6 ನಿಮಿಷ.. 10 ಬಾಲ್.. 50 ರನ್! – ABDಯನ್ನು ನೆನಪಿಸಿದ್ರಾ ವಿಲ್ ಜಾಕ್ಸ್? – RCB ಗೆ ಡಿವಿಲಿಯರ್ಸ್ ದೇವರಾಗಿದ್ದೇಗೆ?

6 ನಿಮಿಷ.. 10 ಬಾಲ್.. 50 ರನ್! – ABDಯನ್ನು ನೆನಪಿಸಿದ್ರಾ ವಿಲ್ ಜಾಕ್ಸ್? – RCB ಗೆ ಡಿವಿಲಿಯರ್ಸ್ ದೇವರಾಗಿದ್ದೇಗೆ?

6 ನಿಮಿಷ.. 10 ಬಾಲ್.. 50 ರನ್.. ಅಬ್ಬಾ ಅದೆಂಥಾ ಬ್ಯಾಟಿಂಗ್. ಶರವೇಗದ ಬೌಲರ್ಗಳೂ ಕೂಡ ಥಂಡಾ ಹೊಡೆದು ಬಿಟ್ಟಿದ್ರು. ಜಸ್ಟ್ 41 ಬಾಲ್ಗಳಲ್ಲಿ ಸೆಂಚುರಿ ಹೊಡೆದಿದ್ದ ಆರ್ಸಿಬಿಯ ವೀರ ವಿಲ್ ಜಾಕ್ಸ್ ಬರೆದ ದಾಖಲೆಗಳೆಷ್ಟೋ. ಫೋರ್, ಸಿಕ್ಸ್ಗಳ ಮೂಲಕವೇ ಗುಜರಾತ್ ತಂಡವನ್ನ ಬೆಂಡೆತ್ತಿದ್ದ ಜಾಕ್ಸ್ ಈಗ್ಲೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸ್ಟಾರ್ ಆಗಿದ್ದಾರೆ. ಮ್ಯಾಚ್ ಮುಗಿದು 2 ದಿನ ಕಳೆದ್ರೂ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಮೋದಿ ಸ್ಟೇಡಿಯಮ್ನಲ್ಲಿ ಶತಕ ಸಿಡಿಸಿ ಸೂಪರ್ ಸ್ಟಾರ್ ಮೆರೆದಿದ್ದು ವಿಲ್ ಜಾಕ್ಸೇ ಆದ್ರೂ ಆರ್ಸಿಬಿಯ ಅಪ್ಪಟ ಅಭಿಮಾನಿಗಳಿಗೆ ನೆನಪಾಗ್ತಿರೋದು ಮಾತ್ರ ಎಬಿ ಡಿವಿಲಿಯರ್ಸ್. ಇಂದಿಗೂ ಕೂಡ ಪಂಡ್ಯ ಸೋತಾಗ್ಲೆಲ್ಲಾ ನೀನು ಬೆಂಗಳೂರು ಟೀಮ್ನಲ್ಲಿ ಇರಬೇಕಿತ್ತು ಗುರೂ ಅಂತಾ ಕೈ ಕೈ ಹಿಸುಕಿಕೊಳ್ತಿದ್ದಾರೆ.

ಇದನ್ನೂ ಓದಿ: 10 ಬಾಲ್.. 50 ರನ್.. ಸಿಡಿಲಬ್ಬರ! – ವಿಲ್ ಜಾಕ್ಸ್ 6 ನಿಮಿಷದ ಸೀಕ್ರೆಟ್

ಐಪಿಎಲ್ ಸೀಸನ್ 17ನಲ್ಲಿ ಆರ್ಸಿಬಿ ಆಟಗಾರರ ಕಳಪೆ ಅಟ ನೋಡಿ ಫ್ಯಾನ್ಸ್ ಬೇಸತ್ತು ಹೋಗಿದ್ರು. ಭಾನುವಾರ ಗುಜರಾತ್ ಟೈಟನ್ಸ್ ತಂಡ 200ರ ಸವಾಲಿನ ಮೊತ್ತ ಕಲೆ ಹಾಕಿದಾಗ್ಲೂ ಆರ್ಸಿಬಿ ಬ್ಯಾಟರ್ಸ್ ಇದನ್ನು ಚೇಸ್ ಮಾಡ್ತಾರೆ ಅನ್ನೋ ನಂಬಿಕೆ ಫ್ಯಾನ್ಸ್ಗೆ ಇರಲಿಲ್ಲ. ಡುಪ್ಲೆಸಿ ವಿಕೆಟ್ ಹೋದಾಗ ಆ ನಂಬಿಕೆ ಇನ್ನಷ್ಟು ಕುಸಿದು ಹೋಗಿತ್ತು. ಆದ್ರೆ ಬಳಿಕ ಕ್ರೀಸ್ಗೆ ಬಂದ ವಿಲ್ ಜಾಕ್ಸ್ ತನ್ನ ಅತ್ಯದ್ಬುತ ಇನ್ನಿಂಗ್ಸ್ ಅಭಿಮಾನಿಗಳ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿತು. ಜಾಕ್ಸ್ ಜಬರ್ದಸ್ತ್ ಆಟ ಕಂಡು ಫ್ಯಾನ್ಸ್ ದಂಗಾಗಿದ್ರು. 31 ಎಸೆತಕ್ಕೆ ಹಾಫ್ ಸೆಂಚುರಿ ಪೂರೈಸಿದ ವಿಲ್ ಜಾಕ್ಸ್ ನಂತರದ 10 ಎಸೆತಗಳಲ್ಲಿ ಇಡೀ ಗೇಮ್ ಚೇಂಜ್ ಮಾಡಿದ್ರು. ಸಂಜೆ 6.41ಕ್ಕೆ 50 ರನ್ ಬಾರಿಸಿದ್ದ ಜಾಕ್ಸ್ 6.47ರ ಹೊತ್ತಿಗೆ ಅಂದ್ರೆ ಮುಂದಿನ 10 ಬಾಲ್ಗಳಲ್ಲಿ ಸೆಂಚುರಿ ಕಂಪ್ಲೀಟ್ ಮಾಡಿದ್ರು. ಜಸ್ಟ್ 6 ನಿಮಿಷಗಳಲ್ಲಿ ಗೇಮ್ ಚೇಂಜ್ ಮಾಡಿದ ಜಾಕ್ಸ್, ಇಡೀ ವಿಶ್ವವನ್ನೇ ವಿಸ್ಮಯಗೊಳಿಸಿದ್ರು. ಆ ಮ್ಯಾಜಿಕ್ ಕಂಡ ಫ್ಯಾನ್ಸ್ಗೆ ನೆನಪಾಗಿದ್ದು ಎಬಿ ಡಿವಿಲಿಯರ್ಸ್.

ಎಬಿ ಡಿವಿಲಿಯರ್ಸ್.. ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್.. ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್ಮನ್.. ಆರ್ಸಿಬಿಯ ಆಪತ್ಬಾಂಧವ.. ಎದುರಾಳಿ ಯಾರೇ ಇರ್ಲಿ, ಎಷ್ಟೇ ದೊಡ್ಡ ಟಾರ್ಗೆಟ್ ಇರಲಿ.. ಎಬಿಡಿ ಕ್ರಿಸ್ನಲ್ಲಿದ್ದಷ್ಟು ಹೊತ್ತು ಆರ್ಸಿಬಿ ಫ್ಯಾನ್ಸ್ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿರ್ತಾ ಇದ್ರು. ಮಿಸ್ಟರ್ 360 ಕ್ರಿಸ್ನಲ್ಲಿದ್ದಷ್ಟು ಹೊತ್ತು ಭಯ ಅನ್ನೋದು ಎದುರಾಳಿ ಪಾಳಯದಲ್ಲಿ ಇರ್ತಿತ್ತು. ಡಿವಿಲಿಯರ್ಸ್ಗಿದ್ದ ತಾಖತ್ತೇ ಅಂಥಾದ್ದು. ಬ್ಯಾಟ್ ಎಂಬ ಗದೆ ಹಿಡಿದು ಎಬಿಡಿ ಘರ್ಜಿಸಲು ಶುರುವಿಟ್ಟು ಕೊಂಡ್ರೆ, ಗೆಲುವಿನ ಗಡಿ ದಾಟುವವರೆಗೆ ಬಿಡ್ತಿರಲಿಲ್ಲ. ಆದ್ರೆ ಆರ್ಸಿಬಿಗೆ ಮಿಸ್ಟರ್ 360 ಕ್ರಿಕೆಟ್ಗೆ ಗುಡ್ ಬೈ ಹೇಳಿದ ನಂತರದಲ್ಲಿ ಅಂತಾ ಒಬ್ಬ ಛಲದಂಕಮಲ್ಲನ ಕೊರತೆ ಆರ್ಸಿಬಿಗೆ ಕಾಡ್ತಿತ್ತು. ಇದೀಗ ಗುಜರಾತ್ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವಿಲ್ ಜಾಕ್ಸ್, ಎಬಿಡಿಯನ್ನ ನೆನಪಿಸಿದ್ದಾರೆ. ಅಭಿಮಾನಿಗಳು ಥೇಟ್ ಎಬಿಡಿ ಆಟವನ್ನೇ ನೋಡಿದಂತಾಯ್ತು ಅಂತಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಕೂಡ ಎಬಿಡಿಯ SUCCESSOR ಎಂದೇ ಹೇಳಿದೆ. ಎಬಿ ಡಿವಿಲಿಯರ್ಸ್ ಅಂದ್ರೆ ವಿಶ್ವ ಕ್ರಿಕೆಟ್ನಲ್ಲಿ ಪರಿಚಯವೇ ಬೇಡವಾದ ಹೆಸರು.

ಎಬಿ ಡಿವಿಲಿಯರ್ಸ್ ತಮ್ಮ 360 ಡಿಗ್ರಿ ಆಟದೊಂದಿಗೆ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುತ್ತಿದ್ದ ಡಿವಿಲಿಯರ್ಸ್ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಭಾರತ ಅದ್ರಲ್ಲೂ ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರೊಂದಿಗೆ ಹಲವು ವರ್ಷಗಳ ಕಾಲ ಆರ್ಸಿಬಿ ಪರ ಆಡಿ ದಾಖಲೆಗಳನ್ನ ಬರೆದಿದ್ದಾರೆ. 2004 ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡಿವಿಲಿಯರ್ಸ್, 2018ರಲ್ಲಿ ನಿವೃತ್ತಿ ಘೋಷಣೆ ಮಾಡಿ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ವೃತ್ತಿಜೀವನದಲ್ಲಿ ಉನ್ನತ ಸ್ಥಿತಿಯಲ್ಲಿದ್ದ ವೇಳೆಯೇ ವಿದಾಯ ಹೇಳುವ ಮೂಲಕ ಎಬಿಡಿ ನಿರ್ಧಾರ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಎರಡು ವರ್ಷಗಳ ನಂತರ ಎಬಿಡಿ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಟಿ20 ಲೀಗ್ಗಳಿಗೂ ವಿದಾಯ ಹೇಳಿದ್ದರು. ವೃತ್ತಿಜೀವನದಲ್ಲಿ ಉತ್ತಮ ಫಾರ್ಮ್ನಲ್ಲಿರುವಾಗಲೇ ನಿವೃತ್ತಿ ಘೋಷಣೆ ಮಾಡಿದ್ದು ಟೀಕೆಗೂ ಕಾರಣವಾಗಿತ್ತು. ಆದ್ರೆ ಎಬಿಡಿಗೆ ಇರೋ ಬಹುದೊಡ್ಡ ಬೇಸರ ಅಂದ್ರೆ ಸೌತ್ ಆಫ್ರಿಕಾ ಪರ ಅಷ್ಟೆಲ್ಲಾ ಅಬ್ಬರಿಸಿದ್ರೂ ಒಂದೇ ಒಂದು ವಿಶ್ವಕಪ್ ಟೂರ್ನಿಯನ್ನು ಗೆಲ್ಲದೆ ವೃತ್ತಿಜೀವನ ಕೊನೆಗೊಳಿಸಿದ್ದು. ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಎಬಿಡಿ ಟ್ರೋಫಿ ಗೆದ್ದಿಲ್ಲ ಎಂಬುದೇ ಬೇಸರದ ವಿಚಾರ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ಹಲವು ಮನಮೋಹಕ ಇನಿಂಗ್ಸ್ಗಳನ್ನು ಆಡಿದ್ದಾರೆ. ನಾಲ್ಕು ಶತಕಗಳನ್ನು ಕೂಡ ಸಿಡಿಸಿರುವ ಎಬಿಡಿ ತಮ್ಮದೇ ಛಾಪು ಮೂಡಿಸಿದ್ದಾರೆ. ಐಪಿಎಲ್ನಲ್ಲಿ 184 ಪಂದ್ಯಗಳನ್ನು ಆಡಿದ್ದು, 5,162 ರನ್ ಸಿಡಿಸಿದ್ದಾರೆ. ಇದರಲ್ಲಿ 151 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಹಾಗೂ 40 ಕ್ಕಿಂತ ಅಧಿಕ ಸರಾಸರಿಯಲ್ಲಿ 5000 ರನ್ ಕಲೆಹಾಕಿದ್ದರು. ಅಲ್ಲದೆ ಡಿವಿಲಿಯರ್ಸ್ 1480 ದಿನಗಳ ಕಾಲ ಐಸಿಸಿಯ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟ್ಸ್ಮನ್ ಆಗಿದ್ದರು. ಅವರ ಈ ಅಂಕಿಅಂಶಗಳೇ ಅವರು ಎಂತಹ ಶ್ರೇಷ್ಠ ಆಟಗಾರರಾಗಿದ್ದರು ಎಂಬುದನ್ನು ತೋರಿಸುತ್ತದೆ. 2021ರಲ್ಲಿ ಎಬಿಡಿ ಐಪಿಎಲ್ನಲ್ಲಿ ಅಂತಿಮ ಪಂದ್ಯ ಆಡಿದ್ದರು. 2021ರ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಪ್ಲೇ ಆಫ್ಸ್ ತಲುಪಿತ್ತು. ಆ ಟೂರ್ನಿಯಲ್ಲಿ ಆರ್ಸಿಬಿ ಪರ ಎಬಿಡಿ ಭರ್ಜರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರೂ, ತಂಡಕ್ಕೆ ಟ್ರೋಫಿ ಗೆದ್ದುಕೊಡಲು ಸಾಧ್ಯವಾಗಲಿಲ್ಲ. ಪರಿಣಾಮ ಐಪಿಎಲ್ ಕೆರಿಯರ್ಗೂ ವಿದಾಯ ಹೇಳಿದರು. ಆರ್ಸಿಬಿ ತಂಡದ ದಿಗ್ಗಜರಾಗಿ ಗುರುತಿಸಿಕೊಂಡ ಎಬಿಡಿ ಅವರ 17ನೇ ಸಂಖ್ಯೆ ಜರ್ಸಿ ಬೇರೆ ಯಾರೂ ಬಳಸಬಾರದು ಎಂದು ಆರ್ಸಿಬಿ ಫ್ರಾಂಚೈಸಿ 2023ರ ಐಪಿಎಲ್ ವೇಳೆ ನಂ.17ಗೆ ನಿವೃತ್ತಿ ಘೋಷಿಸಿತ್ತು.

ಅಸಲಿಗೆ ಎಬಿಡಿ ದಿಢೀರ್ ನಿವೃತ್ತಿಗೆ ಕಾರಣ ಕಣ್ಣಿನ ಸಮಸ್ಯೆ. ಅವ್ರ ಕಿರಿಯ ಮಗ ಆಕಸ್ಮಿಕವಾಗಿ ಒದ್ದಿದ್ದರಿಂದ ಎಡಗಣ್ಣಿಗೆ ಗಾಯವಾಗಿತ್ತು. ಇದ್ರಿಂದ ದೃಷ್ಟಿ ಸಮಸ್ಯೆ ಎದುರಾಗಿ ಬಳಿಕ ಆಪರೇಷನ್ಗೆ ಕೂಡ ಒಳಗಾಗಿದ್ರು. ಈ ವೇಳೆ ವೈದ್ಯರು ಕ್ರೀಡಾಂಗಣದಿಂದ ದೂರ ಇರುವುದು ಉತ್ತಮ ಎಂದು ಸಲಹೆ ನೀಡಿದ್ದರು. ಅಚ್ಚರಿ ಅಂದ್ರೆ ಒಂದು ಕಣ್ಣು ಮಾತ್ರ ಕಾಣಿಸುತ್ತಿದ್ದರು ಕೂಡ ಎಬಿಡಿ ಎರಡು ವರ್ಷಗಳ ಕಾಲ ಟಿ20 ಲೀಗ್ಗಳನ್ನು ಆಡಿದ್ದರು. ತನ್ನ ವಿಭಿನ್ನ ಶೈಲಿಯ ಬ್ಯಾಟಿಂಗ್ನಿಂದಾಗಿ ಪ್ರಪಂಚದಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಮ್ಮೆ ಡಿವಿಲಿಯರ್ಸ್ ಕ್ರೀಸ್ ಕಚ್ಚಿ ನಿಂತರೆಂದರೆ ಎದುರಾಳಿ ತಂಡದ ಬೌಲರ್ ಕಥೆ ಅಲ್ಲಿಗೆ ಮುಗಿಯಿತು ಎಂಬುದು ಸತ್ಯವಾದ ಮಾತು. ಆರ್ಸಿಬಿ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ಏಕಾಂಗಿ ನಿಂತು ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸುವ ಈ ಸವ್ಯಸಾಚಿ, ಆರ್ಸಿಬಿಯ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ರು. ಬ್ಯಾಟ್ ಹಿಡಿದು ನಿಂತರೆ ಈಗಲೂ ವಿಶ್ವದ ಶ್ರೇಷ್ಠ ಬೌಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯ ಎಬಿಡಿಗೆ ಇದೆ. ಆದ್ರೆ ಮತ್ತೆ ಕ್ರಿಕೆಟ್ ಮರಳೋದಿಲ್ಲ ಅಂತಾ ಎಬಿಡಿಯೇ ಸ್ಪಷ್ಟಪಡಿಸಿದ್ದಾರೆ. ಒಟ್ನಲ್ಲಿ ಗುಜರಾತ್ ವಿರುದ್ಧ ಬೊಂಬಾಟ್ ಆಟವಾಡಿದ ವಿಲ್ ಜಾಕ್ಸ್ ಆರ್ಸಿಬಿ ಅಭಿಮಾನಿಗಳ ದಿಲ್ ಗೆದ್ದಿದ್ದಾರೆ. ಒಂದು ಶತಕದಾಟ ನೋಡಿ ಎಬಿಡಿಯ ಉತ್ತರಾಧಿಕಾರಿ ಎಂಬ ಪಟ್ಟ ಕೊಟ್ಟಿದ್ದು, ವಿಲ್ ಜಾಕ್ಸ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ನಿರೀಕ್ಷೆಯನ್ನ ವಿಲ್ ಜಾಕ್ಸ್ ನಿರಾಸೆಗೊಳಿದಿರಲಿ. ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲಿ ಅನ್ನೋದೇ ಆರ್‌ಸಿಬಿ ಅಭಿಮಾನಿಗಳ ಆಶಯ.

Sulekha

Leave a Reply

Your email address will not be published. Required fields are marked *