ಚಂದ್ರ ಆಯ್ತು.. ಈಗ ಸೂರ್ಯನ ಮೇಲೆ ಹೆಜ್ಜೆ ಇಡಲು ಮುಂದಾದ ಇಸ್ರೋ! – ಆದಿತ್ಯ-ಎಲ್‌1 ನೌಕೆಯ ಮೊದಲ ಚಿತ್ರ ಬಿಡುಗಡೆ

ಚಂದ್ರ ಆಯ್ತು.. ಈಗ ಸೂರ್ಯನ ಮೇಲೆ ಹೆಜ್ಜೆ ಇಡಲು ಮುಂದಾದ ಇಸ್ರೋ! – ಆದಿತ್ಯ-ಎಲ್‌1 ನೌಕೆಯ ಮೊದಲ ಚಿತ್ರ ಬಿಡುಗಡೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸದಾ ಒಂದಿಲ್ಲೊಂದು ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಈಗಾಗಲೇ ಚಂದ್ರನ ಅಂಗಳಕ್ಕೆ ಚಂದ್ರಯಾನ – 3 ನೌಕೆಯನ್ನು ಅಧ್ಯಯನಕ್ಕೆ ಕಳುಹಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ನೌಕೆ ಚಂದ್ರನ ದಕ್ಷಿಣ ದ್ರುವಕ್ಕೆ ಲ್ಯಾಂಡ್‌ ಆಗಲಿದೆ. ಈ ಮಧ್ಯೆಯೇ  ಇಸ್ರೋ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ ಆದಿತ್ಯಯಾನಕ್ಕೆ  ಸಜ್ಜಾಗುತ್ತಿದೆ. ಆದಿತ್ಯನ ಅಧ್ಯಯನಕ್ಕೆ ಕಳುಹಿಸಲಿರುವ ನೌಕೆಯ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದೆ. ಆದಿತ್ಯ-ಎಲ್‌1 ಎಂದು ಈ ಉಪಗ್ರಹಕ್ಕೆ ಹೆಸರಿಡಲಾಗಿದೆ.

ಇದನ್ನೂ ಓದಿ: ಚಂದಿರನಿಗೆ ಇನ್ನಷ್ಟು ಹತ್ತಿರವಾದ ಚಂದ್ರಯಾನ – 3 ನೌಕೆ – ಚಂದ್ರನನ್ನು ಸ್ಪರ್ಶಿಸಲು 9 ದಿನಗಳು ಮಾತ್ರ ಬಾಕಿ!

ಈ ಬಗ್ಗೆ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಮಾಹಿತಿ ನೀಡಿದ್ದಾರೆ. ಆದಿತ್ಯ-ಎಲ್‌1 ಸೂರ್ಯನ ಅಧ್ಯಯನಕ್ಕೆ ಸಿದ್ಧ ಪಡಿಸಿರುವ ನೌಕೆಯಾಗಿದೆ. ಸೂರ್ಯನ ಜ್ವಾಲೆಗಳು, ಸೌರಮಾರುತಗಳನ್ನು ಈ ನೌಕೆ ಪರಿಶೀಲಿಸಲಿದೆ. ಈ ಬಗ್ಗೆ ಮುಂಚಿತವಾಗಿಯೇ ಗಮನಕ್ಕೆ ತಂದು, ಭೂಮಿಗೆ ಸೌರಮಾರುತದಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಸೂರ್ಯನ ವಿದ್ಯುತ್ಕಾಂತೀಯ ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿ, ಉಪಗ್ರಹಗಳು, ವಿದ್ಯುತ್‌ ಆಧಾರಿತ ಸಂವಹನ ವ್ಯವಸ್ಥೆಗಳನ್ನು ಅಪಾಯದಿಂದ ರಕ್ಷಿಸಬಹುದು ಎಂದು ಮಾಹಿತಿ ನೀಡುತ್ತದೆ ಎಂದು ಹೇಳಿದ್ದಾರೆ.

ಸೂರ್ಯ ಸೌರವ್ಯೂಹದ ಅತೀದೊಡ್ಡ ಕಾಯ. ಹೈಡ್ರೋಜನ್‌ ಮತ್ತು ಹೀಲಿಯಂ ಕಾರಣಕ್ಕೆ ತೀವ್ರ ಬಿಸಿಯುಗುಳುವ ಸೂರ್ಯನ ಒಳಭಾಗ ವಿಪರೀತ ಶಾಖದಿಂದ ಕೂಡಿರುತ್ತದೆ. ಕೋರ್‌ ಭಾಗದಲ್ಲಿ (ಒಳಭಾಗ) 15 ಮಿಲಿಯನ್‌ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುತ್ತದೆ. ಇದಕ್ಕೆ ಹೋಲಿಸಿದರೆ ಸೂರ್ಯನ ಮೇಲ್ಮೈಯಲ್ಲಿ ಬಿಸಿ ಕಡಿಮೆ, ಅಲ್ಲಿ 5,500 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುತ್ತದೆ. ಸೂರ್ಯನ ಮಧ್ಯ ಭಾಗದಲ್ಲಿ ನಡೆಯುವ ನ್ಯೂಕ್ಲಿಯರ್‌ ಫ್ಯೂಷನ್‌ ಪ್ರಕ್ರಿಯೆಯಿಂದ ಬಿಸಿ ಉತ್ಪತ್ತಿಯಾಗುತ್ತದೆ. ಅದೇ ಆತನಿಗೆ ಶಕ್ತಿ ತುಂಬುತ್ತದೆ. 450 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಸೂರ್ಯ, ಭೂಮಿಯಿಂದ 150 ಮಿಲಿಯನ್‌ ಕಿ.ಮೀ. ದೂರದಲ್ಲಿದ್ದಾನೆ.

suddiyaana