ಟರ್ಕಿಯ ಇಸ್ತಾಂಬುಲ್ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಶಂಕಿತನ ಬಂಧನ
ಇಸ್ತಾಂಬುಲ್: ಟರ್ಕಿಯ ಇಸ್ತಾಂಬುಲ್‌ನ ಪ್ರಸಿದ್ಧ ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ನಲ್ಲಿ ಶನಿವಾರ ಮಾರಣಾಂತಿಕ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ. ಈ ಬಾಂಬ್ ಸ್ಫೋಟಕ್ಕೆ ಕಾರಣವಾದ ಬಾಂಬ್ ಅನ್ನು ಇಟ್ಟುಹೋದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಮುಖದ ಮೇಲೆ ಮೂಡಿದ ಮೂಗು!- ಮೊದಲ ಬಾರಿಗೆ ಯಶಸ್ವಿ ಮೂಗಿನ ಕಸಿ
ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಈ ಬಾಂಬ್ ದಾಳಿಯ ಹಿಂದೆ ಭಯೋತ್ಪಾದನೆಯ ಕೈವಾಡದ ಶಂಕೆಯಿದೆ ಎಂದು ಹೇಳಿದ್ದರು. ಇಸ್ತಾಂಬುಲ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು 81 ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಕಾರಣವಾದ ಶಂಕಿತನನ್ನು ಟರ್ಕಿಶ್ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
“ಈ ಭೀಕರ ಭಯೋತ್ಪಾದಕ ದಾಳಿಗೆ ಕಾರಣರಾದವರ ವಿರುದ್ಧ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ” ಎಂದು ಟರ್ಕಿಶ್ ಅಧಿಕಾರಿಗಳು ಹೇಳಿದ್ದಾರೆ. ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ಮಹಿಳಾ ಭಯೋತ್ಪಾದಕರು ಶಾಪಿಂಗ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಿರುವ ಶಂಕೆ ಇದೆ ಎಂದು ಹೇಳಿದ್ದರು.
ಇದುವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಗಳು ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಮಹಿಳೆಯೊಬ್ಬರು ಸುಮಾರು 40 ನಿಮಿಷಗಳ ಕಾಲ ಬೆಂಚ್ ಮೇಲೆ ಕುಳಿತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಆಕೆ ಈ ಬಾಂಬ್ ಸ್ಫೋಟ ನಡೆಯುವುದಕ್ಕೂ ಕೆಲವೇ ನಿಮಿಷಗಳ ಮೊದಲು ಆ ಜಾಗದಿಂದ ಹೊರಟುಹೋಗಿದ್ದಾರೆ. ಇಬ್ಬರು ಪುರುಷ ದಾಳಿಕೋರರು ಸಹ ಆ ಮಹಿಳೆಯೊಂದಿಗೆ ಸೇರಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.