‘ಹೆಚ್ಚಿನ ಸ್ಥಾನಮಾನದ ಭರವಸೆ ನೀಡಿದ್ದರು’ – ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್

‘ಹೆಚ್ಚಿನ ಸ್ಥಾನಮಾನದ ಭರವಸೆ ನೀಡಿದ್ದರು’ – ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್

ಚುನಾವಣೆಗಳ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಮಾಲೂಲಿ. ಅದರಲ್ಲೂ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿಗಳೇ ಪಕ್ಷ ಬದಲಿಸಿದ್ರು. ಅದರಲ್ಲಿ ಕೆಲವರಿಗೆ ಅದೃಷ್ಟ ಕೈ ಹಿಡಿದರೆ ಇನ್ನೂ ಕೆಲವರು ಸೋತು ಸುಣ್ಣವಾಗಿದ್ರು. ಆದರೆ ಸಾಮಾನ್ಯವಾಗಿ ಚುನಾವಣೆಗಳಲ್ಲಿ ಸೋತ ಬಳಿಕ ವಲಸಿಗರನ್ನ ಪಕ್ಷಗಳು ಮೂಲೆಗುಂಪು ಮಾಡುತ್ತವೆ. ಆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಸೋತರೂ ಶೆಟ್ಟರ್ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ‘ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ’ – ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ಜಂಗೀಕುಸ್ತಿ 

ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಶೆಟ್ಟರ್ ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಟಾರ್ಗೆಟ್ ನೀಡಲಾಗಿತ್ತು. ಕಮಲ ಕಿತ್ತೆಸೆಯಲು ಸಾಕಷ್ಟು ಕಸರತ್ತುಗಳು ನಡೆದಿದ್ದರು. ಆದರೆ ಅಂತಿಮವಾಗಿ ಬಿಜೆಪಿಗೇ ಪಟ್ಟ ಒಲಿದಿತ್ತು. ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳ ಬಳಿಕವೂ ಕಾಂಗ್ರೆಸ್ ಜಗದೀಶ್ ಶೆಟ್ಟರ್ ಸೇರಿದಂತೆ ಮೂವರನ್ನ ಪರಿಷತ್ ಸದಸ್ಯರಾಗಿ ಆಯ್ಮೆ ಮಾಡಿದೆ. ಇದೀಗ ಪರಿಷತ್ ಸದಸ್ಯರಾಗಿರುವ ಜಗದೀಶ್ ಶೆಟ್ಟರ್ ಹೊಸ ಆಸೆಯೊಂದನ್ನ ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ. ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಜಕೀಯವಾಗಿ ನನ್ನ ಎರಡನೆಯ ಇನ್ನಿಂಗ್ಸ್ ಆರಂಭವಾಗಿದೆ. ವಿಧಾನ ಪರಿಷತ್‌ನಲ್ಲಿ ಸದಸ್ಯನಾಗಿ ಕೆಲಸ ಮಾಡೋಕೆ ಅವಕಾಶ ಸಿಕ್ಕಿರೋದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ. ಹೊಸ ಮನ್ವಂತರಕ್ಕೆ ಕಾರಣರಾದ ಕಾಂಗ್ರೆಸ್ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡ್ತೇನೆ ಎಂದು ಹೇಳಿದರು.

ಹುಬ್ಬಳ್ಳಿ ಭಾಗದ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದು ಪರಿಹರಿಸೋ ಪ್ರಯತ್ನ ಮಾಡ್ತೇನೆ ಎಂದ ಜಗದೀಶ್ ಶೆಟ್ಟರ್, ಪರಿಷತ್‌ನಲ್ಲಿ ಯಾವ ಸ್ಥಾನ ನೀಡ್ತಾರೆ ಅನ್ನೋದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ. ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಾಗ ಕೆಲ ಭರವಸೆ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಸ್ಥಾನಮಾನ ಕೊಡುವ ಭರವಸೆ ನೀಡಿದ್ದಾರೆ. ಯಾವ ರೀತಿಯ ಸ್ಥಾನಮಾನ ಕೊಡ್ತಾರೆ ಅನ್ನೋದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ. ಸಭಾಪತಿ, ಸಚಿವ ಸ್ಥಾನ ಯಾವುದು ಬೇಕು ಅನ್ನೋದನ್ನು ಇನ್ನೂ ಪ್ರಸ್ತಾಪ ಮಾಡಿಲ್ಲ, ನಾನು ಕಾದು ನೋಡ್ತೇನೆ ಎಂದರು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕೊಡೋ ಜವಾಬ್ದಾರಿ ನಿರ್ವಹಿಸ್ತೇನೆ ಎಂದ ಜಗದೀಶ್ ಶೆಟ್ಟರ್, ಗೆಲುವಿಗೆ ಏನೆಲ್ಲಾ ಪ್ರಯತ್ನಗಳಾಗಬೇಕೋ, ಅದನ್ನು ಮಾಡ್ತೇನೆ. ಲೋಕಸಭೆಯಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಲು ಪ್ರಯತ್ನಿಸ್ತೇನೆ. ಉತ್ತರ ಕರ್ನಾಟಕದ 11 ಸೀಟುಗಳ ಪೈಕಿ ಕನಿಷ್ಟ ಆರೇಳು ಸೀಟು ಗೆಲ್ಲಿಸೋ ಗುರಿ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರನ್ನು ಸೆಳೆಯುತ್ತಿಲ್ಲ, ಬಿಜೆಪಿ ಆಂತರಿಕ ಬೇಗುದಿಯಲ್ಲಿ ಬೇಯುತ್ತಿದೆ. ಅದು ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ. ನಾವು ಯಾರನ್ನೂ ಸೆಳೆಯೋ ಕೆಲಸ ಮಾಡ್ತಿಲ್ಲ. ಅಲ್ಲಿನ ಅತೃಪ್ತಿ ಕಾರಣದಿಂದ ಕೆಲವರು ಕಾಂಗ್ರೆಸ್‌ಗೆ ಬಂದರೆ ಅಚ್ಚರಿಯಿಲ್ಲ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌, ಯಾರು, ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋದನ್ನು ಹೇಳಬೇಕು. ಅದನ್ನು ಬಿಟ್ಟು ಹೀಗೆ ಹೋದಲ್ಲಿ ಬಂದಲ್ಲಿ ಚರ್ಚಿಸೋದು ಸರಿಯಲ್ಲ. ಒಳ ಒಪ್ಪಂದ ಮಾಡಿಕೊಂಡವರ ಹೆಸರನ್ನು ಪ್ರತಾಪ್ ಸಿಂಹ ಬಹಿರಂಗ ಪಡಿಸಲಿ. ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುವ ವಿಚಾರವನ್ನ ಅವರು ಬಹಿರಂಗ ಮಾಡಿದ್ದಾರೆ. ಹಾಗಿರುವಾಗ ಅವರ ಹೆಸರುಗಳನ್ನು ಬಹಿರಂಗ ಮಾಡಬೇಕಲ್ಲವೇ? ಬಹಿರಂಗವಾಗಿ ಅವರು ಹೆಸರನ್ನ ಹೇಳಿಬಿಡಲಿ. ಅವರು ಯಾರು ಎಂಬುದು ಜನರಿಗೂ ಗೊತ್ತಾಗಲಿ ಎಂದರು.

suddiyaana