ದಾಖಲೆ ಮಟ್ಟದಲ್ಲಿ ಕರಗಿತು ಮಂಜುಗಡ್ಡೆ – ಮುಳುಗಡೆಯಾಗುತ್ತಾ  ಕರಾವಳಿ ಪ್ರದೇಶಗಳು?

ದಾಖಲೆ ಮಟ್ಟದಲ್ಲಿ ಕರಗಿತು ಮಂಜುಗಡ್ಡೆ – ಮುಳುಗಡೆಯಾಗುತ್ತಾ  ಕರಾವಳಿ ಪ್ರದೇಶಗಳು?

ನವದೆಹಲಿ: ಹೆಚ್ಚುತ್ತಿರುವ ತಾಪಮಾನದಿಂದಾಗಿ ಸಮದ್ರಮಟ್ಟ ಏರಿಕೆಯಾಗುತ್ತಿದೆ. ಇದರಿಂದಾಗಿ ಕರಾವಳಿ ಪ್ರದೇಶಗಳು ಮುಳುಗಡೆಯಾಗುವ ಭೀತಿ ಇದೆ ಅಂತಾ ಕಳೆದ ವಾರ ವಿಜ್ಞಾನಿಗಳು ತಿಳಿಸಿದ್ದರು. ಇದರ ಬೆನ್ನಲ್ಲೇ ಅಂಟಾರ್ಟಿಕ ಸಮುದ್ರದ ಮಂಜುಗಡ್ಡೆ ದಾಖಲೆ ಪ್ರಮಾಣದಲ್ಲಿ ಕರಗುತ್ತಿದ್ದು ವಿಜ್ಞಾನಿಗಳಲ್ಲಿ ಆತಂಕ ಮೂಡಿಸಿದೆ.

ಸುಮಾರು 4 ದಶಕಗಳಿಂದ ಅಂಟಾರ್ಟಿಕ ಸಮುದ್ರದ ಮಂಜುಗಡ್ಡೆ ಕರಗುವಿಕೆ ಕುರಿತು ಉಪಗ್ರಹ ಪರಿವೀಕ್ಷಣೆ ನಡೆಯುತ್ತಿದೆ.  ಕಳೆದ 6 ವರ್ಷಗಳಲ್ಲಿ ಮೂರನೇ ಬಾರಿಗೆ ಅಂಟಾರ್ಟಿಕ ಸಮುದ್ರದ ಮಂಜುಗಡ್ಡೆ ಮಟ್ಟವು ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ.  ಕಳೆದ ವಾರ ದಾಖಲಾದಷ್ಟು ಕಡಿಮೆ ಪ್ರಮಾಣದ ಮಂಜುಗಡ್ಡೆ ಹಿಂದೆಂದೂ ಕಂಡುಬಂದಿಲ್ಲ ಅಂತಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:2022ರಲ್ಲಿ ಜಗತ್ತಿನಾದ್ಯಂತ ಗರಿಷ್ಟ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ – ಅಧ್ಯಯನ ವರದಿಯಿಂದ ಬಹಿರಂಗ

2022ರ ಫೆ.25ರಂದು ಮಂಜುಗಡ್ಡೆ ಪ್ರಮಾಣವು 1.92 ದಶಲಕ್ಷ ಚದರ ಕಿ.ಮೀ.ಗೆ ಇಳಿದಿತ್ತು. 1979ರಿಂದ ಆರಂಭವಾದ ಉಪಗ್ರಹ ಪರಿವೀಕ್ಷಣೆಯ ಆಧಾರದಲ್ಲಿ ನೋಡಿದರೆ ಇದು ಸಾರ್ವಕಾಲಿಕ ಇಳಿಕೆ. ಆದರೆ ಕಳೆದ ಫೆ.25ರಂದು ಈ ದಾಖಲೆ ಕೂಡ ಮುರಿದು ಸಮುದ್ರದ ಮಂಜುಗಡ್ಡೆ ಮಟ್ಟ 1.79 ದಶಲಕ್ಷ ಚದರ ಕಿ.ಮೀ.ಗೆ ತಲುಪಿದೆ. ಈ ಹಿಂದಿನ ದಾಖಲೆ ವೇಳೆ ಮಂಜುಗಡ್ಡೆ ಮಟ್ಟದ ಇಳಿಕೆಯು 1,36,000 ಚದರ ಕಿ.ಮೀ. ಆಗಿತ್ತು. ಇದು ಆಸ್ಟ್ರೇಲಿಯಾದ ದ್ವೀಪ ರಾಜ್ಯ ತಾಸ್ಮೇನಿಯಾದ ಒಟ್ಟು ಗಾತ್ರದ ದುಪ್ಪಟ್ಟು ಪ್ರಮಾಣಕ್ಕೆ ಸಮ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಮುದ್ರದ ಮಂಜುಗಡ್ಡೆ ಪ್ರಮಾಣದ ಕರಗುವಿಕೆ ಮತ್ತು ಸಮುದ್ರದ ಮಟ್ಟ ಏರಿಕೆಯ ನಡುವೆ ಪರೋಕ್ಷ ಸಂಬಂಧವಿದೆ. ಅಂಟಾರ್ಟಿಕ ಖಂಡದ ಪಶ್ಚಿಮದಲ್ಲಿರುವ ಅಮಂಡ್ಸನ್‌ ಮತ್ತು ಬೆಲ್ಲಿಂಗಾಸನ್‌ ಸಮುದ್ರಗಳಲ್ಲಿ ಮಂಜುಗಡ್ಡೆಯ ಭಾರಿ ಕರಗುವಿಕೆಯು ಕಳವಳಕಾರಿಯಾಗಿದೆ. ಏಕೆಂದರೆ ಈ ಪ್ರದೇಶದಲ್ಲೇ ಥ್ವೈಟ್ಸ್ ಎಂಬ ನೀರ್ಗಲ್ಲು (ಇದನ್ನು ಡೂಮ್ಸ್‌ಡೇ ಗ್ಲೆಷಿಯರ್‌ ಎಂದೂ ಕರೆಯುತ್ತಾರೆ) ಇದೆ. ಇದರಲ್ಲಿ ಸಮುದ್ರ ಮಟ್ಟವನ್ನು ಅರ್ಧ ಮೀಟರ್‌ನಷ್ಟು ಏರಿಸುವಷ್ಟು ಪ್ರಮಾಣದ ನೀರಿದೆ. ಈ ನೀರ್ಗಲ್ಲುಗಳು ಸೂರ್ಯನ ಕಿರಣಗಳಿಂದ ಕರಗುವ ಸಾಧ್ಯತೆ ಕಡಿಮೆ. ಆದರೆ ಸಮುದ್ರದೊಳಗಿನ ನೀರು ಮಂಜುಗಡ್ಡೆಯನ್ನು ಕರಗಿಸುತ್ತದೆ. ನೀರ್ಗಲ್ಲುಗಳು ಕರಗಿದರೆ ಹಲವು ನಗರಗಳು ಮುಳುಗಡೆಯಾಗುವ ಸಾಧ್ಯತೆ ಇದೆ  ಎಂದು ವಿಜ್ಞಾನಿಗಳು ಹೇಳಿದ್ದಾರೆ.

suddiyaana