‘ರಿಷಭ್ ಪಂತ್ ಎಂಟು ತಿಂಗಳು ಕ್ರಿಕೆಟ್‌ನಿಂದ ದೂರವಿರುವುದು ಅನಿವಾರ್ಯ’ – ವೈದ್ಯರ ಸೂಚನೆ
ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಎಂಟು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿರುವುದು ಅನಿವಾರ್ಯವಾಗಿದೆ. ರಿಷಬ್ ಪಂತ್ ಗಾಯದ ಪ್ರಮಾಣ ಜಾಸ್ತಿಯಾಗಿರುವ ಕಾರಣ ಸ್ವಲ್ಪ ಸಮಯ ಕ್ರಿಕೆಟ್‌ನಿಂದ ದೂರ ಇರಬೇಕಾಗಿದೆ. ಪಂತ್ ಅವರ ಗಾಯದ ತೀವ್ರತೆ ಕುರಿತು ಮಾತನಾಡಿದ ಏಮ್ಸ್ ವೈದ್ಯರು, ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಪಂತ್ ಗೆ ಕನಿಷ್ಠ ಮೂರರಿಂದ ಆರು ತಿಂಗಳು ಸಮಯ ಬೇಕಾಗಬಹುದು. ಗಾಯದ ಪ್ರಮಾಣ ತೀವ್ರವಾಗಿದ್ದರೆ, ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಬಿಸಿಸಿಐ ಕೂಡ ಪಂತ್ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡಿದ್ದು ಅವಶ್ಯಕತೆ ಇದ್ದರೆ ವಿದೇಶದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: ‘ರಿಷಬ್ ಪಂತ್ ಆರೋಗ್ಯ ಸ್ಥಿರವಾಗಿದೆ. ಭಯಪಡುವ ಅಗತ್ಯವಿಲ್ಲ’ – ಬಿಸಿಸಿಐ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಪಿಎಲ್ 2023 ಟೂರ್ನಿಯಿಂದಲೂ ರಿಷಬ್ ಪಂತ್ ಹೊರಗುಳಿಯುವುದು ಅನಿವಾರ್ಯವಾಗಿದೆ. ರಿಷಭ್ ಪಂತ್ ಅವರು ಶುಕ್ರವಾರ ದಿಲ್ಲಿಯಿಂದ ಉತ್ತರಾಖಂಡದ ರೂರ್ಕಿಗೆ ಪ್ರಯಾಣ ಬೆಳೆಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಭೀಕರ ಅಪಘಾತವಾಗಿತ್ತು. ರಸ್ತೆಯ ವಿಭಜಕ್ಕೆ ಬಡಿದ ಕಾರು ನೆಲಕ್ಕೆ ಅಪ್ಪಳಿಸಿತ್ತು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಕಾರಿನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು ಕ್ಷಣಮಾತ್ರದಲ್ಲೇ ಬೆಂಕಿ ಕೂಡ ಹೊತ್ತಿಕೊಂಡಿದೆ. ರಿಷಭ್ ಪಂತ್ ಬದುಕುಳಿದಿದ್ದೇ ಪವಾಡ ಎನ್ನಲಾಗಿದೆ. ತಲೆ, ಬೆನ್ನು ಮತ್ತು ಪಾದಗಳಿಗೆ ಗಂಭೀರ ಗಾಯಗಳಾಗಿದೆ.
ಈ ಅಪಘಾತಕ್ಕೂ ಮುನ್ನ ಪಂತ್ ಮೊಣಕಾಲು ಬಲಪಡಿಸಲು ಜನವರಿ 6 ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹಾಜರಾಗಲು ಬಿಸಿಸಿಐ ಸೂಚಿಸಿತ್ತು. ಅಲ್ಲಿ ಕಂಡೀಷನಿಂಗ್ ಮತ್ತು ಅಭ್ಯಾಸ ಮಾಡಲು ಸೂಚನೆ ನೀಡಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅವರು ಫಿಟ್ ಆಗಬೇಕೆಂದು ಬಿಸಿಸಿಐ ಬಯಸಿತ್ತು. ಆದರೀಗ ಮೊಣಕಾಲಿನ ನೋವು ಅಪಘಾತದಿಂದ ಹೆಚ್ಚಾಗಿರುವ ಸಾಧ್ಯತೆ ಇದೆ. ಪಂತ್ ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್‌ನಿಂದ ಕನಿಷ್ಠ ಎಂಟು ತಿಂಗಳುಗಳ ಕಾಲ ದೂರವಿರಬೇಕಾಗಿದೆ.