋಲುತ್ತಾರೆ ಎಂಬುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದರು.
ಬಿಎಸ್ ಯಡಿಯೂರಪ್ಪನವರು ರಕ್ತದಲ್ಲಿ ಬರೆದುಕೊಡ್ತೇನೆ ಎಂದು ಹೇಳಿದ್ದಕ್ಕೆ ಜಗದೀಶ್ ಶೆಟ್ಟರ್ ಅವರು ಬೇಸರ ವ್ಯಕ್ತಪಡಿಸಿದ್ದರು. ಬುಧವಾರ ಸಂಜೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ನನ್ನ ಮೇಲೆ ಯಾಕೆ ಬಿಎಸ್ ವೈ ಗೆ ಅಷ್ಟೊಂದು ಹಠ. ನನ್ನಂತೆಯೇ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಮೇಲೆ ಯಾಕೆ ಹಠ ಸಾಧಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಈ ಹಿಂದೆ, ಬಿಜೆಪಿಯನ್ನು ಒಡೆದು ಕೆಜೆಪಿ ಪಕ್ಷವನ್ನು ಕಟ್ಟಿದ್ದ ಯಡಿಯೂರಪ್ಪನವರಿಗೆ ಪಕ್ಷದಿಂದ ಹೊರಹೋಗುವಾಗ ಸಿದ್ಧಾಂತಗಳು ಕಾಡಿರಲಿಲ್ಲವೇ ಎಂದು ಪ್ರಶ್ನಿಸಿದ್ದರು.