ಚುನಾವಣೆ ಹೊಸ್ತಿಲಲ್ಲೇ ಫೀಲ್ಡಿಗಿಳಿದ ಐಟಿ – ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬುಗೆ ಬಿಗ್ ಶಾಕ್!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗ್ಲೇ ಪ್ರಚಾರದ ಅಬ್ಬರ ಕೂಡ ಶುರುವಾಗಿದೆ. ಇದರ ನಡುವೆ ಬೆಂಗಳೂರಿನ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬುಧವಾರ ಬೆಳ್ಳಂಬೆಳಗ್ಗೆ ಕೆಜಿಎಫ್ ಬಾಬುಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹೈಗ್ರೌಂಡ್ಸ್ ಬಳಿಯಿರುವ ಕೆಜಿಎಫ್ ಬಾಬು ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ, ಉದ್ಯಮಿ ಕೆಜಿಎಫ್ ಬಾಬು ಯಾನೆ ಯುಸೂಫ್ ಶರೀಫ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಕೆಜಿಎಫ್ ಬಾಬು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ 50 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಇಂದು ಮುಂಜಾನೆಯಿಂದಲೇ ಹೈಗ್ರೌಂಡ್ಸ್ ಬಳಿಯಿರುವ ಕೆಜಿಎಫ್ ಬಾಬು ನಿವಾಸ ರುಕ್ಸಾನಾ ಪ್ಯಾಲೇಸ್ನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ – ಕಾರಿಗೆ ಸಗಣಿ ಲೇಪಿಸಿದ ವೈದ್ಯ!
ಕೆಜಿಎಫ್ ಬಾಬುಗೆ ಸೇರಿದ ರುಕ್ಸಾನಾ ಪ್ಯಾಲೇಸ್ ಹಾಗೂ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬುಧವಾರ ಬೆಳಗ್ಗೆಯಿಂದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ವಂಚನೆ ಹಿನ್ನೆಲೆ ಐಟಿ ಅಧಿಕಾರಿಗಳು ಕೆಜಿಎಫ್ ಬಾಬು ಸೇರಿ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಧಾನಿ ಬೆಂಗಳೂರಿನ 50 ಕಡೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ.
ಈ ಹಿಂದೆಯೂ ಕೂಟ ಕೆಜಿಎಫ್ ಬಾಬು ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದಾಯ ತೆರಿಗೆ ವಂಚನೆಯಡಿ, ಕಳೆದ ವರ್ಷ ಮೇ 28ರಂದು ಐಟಿ ಅಧಿಕಾರಿಗಳಿಂದ ದಾಳಿ ನಡೆದಿತ್ತು. ಕೆಜಿಎಫ್ ಬಾಬು ಒಡೆತನದ ರುಕ್ಸಾನ ಪ್ಯಾಲೇಸ್ ಹಾಗೂ ಕಚೇರಿಯ ಮೇಲೂ ದಾಳಿ ನಡೆಸಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದರು. ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕೆಜಿಎಫ್ ಬಾಬು 1741 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.
ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಭಾರೀ ತಯಾರಿ ನಡೆಸಿದ್ದರು. ಆದರೆ, ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿತ್ತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಅವರ ಪತ್ನಿ ಶಾಝಿಯಾ ತರನ್ನುಮ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಅವರು ತಮ್ಮ ಹಾಗೂ ತಮ್ಮ ಪತಿ ಕೆಜಿಎಫ್ ಬಾಬು ಅವರ ಆಸ್ತಿ ವಿವರ ಘೋಷಿಸಿದ್ದು, ಅವರ ಬಳಿ 1,621 ಕೋಟಿ ರೂ. ಆಸ್ತಿ ಇದೆ ಎಂಬುದು ಬಹಿರಂಗವಾಗಿದೆ. ಕೆಜಿಎಫ್ ಬಾಬು ಹೆಸರಿನಲ್ಲಿ 83.56 ಕೋಟಿ ರೂ.ಗಳ ಚರಾಸ್ತಿ ಇದ್ದು, 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳಿವೆ ಎಂದು ಅಫಿಡವಿಟ್‌ನಲ್ಲಿ ಘೋಷಿಸಲಾಗಿದೆ.