ಬಿಹಾರ ಶಿಕ್ಷಣ ಸಚಿವರ ನಾಲಗೆ ಕತ್ತರಿಸಿ ತಂದವರಿಗೆ 10 ಕೋಟಿ – ಅಯೋಧ್ಯೆ ಸ್ವಾಮೀಜಿ ಹೇಳಿದ್ದೇಕೆ?

ಬಿಹಾರ ಶಿಕ್ಷಣ ಸಚಿವರ ನಾಲಗೆ ಕತ್ತರಿಸಿ ತಂದವರಿಗೆ 10 ಕೋಟಿ – ಅಯೋಧ್ಯೆ ಸ್ವಾಮೀಜಿ ಹೇಳಿದ್ದೇಕೆ?

ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್‌ ನಾಲಗೆ ಕತ್ತರಿಸಿ ತಂದವರಿಗೆ 10 ಕೋಟಿ ರುಪಾಯಿ ಬಹುಮಾನ ನೀಡಲಾಗುವುದು ಎಂದು ಅಯೋಧ್ಯೆಯ ಜಗದ್ಗುರು ಪರಮಹಂಸ ಆಚಾರ್ಯ ಘೋಷಿಸಿದ್ದಾರೆ.

ಹಿಂದೂ ಧಾರ್ಮಿಕ ಗ್ರಂಥ ರಾಮಚರಿತಮಾನಸ  ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್‌ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ಕಾರಣಕ್ಕೆ ಬಿಹಾರದ ಶಿಕ್ಷಣ ಸಚಿವರ ನಾಲಗೆ ಕತ್ತರಿಸುವವರಿಗೆ ಸ್ವಾಮೀಜಿ ಬಹುಮಾನ ಘೋಷಿಸಿದ್ದಾರೆ.

ಸಚಿವರ ಹೇಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ. ಇಂತಹ ಹೇಳಿಕೆ ನೀಡಿರುವ ಸಚಿವರು ಕೂಡಲೇ ಕ್ಷಮೆಯಾಚಿಸಬೇಕು. ಅಲ್ಲದೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭಾರತದ ಎರಡು ಕೆಮ್ಮಿನ ಸಿರಪ್‌ ಬಳಸಬೇಡಿ – ಉಜ್ಬೇಕಿಸ್ತಾನಕ್ಕೆ WHO ಶಿಫಾರಸು

ಸಚಿವ ಚಂದ್ರಶೇಖರ್ ಅವರ ಹೇಳಿಕೆ ಅಯೋಧ್ಯೆಯ ಸ್ವಾಮೀಜಿಗಳು, ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ನಾವು ಸುಮ್ಮನೆ ಇರುವುದಿಲ್ಲಎಂದು ಹೇಳಿದ್ದಾರೆ.

ಸಚಿವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಇದು ಸಂಯೋಗ ಅಲ್ಲ ವೋಟ್‍ಬ್ಯಾಂಕ್ ಕಾ ಉದ್ಯೋಗ ಎಂದು ವ್ಯಂಗ್ಯವಾಡಿದ್ದಾರೆ.

ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಸಮಾರಂಭದಲ್ಲಿ  ಮಾತನಾಡುವ ವೇಳೆ ಚಂದ್ರಶೇಖರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಮಾಜದ ಕೆಳವರ್ಗದವರು ಶಿಕ್ಷಣ ಪಡೆದರೆ ವಿಷಕಾರಿಯಾಗುತ್ತಾರೆ ಎಂದು ರಾಮಚರಿತಮಾನಸ ಹೇಳುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಚಿಂತನೆಗಳ ಪುಸ್ತಕಗಳು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸಿವೆ. ಪ್ರೀತಿ ಮತ್ತು ವಾತ್ಸಲ್ಯದಿಂದ ರಾಷ್ಟ್ರ ಶ್ರೇಷ್ಠವಾಗುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಬಂಚ್ ಆಫ್ ಥಾಟ್ಸ್‌ನಂತಹ ಪುಸ್ತಕಗಳು ದ್ವೇಷ ಮತ್ತು ಸಾಮಾಜಿಕ ವಿಭಜನೆಯ ಬೀಜಗಳನ್ನು ಬಿತ್ತಿದವು ಎಂದು ಹೇಳಿದ್ದರು.

suddiyaana