ಇಂದು ಬಹುನಿರೀಕ್ಷಿತ ನಿಸಾರ್ ಉಪಗ್ರಹ ಉಡಾವಣೆ – ನಾಸಾ ಮತ್ತು ಇಸ್ರೋ ಜಂಟಿ ಕಾರ್ಯಾಚರಣೆ

ಬಾಹ್ಯಾಕಾಶದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸೋಕೆ ಕೌಂಟ್‌ಡೌನ್ ಶುರುವಾಗಿದೆ. ನಾಸಾ ಮತ್ತು ಇಸ್ರೋ ವಿಜ್ಞಾನಿಗಳು ಸುಮಾರು ಒಂದು ದಶಕದಿಂದ ನಿರ್ಮಿಸುತ್ತಿರುವ 112.5 ಕೋಟಿ ರೂ. ವೆಚ್ಚದ ಬಹುನಿರೀಕ್ಷಿತ ನಿಸಾರ್ ಉಪಗ್ರಹದ ಉಡಾವಣೆಗೆ ಸಜ್ಜಾಗಿದೆ. ಅತ್ಯಾಧುನಿಕ ರಾಡಾರ್ ಉಪಗ್ರಹವನ್ನು ಹೊತ್ತುಕೊಂಡು ಭಾರತದ ಅತ್ಯಂತ ಭಾರವಾದ ರಾಕೆಟ್ ಜಿಎಸ್‌ಎಲ್‌ವಿ ಇಂದು ಸಂಜೆ 5.40ಕ್ಕೆ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಹಾರಲಿದೆ.
ಇಂಡೋ- ಯುಎಸ್‌ನ ಬಹುನಿರೀಕ್ಷಿತ ನಿಸಾರ್ ಉಪಗ್ರಹವು ಉಡಾವಣೆಗೆ ಇದೀಗ ಭಾರತ ರೆಡಿಯಾಗಿದೆ. ಈ ಉಪಗ್ರಹವು ಹಿಂದೆಂದಿಗಿಂತಲೂ ಉತ್ತಮವಾಗಿ ಭೂಮಿಯ ಮೇಲ್ವಿಚಾರಣೆ ಮಾಡಲಿದೆ ಎಂದು ನಾಸಾ ಹೇಳಿದೆ ನಾಸಾ ಮತ್ತು ಇಸ್ರೋ ವಿಜ್ಞಾನಿಗಳು ಸುಮಾರು 10 ವರ್ಷಗಳಿಂದ ನಿಸಾರ್ ಉಪಗ್ರಹದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. 2,393 ಕೆಜಿ ತೂಕದ ಈ ಉಪಗ್ರಹದ ಕಾರ್ಯವನ್ನು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ಮುಂದುವರಿಸಲಾಗಿತ್ತು. ಡ್ಯುಯಲ್ ಫ್ರೀಕ್ವೆನ್ಸಿ ರಾಡಾರ್ ಮತ್ತು ಬಾಹ್ಯಾಕಾಶದಲ್ಲಿ ನಿಯೋಜಿಸಲಾದ ಅತಿದೊಡ್ಡ ಆಂಟೆನಾವನ್ನು ಹೊಂದಿರುವ ನಿಸಾರ್ ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭೂ ವೀಕ್ಷಣಾ ಉಪಗ್ರಹವಾಗಿದೆ.
ಉಡಾವಣೆಗೂ ಮುನ್ನ ಈ ಕುರಿತು ಮಾಹಿತಿ ನೀಡಿದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ನಿಸಾರ್ ಯೋಜನಾ ವ್ಯವಸ್ಥಾಪಕ ಫಿಲ್ ಬರೇಲಾ, ಎಲ್ಲವೂ ಸರಿಯಾಗಿದೆ. ರಾಕೆಟ್ ಸಿದ್ಧವಾಗಿದೆ. ಹವಾಮಾನ ಕೂಡ ಚೆನ್ನಾಗಿದೆ. ನಾವು ಹೋಗಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ನಿಸಾರ್ ಭೂಮಿಯ ಮೂರು ಆಯಾಮದ ದೃಶ್ಯವನ್ನು ಒದಗಿಸುತ್ತದೆ. ಪ್ರತಿ 12 ದಿನಗಳಿಗೊಮ್ಮೆ ಎರಡು ಬಾರಿ ಇದು ಭೂಮಿಯ ಬಹುತೇಕ ಎಲ್ಲ ಭಾಗದ ಭೂಮಿ ಮತ್ತು ಮಂಜುಗಡ್ಡೆಯ ಮೇಲ್ಮೈಗಳನ್ನು ಸ್ಕ್ಯಾನ್ ಮಾಡುತ್ತದೆ. ನಾಸಾ ಈಗಾಗಲೇ ಭೂಮಿಯನ್ನು ವೀಕ್ಷಿಸುವ ಕಕ್ಷೆಯಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಉಪಗ್ರಹವನ್ನು ಹೊಂದಿದೆ. ಆದರೆ ಇದರಲ್ಲಿ ಇನ್ನು ಸೇರಲಿರುವ ನಿಸಾರ್ ಒಂದು ಅದ್ಭುತ ಕಾರ್ಯಾಚರಣೆಯಾಗಿದೆ. ಇದು ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಭೂಮಿಯ ಮೇಲಿನ ಒಂದು ಸಣ್ಣ ಬದಲಾವಣೆಯನ್ನೂ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಈ ಉಪಗ್ರಹದ ಮೂಲಕ ಭಾರತ ಮತ್ತು ಯುಎಸ್ ಒಟ್ಟಿಗೆ ಭೂಮಿಯನ್ನು ಅಧ್ಯಯನ ಮಾಡಲಿದೆ ಎಂದು ನಾಸಾದ ಭೂ ವಿಜ್ಞಾನ ನಿರ್ದೇಶಕಿ ಕರೆನ್ ಸೇಂಟ್ ಜರ್ಮೈನ್ ತಿಳಿಸಿದ್ದಾರೆ.
1.5 ಬಿಲಿಯನ್ ಡಾಲರ್ ಮೌಲ್ಯದ ನಿಸಾರ್ ಉಪಗ್ರಹ ಯೋಜನೆಗೆ ನಾಸಾ ಸುಮಾರು 1.2 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇದು ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭೂ-ಚಿತ್ರಣ ಉಪಗ್ರಹಗಳಲ್ಲಿ ಒಂದಾಗಿದೆ.

ನೋಡಿರಿ

