ನರ್ಮದಾ ನದಿ ದೋಣಿ ದುರಂತ – ಮಗುವನ್ನ ತಬ್ಬಿಕೊಂಡೇ ನೀರಿನಲ್ಲಿ ಪ್ರಾಣ ಬಿಟ್ಟ ತಾಯಿ!

ನರ್ಮದಾ ನದಿ ದೋಣಿ ದುರಂತ – ಮಗುವನ್ನ ತಬ್ಬಿಕೊಂಡೇ ನೀರಿನಲ್ಲಿ ಪ್ರಾಣ ಬಿಟ್ಟ ತಾಯಿ!

ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ ಪ್ರವಾಸಿ ಬೋಟ್‌ನಲ್ಲಿದ್ದ ಇನ್ನೂ ಐವರ ಮೃತದೇಹಗಳನ್ನು ಶುಕ್ರವಾರ ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದು, ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.ಗುರುವಾರ ಸಂಜೆ ಬೋಟ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವಾಗ ಅದು ಹಠಾತ್ ಬಿರುಗಾಳಿಗೆ ಸಿಲುಕಿ, ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತವಾದ ತಕ್ಷಣವೇ ನಾಲ್ಕು ಜನರ ಮೃತದೇಹ ಸಿಕ್ಕಿತ್ತು, ಇದೀಗ ಐದು ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಇದುವರೆಗೆ 28 ಜನರನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಮದವೇರಿದ ಆನೆ ಅಟ್ಟಹಾಸಕ್ಕೆ ಓರ್ವ ಬಲಿ, ಮಾವುತನಿಗೆ ಗಂಭೀರ ಗಾಯ! – ರಣರಂಗವಾಯ್ತು ದೇವಸ್ಥಾನದ ಆವರಣ!

ದೋಣಿ ಉರುಳಿ ಬಿದ್ದ ಪರಿಣಾಮ ತಾಯಿ ಮತ್ತು ಅವರ ನಾಲ್ಕು ವರ್ಷದ ಮಗ ಗುರುವಾರ ಸಾವನ್ನಪ್ಪಿದ್ದಾರೆ. ರಕ್ಷಣಾ ತಂಡವು ಇಂದು ಬೆಳಿಗ್ಗೆ ಅವರ ಶವಗಳನ್ನು ಪತ್ತೆಹಚ್ಚಿದೆ. ನಾಲ್ಕು ವರ್ಷದ ಪುಟ್ಟ ಮಗುವನ್ನು ಅವನ ತಾಯಿ ತನ್ನ ಎದೆಗೆ ಬಿಗಿಯಾಗಿ ಅಪ್ಪಿಕೊಂಡ ಸ್ಥಿತಿಯಲ್ಲೇ ಇಬ್ಬರೂ ಪ್ರಾಣಬಿಟ್ಟಿದ್ದರು. ಮಗುವನ್ನು ಸಾವಿನ ದವಡೆಯಿಂದ ಹೇಗಾದರೂ ಉಳಿಸಬೇಕೆಂಬ ಆ ತಾಯಿಯ ಹತಾಶ ಪ್ರಯತ್ನ ನೀರಿನ ಆಳದಲ್ಲೂ ಸ್ಥಿರವಾಗಿತ್ತು. ಇದೇ ಕುಟುಂಬದ ತಂದೆ ಮತ್ತು ಮಗಳು ಪಾರಾಗುವಲ್ಲಿ ಯಶಸ್ವಿಯಾಗಿದ್ದರೂ, ಪ್ರೀತಿಯ ತಾಯಿ ಮತ್ತು ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದಾರೆ.

ದೋಣಿ ಅಸಮತೋಲನಗೊಳ್ಳುತ್ತಿತ್ತು ಮತ್ತು ನೀರಿನಿಂದ ತುಂಬಲು ಪ್ರಾರಂಭಿಸಿತು, ಕಣ್ಣು ಮಿಟುಕಿಸುವಷ್ಟರಲ್ಲಿ ಎಲ್ಲರೂ ಕಣ್ಮರೆಯಾದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಅಂದಿನ ಭೀಕರತೆಯನ್ನು ನೆನೆದಿದ್ದಾರೆ. ಏಕಾಏಕಿ ಹವಾಮಾನ ವೈಪರೀತ್ಯದಿಂದ ಎದ್ದ ಬಿರುಗಾಳಿ ಆಡುತ್ತಾ ನಲಿಯುತ್ತಿದ್ದ ಪ್ರವಾಸಿಗರ ಚೀರಾಟಕ್ಕೆ ಕಾರಣವಾಯಿತು. ಯಾರಿಗೂ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ದೋಣಿ ಜಲಸಮಾಧಿಯಾಗಿತ್ತು.

Kishor KV