23 ವರ್ಷದ ಯಾನಿಕ್ ಸಿನ್ನರ್ ವಿಂಬಲ್ಡನ್ ದೊರೆ – ಸ್ಪೇನ್ ಟೆನ್ನಿಸ್ ಕಿಂಗ್ ಅಲ್ಕರಾಝ್ ಗರ್ವಭಂಗ

23 ವರ್ಷದ ಯಾನಿಕ್ ಸಿನ್ನರ್ ವಿಂಬಲ್ಡನ್ ದೊರೆ – ಸ್ಪೇನ್ ಟೆನ್ನಿಸ್ ಕಿಂಗ್ ಅಲ್ಕರಾಝ್ ಗರ್ವಭಂಗ

ವಿಂಬಲ್ಡನ್ ಗ್ರ್ಯಾನ್ ಸ್ಲಾಮ್‌ನಲ್ಲಿ ಹೊಸ ತಾರೆಯ ಉದಯವಾಗಿದೆ. ಪುರುಷರ, ಮತ್ತು ಮಹಿಳೆಯರ ಫೈನಲ್‌ನಲ್ಲಿ ಈ ಬಾರಿ ಹೊಸ ಟೆನಿಸ್ ತಾರೆಗಳು ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡು ಟೆನಿಸ್ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅದರಲ್ಲೂ ಸ್ಪೇನ್ ಟೆನಿಸ್ ಕಿಂಗ್ ಅಲ್ಕರಾಝ್‌ಗೆ ಸೋಲುಣಿಸಿ, 23ನೇ ವಯಸ್ಸಿನಲ್ಲಿ 4ನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ ಯಾನಿಕ್ ಸಿನ್ನರ್.

ಇದನ್ನೂ ಓದಿ: ವಿಂಬಲ್ಡನ್ ಅಂಗಳದಲ್ಲಿ ಕಮರಿದ ಜೊಕೋ ಕನಸು – ಸರ್ಬಿಯಾ ಟೆನ್ನಿಸ್ ದೊರೆಯನ್ನ ಸೋಲಿಸಿ ಫೈನಲ್‌ಗೇರಿದ ಯಾನಿಕ್ ಸಿನ್ನರ್

ಲಂಡನ್​ ಸೆಂಟರ್​ ಕೋರ್ಟ್​​ನಲ್ಲಿ ನಡೆದ ವಿಂಬಲ್ಡನ್ 2025ರ ಪುರುಷರ ಫೈನಲ್​ನಲ್ಲಿ ಇಟಲಿಯ ಯಾನಿಕ್ ಸಿನ್ನರ್ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಚೊಚ್ಚಲ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪೇನ್​ನ ಯುವ ಟೆನಿಸ್ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಝ್ ನಡುವಣ ಈ ಮುಖಾಮುಖಿಯ ಮೊದಲ ಸೆಟ್​ನಲ್ಲಿ ಸಿನ್ನರ್ ಹಿನ್ನಡೆ ಹೊಂದಿದ್ದರು.

ಆರಂಭದಿಂದಲೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲ ಸೆಟ್​ ಅನ್ನು ಕಾರ್ಲೋಸ್ ಅಲ್ಕರಾಝ್ 6-4 ಅಂತರದಿಂದ ಗೆದ್ದುಕೊಂಡರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಯಾನಿಕ್ ಸಿನ್ನರ್ ಬ್ಯಾಕ್ ಟು ಬ್ಯಾಕ್  ಮೂರು ಸೆಟ್​ಗಳನ್ನು 6-4, 6-4 6-4 ಅಂತರದಿಂದ ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಹೊತ್ತಿದ್ದ ಅಲ್ಕರಾಝ್ ತೀವ್ರ ನಿರಾಶೆ ಅನುಭವಿಸಿದರು. ಅಲ್ಕರಾಝ್ ಸೋಲಿನೊಂದಿಗೆ ಸತತ 20 ಗೆಲುವಿನ ಓಟಕ್ಕೂ ಬ್ರೇಕ್ ಬಿದ್ದಿದೆ.

ಇದಕ್ಕೂ ಮುನ್ನ ಯಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024, ಯುಎಸ್ ಓಪನ್ 2024, ಆಸ್ಟ್ರೇಲಿಯನ್ ಓಪನ್ 2025 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಪ್ರತಿಷ್ಠಿತ ವಿಂಬಲ್ಡನ್​ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Sulekha