ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಕೇಸ್ – ಅಪ್ರೂವರ್ ಆಗೋಕೆ ರೆಡಿಯಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈಗ ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಇಚ್ಛಿಸಿದ್ದಾರೆ. ದೆಹಲಿ ನ್ಯಾಯಾಲಯದ ಮುಂದೆ ಅವರು ಈ ವಿಷಯ ತಿಳಿಸಿದ್ದಾರೆ. ಇದರಿಂದ ಪ್ರಕರಣದ ಗತಿಯೇ ಬದಲಾಗುವ ಸಾಧ್ಯತೆ ಇದೆ. ಜಾಕ್ವೆಲಿನ್ ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ, ಮೊದಲು ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ ಅಧಿಕೃತವಾಗಿ ವಿನಂತಿ ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಈಗ ಜೈಲಿನಲ್ಲಿದ್ದಾನೆ.
ನಿಯಮದ ಪ್ರಕಾರ, ತನಿಖಾ ಸಂಸ್ಥೆಯು ಮೊದಲು ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ನಂತರ ಅವರನ್ನು ಅಪ್ರೂವರ್ ಆಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ. ಸುಕೇಶ್ ಚಂದ್ರಶೇಖರ್ ಕಡೆಯಿಂದ ಜಾಕ್ವೆಲಿನ್ ಸುಮಾರು 7 ಕೋಟಿ ರೂಪಾಯಿ ಮೌಲ್ಯದ ದುಬಾರಿ ಆಭರಣಗಳು, ಬಟ್ಟೆ ಮತ್ತು ವಾಹನಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪ ಇದೆ.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೇ ಇದ್ದೇವೆ, ಮಾಧ್ಯಮಗಳೇ ನಮ್ಮನ್ನು ದೂರ ಮಾಡುತ್ತಿವೆ- ಡಿಕೆ ಶಿವಕುಮಾರ್
ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಬಂಧನವಾದ ನಂತರ ಜಾಕ್ವೆಲಿನ್ ಅವರು ತಮ್ಮ ಮೊಬೈಲ್ನಲ್ಲಿದ್ದ ಡೇಟಾವನ್ನು ಡಿಲೀಟ್ ಮಾಡಿದ್ದಾರೆ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಹೈ ಪ್ರೊಫೈಲ್ ವ್ಯಕ್ತಿಗಳಿಗೆ ವಂಚಿಸಿ ಸುಕೇಶ್ ಒಟ್ಟು 215 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದ ಎನ್ನಲಾಗಿದೆ.

ನೋಡಿರಿ

