ಯತ್ನಾಳ್ ಕಾಂಗ್ರೆಸ್ ಸೇರಲು ಅರ್ಜಿ ಹಾಕಿದ್ರೆ ನೋಡೋಣ ಎಂದ ಸಚಿವ ಎಂ.ಬಿ ಪಾಟೀಲ್ – ಕಾಂಗ್ರೆಸ್ ಸೇರ್ತಾರಾ ಯತ್ನಾಳ್?

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟಿತರಾಗಿದ್ದಾರೆ. ಈ ಬೆನ್ನಲೇ ಯತ್ನಾಳ್ ಮೇಲೆ ರಾಜಕೀಯ ಪಕ್ಷಗಳ ಮತ್ತು ನಾಯಕರ ದೃಷ್ಟಿ ನೆಟ್ಟಿದೆ. ಭಾನುವಾರ ಯತ್ನಾಳ್ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿದ್ರು.. ಇದು ರಾಜ್ಯ ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಯತ್ನಾಳ್ ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆ ಎದ್ದಿತ್ತು. ಇದೀಗ ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಶಾಸಕ ಬಸನಗೌಡ ಪಾಟೀಲ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಶಾಕ್ – ಹೋಟೆಲ್ ದರ ಗಗನಕ್ಕೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಎಂ ಬಿ ಪಾಟೀಲ್, ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ನಾನು ಏನು ಹೇಳಲ್ಲ. ಆದ್ರೆ ಅವರು ನಮ್ಮ ಪಕ್ಷಕ್ಕೆ ಯಾವುದೇ ಅರ್ಜಿ ಹಾಕಿಲ್ಲ. ಹಾಕಿದರು ಕೂಡ ನಮ್ಮಲ್ಲಿ ಅವರನ್ನು ಸೇರಿಸಿಕೊಳ್ಳುವುದು ಕಷ್ಟ ಇದೆ. ಅವರು ಒಂದು ಸಮಾಜದ (ಮುಸ್ಲಿಂ) ವಿರುದ್ಧ ಬಹಳಷ್ಟು ಮಾತನಾಡಿದ್ದಾರೆ. ಈ ಕಾರಣ ನಮ್ಮಲ್ಲಿ ಅವರನ್ನ ಸೇರಿಸಿಕೊಳ್ಳುವುದು ಕಷ್ಟ ಅಂತ ಸಚಿವರು ಹೇಳಿದ್ದಾರೆ.
ಇನ್ನು, ಹನಿಟ್ರ್ಯಾಪ್ ವಿಚಾರದಲ್ಲಿ ಸಚಿವ ರಾಜಣ್ಣ ದೂರು ಯಾಕೆ ಕೊಟ್ಟಿಲ್ಲ ಎನ್ನುವ ವಿಚಾರ ಕುರಿತು ಮಾತನಾಡಿ, ಪಕ್ಷದಲ್ಲಿ ಯಾವುದೇ ಒತ್ತಡ ಇಲ್ಲ. ದೂರು ಕೊಡೋದು ಅವರಿಗೆ ಬಿಟ್ಟ ವಿಚಾರ. ಯಾಕೆ ಏನು ಅನ್ನೋದನ್ನ ರಾಜಣ್ಣರಿಗೆ ಕೇಳಬೇಕು ಅಂತ ಹೇಳಿದ್ದಾರೆ.
ಇದೇ ವೇಳೆ ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಪ್ರಕರಣ ನೋಡಿಕೊಳ್ಳಲು ಗೃಹ ಸಚಿವರು, ಪೊಲೀಸರು ಇದ್ದಾರೆ. ಅವರು ಪ್ರಕರಣವನ್ನ ಬಯಲಿಗೆ ಎಳೆಯುತ್ತಾರೆ ಎಂದಿದ್ದಾರೆ.