ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆಯಲು ಇಸ್ರೋ ಸಜ್ಜು! – ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ

ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆಯಲು ಇಸ್ರೋ ಸಜ್ಜು! – ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ

ಹೊಸ ವರ್ಷದ ಮೊದಲ ದಿನದಂದೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೊಸ ಸಾಹಸಕ್ಕೆ ಮುಂದಡಿ ಇರಿಸಿದೆ. ಬಾಹ್ಯಾಕಾಶದಲ್ಲಿ ಕಂಡುಬರುವ ಕಪ್ಪು ಕುಳಿಗಳ ಅಧ್ಯಯನಕ್ಕೆ ಇಸ್ರೋ ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣಾ ನೆಲೆಯಿಂದ ಸೋಮವಾರ ಬೆಳಗ್ಗೆ 9. 10ಕ್ಕೆ  ಪಿಎಸ್‍ಎಲ್‍ವಿ –ಸಿ58 ರಾಕೆಟ್‌ ಮೂಲಕ ಈ ಉಪಗ್ರಹ ಉಡಾವಣೆ ಮಾಡಲಾಗಿದೆ. ಈ ಮೂಲಕ ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್  ಉಡಾವಣೆ ಯಶಸ್ವಿಯಾಗಿದ್ದು, ಹೊಸ ವರ್ಷದ ದಿನವೇ ಇಸ್ರೋ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಪಿಎಸ್‍ಎಲ್‍ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ.

ಇದನ್ನೂ ಓದಿ: ಡಿ.31 ರಂದೇ ಈ ದೇಶದಲ್ಲಿ ನ್ಯೂ ಇಯರ್! – ಹೊಸ ವರ್ಷಾಚರಣೆಯಲ್ಲೂ ಇಷ್ಟೊಂದು ವ್ಯತ್ಯಾಸ?

ಈ ಉಪಗ್ರಹಗಳನ್ನು ಸ್ಟಾರ್ಟ್‍ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿದ್ದು, ಪಲ್ಸಾರ, ಕಪ್ಪು ಕುಳಿ ,ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‍ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಸೂಪರ್‍ನೋವಾ ಅವಶೇಷಗಳ ಅಧ್ಯಯನ ನಡೆಸಲಿದೆ. ಈ ಮಿಷನ್ ಕನಿಷ್ಠ ಐದು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ.

POLIX (ಎಕ್ಸ್-ರೇಗಳಲ್ಲಿ ಪೋಲಾರಿಮೀಟರ್ ಉಪಕರಣ) ಮತ್ತು XSPECT (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಪೇಲೋಡ್‌ಗಳಾಗಿವೆ. POLIX ಅನ್ನು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದೆ. ಎಕ್ಸ್‌ಸ್ಪೆಕ್ಟ್ ಅನ್ನು ಬೆಂಗಳೂರಿನ ಯುಆರ್‌ಎಸ್‌ಸಿಯ ಬಾಹ್ಯಾಕಾಶ ಖಗೋಳವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ.

Shwetha M