ಇಟಲಿಯಲ್ಲಿ ಭೂಕುಸಿತ- ನವಜಾತ ಶಿಶು ಸೇರಿ ಏಳು ಮಂದಿ ಸಾವು, ಐವರು ನಾಪತ್ತೆ
ಮಿಲನ್: : ಇಟಲಿಯ ಇಸ್ಕಿಯಾ ದ್ವೀಪದಲ್ಲಿ ಪರ್ವತದ ಮಣ್ಣು ಕುಸಿದು, ನವಜಾತ ಶಿಶು ಸೇರಿ 7 ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಈ ಘಟನೆಯಲ್ಲಿ ಇನ್ನೂ 5 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧಕಾರ್ಯ ಮುಂದುವರೆಸಲಾಗಿದೆ. ಮೃತರಲ್ಲಿ 5 ವರ್ಷದ ಹೆಣ್ಣು ಮಗು, 11 ವರ್ಷದ ಆಕೆಯ ಸಹೋದರ, 31 ವರ್ಷದ ಇಸ್ಕಿಯಾ ದ್ವೀಪದ ನಿವಾಸಿ ಮತ್ತು ಬಲ್ಗೇರಿಯಾದ ಪ್ರವಾಸಿಗರೊಬ್ಬರು ಸೇರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಇಸ್ರೋ ಮತ್ತೊಂದು ಮೈಲಿಗಲ್ಲು: ಎಂಟು ಉಪಗ್ರಹ ಹೊತ್ತ ರಾಕೆಟ್ ಯಶಸ್ವೀ ಉಡಾವಣೆ
ಮಣ್ಣು ಕುಸಿತದಿಂದಾಗಿ ಘಟನಾ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಸರು ಮತ್ತು ನೀರು ತುಂಬಿದ್ದು, ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಮಣ್ಣು ಕುಸಿತದ ರಭಸಕ್ಕೆ ಕಟ್ಟಡಗಳು ನೆಲಸಮಗೊಂಡಿದೆ. ವಾಹನಗಳು ಸಮುದ್ರಕ್ಕೆ ದೂಡಲ್ಪಟ್ಟಿದೆ. ಅಲ್ಲದೇ ಭಾರಿ ಮಳೆಯಿಂದಾಗಿ ಪರ್ವತದ ಭಾಗವು ಸಡಿಲಗೊಂಡು ಭೂಕುಸಿತ ಸಂಭವಿಸಿದೆ. ಮತ್ತೆ ಭೂಕಂಪದ ಅಪಾಯವಿದ್ದು, ರಕ್ಷಣಾ ತಂಡ ಕಾಲ್ನಡಿಗೆಯಲ್ಲಿ ಶೋಧಕ್ಕೆ ಮುಂದಾಗಿದೆ.
ರಸ್ತೆಗಳಲ್ಲಿ ಭಾರಿ ಪ್ರಮಾಣದ ಕೆಸರು, ಮಣ್ಣು ತುಂಬಿದೆ. ಈಗಾಗಲೇ ಬುಲ್ಡೋಜರ್ ಗಳಲ್ಲಿ ಕೆಸರು, ಮಣ್ಣು ತೆರವುಗೊಳಿಸಲಾಗುತ್ತಿದೆ. ಅಲ್ಲದೇ ಸಮುದ್ರಕ್ಕೆ ದೂಡಲ್ಪಟ್ಟಿರುವ ವಾಹನಗಳ ಶೋಧಕ್ಕೆ ಮುಳುಗು ತಜ್ಞರನ್ನು ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.