ಗಗನಯಾನದ ಲೈಫ್ ಸಪೋರ್ಟ್ ಸಿಸ್ಟಂ ಸ್ವತಃ ತಯಾರಿಸಲು ಮುಂದಾದ ಇಸ್ರೋ – ರಷ್ಯಾ, ಅಮೆರಿಕ ಸಹಾಯ ನಿರಾಕರಿಸಿದ್ದೇಕೆ?  

ಗಗನಯಾನದ ಲೈಫ್ ಸಪೋರ್ಟ್ ಸಿಸ್ಟಂ ಸ್ವತಃ ತಯಾರಿಸಲು ಮುಂದಾದ ಇಸ್ರೋ – ರಷ್ಯಾ, ಅಮೆರಿಕ ಸಹಾಯ ನಿರಾಕರಿಸಿದ್ದೇಕೆ?  

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿರುವ ಇಸ್ರೋ ಇದೀಗ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಚಂದ್ರಯಾನ, ಸೂರ್ಯಯಾನ ಸಕ್ಸಸ್ ಬಳಿಕ ಮಾನವಸಹಿತ ಗಗನಯಾನ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹೆಜ್ಜೆಯಲ್ಲಿ ಸಕ್ಸಸ್ ಕೂಡ ಕಂಡಿದೆ. ಪ್ರಾಯೋಗಿಕ ಪರೀಕ್ಷಾರ್ಥವಾಗಿ ನಡೆಸಿದ  TV-D1 ರಾಕೆಟ್‌ ಉಡಾವಣೆ ಯಶಸ್ವಿಯಾಗಿದೆ. ಇದೀಗ ಮಾನವ ಸಹಿತ ಗಗನಯಾನ ಯೋಜನೆಗೆ ಅಗತ್ಯವಾದ ಎನ್ವಿರಾನ್ಮೆಂಟಲ್ ಕಂಟ್ರೋಲ್ ಆಂಡ್ ಲೈಫ್ ಸಪೋರ್ಟ್ ಸಿಸ್ಟಮ್ ವ್ಯವಸ್ಥೆಯನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸಲು ಇಸ್ರೋ ಮುಂದಾಗಿದೆ. ಈ ತಂತ್ರಜ್ಞಾನವನ್ನು ಭಾರತದ ಜತೆ ಹಂಚಿಕೊಳ್ಳಲು ವಿವಿಧ ದೇಶಗಳು ನಿರಾಕರಿಸಿದ್ದು, ಇದನ್ನೇ ಇಸ್ರೋ ಸವಾಲಾಗಿ ಸ್ವೀಕರಿಸಿದೆ.

ಎನ್ವಿರಾನ್ಮೆಂಟಲ್ ಕಂಟ್ರೋಲ್ ಆಂಡ್ ಲೈಫ್ ಸಪೋರ್ಟ್ ಸಿಸ್ಟಮ್ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಅವಶ್ಯಕವಾದ ಉಪಕರಣ. ಇದನ್ನು ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಮತ್ತು ದೇಶಗಳು ಅಭಿವೃದ್ಧಿ ಪಡಿಸಿವೆ. ಇಸಿಎಲ್ಎಸ್ಎಸ್ ಅಭಿವೃದ್ಧಿಯ ಹಿಂದೆ ಅಮೆರಿಕಾದ ನಾಸಾ, ರಷ್ಯಾದ ರಾಸ್‌ಕಾಸ್ಮೋಸ್, ಇಎಸ್ಎ, ಜಾಕ್ಸಾ ಮತ್ತು ಸಿಎಸ್ಎ ಸಂಸ್ಥೆಗಳು ಹೆಚ್ಚಿನ ಕೊಡುಗೆ ನೀಡಿವೆ. ಈ ಸಂಸ್ಥೆಗಳು ಪರಸ್ಪರ ಸಹಯೋಗ ಹೊಂದಿ, ಇಸಿಎಲ್ಎಸ್ಎಸ್ ತಂತ್ರಜ್ಞಾನದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಿವೆ. ಆದ್ರೀಗ ಇದೇ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿವೆ. ಹೀಗಾಗೇ ಇಸ್ರೋ ಅಧ್ಯಕ್ಷರಾದ ಎಸ್.ಸೋಮನಾಥ್ ಮಹತ್ವದ ಯೋಜನೆಯೊಂದನ್ನು ಘೋಷಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ  ಸ್ವತಂತ್ರವಾಗಿ ತನ್ನ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಅವಶ್ಯಕವಾದ ಎನ್ವಿರಾನ್ಮೆಂಟಲ್ ಕಂಟ್ರೋಲ್ ಆಂಡ್ ಲೈಫ್ ಸಪೋರ್ಟ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದಾರೆ. ಬಹುತೇಕ ರಾಕೆಟ್ ಮತ್ತು ಉಪಗ್ರಹಗಳ ವಿನ್ಯಾಸಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ.

ಇದನ್ನೂ ಓದಿ : ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್‌ ಸೇನೆ!

ಗಗನಯಾತ್ರಿಗಳ ಉಳಿವಿಗೆ ಇಸಿಎಲ್ಎಸ್ಎಸ್ ಅತ್ಯಂತ ಅವಶ್ಯಕವಾದ ವ್ಯವಸ್ಥೆಯಾಗಿದೆ. ಹಲವು ಯಂತ್ರಗಳು ಪರಸ್ಪರ ಸಂಪರ್ಕ ಹೊಂದಿ ಕಾರ್ಯಾಚರಿಸುವ ಒಂದು ಜಾಲವಾಗಿದ್ದು, ಗಗನಯಾತ್ರಿಗಳಿಗೆ ಉಸಿರಾಡಲು ಗಾಳಿ ಮತ್ತು ಕುಡಿಯುವ ನೀರನ್ನು ಒದಗಿಸುತ್ತದೆ. ಭೂಮಿಯ ರೀತಿಯಲ್ಲೇ, ಸ್ಪೇಸ್ ಕ್ಯಾಪ್ಸೂಲ್ ಒಳಗಿರುವ ಗಗನಯಾತ್ರಿಗಳು ಆಮ್ಲಜನಕವನ್ನು ಎಳೆದುಕೊಂಡು, ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತಾರೆ. ಆದ್ದರಿಂದ ಅವರು ಉಸಿರಾಡುವ ಗಾಳಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಇರುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಒಂದು ವೇಳೆ ಆ ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾದರೆ, ಗಗನಯಾತ್ರಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಇಸಿಎಲ್ಎಸ್ಎಸ್ ಭಾಗವಾಗಿರುವ ವಿಶೇಷ ಯಂತ್ರಗಳು ಗಾಳಿಯಿಂದ ಹೆಚ್ಚುವರಿ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತವೆ. ಗಾಳಿಯಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುವ ಪ್ರಕ್ರಿಯೆಯನ್ನು ಕಾರ್ಬನ್ ಕ್ಯಾಪ್ಚರ್ ಅಥವಾ ಕಾರ್ಬನ್ ಸ್ಕ್ರಬ್ಬಿಂಗ್ ಎಂದು ಕರೆಯಲಾಗುತ್ತದೆ. ಸ್ಕ್ರಬ್ಬರ್ಸ್ ಎಂದು ಕರೆಯಲಾಗುವ ಯಂತ್ರಗಳು ಈ ಹೆಚ್ಚುವರಿ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತವೆ.

ಹೀಗೆ ಸ್ಕ್ರಬ್ಬರ್‌ಗಳಲ್ಲಿ ಸಂಗ್ರಹವಾಗುವ ಇಂಗಾಲದ ಡೈಆಕ್ಸೈಡ್ ತ್ಯಾಜ್ಯವನ್ನು ಬಾಹ್ಯಾಕಾಶಕ್ಕೆ  ರಿಲೀಸ್ ಮಾಡಲಾಗುತ್ತೆ. ಹೀಗಾಗಿ ಬಾಹ್ಯಾಕಾಶದಲ್ಲಿ ಸೂಕ್ತ ಪ್ರಮಾಣದಲ್ಲಿ ವೆಂಟಿಲೇಶನ್ ಇರುವುದು ಅತ್ಯವಶ್ಯಕವಾಗಿದೆ. ಯಾಕಂದ್ರೆ ನಿದ್ರಿಸುತ್ತಿರುವ ಗಗನಯಾತ್ರಿಗಳ ಮುಖದ ಬಳಿ ಫ್ಯಾನಿನ ಅವಶ್ಯಕತೆ ಇರುತ್ತದೆ. ಇಲ್ಲವಾದರೆ, ಅವರ ಸುತ್ತಲೂ ಇಂಗಾಲದ ಡೈಆಕ್ಸೈಡ್ ಗುಳ್ಳೆಗಳು ರೂಪುಗೊಳ್ಳುವ ಅಪಾಯವಿದೆ. ಇದು ಒಂದು ರೀತಿ ವ್ಯಕ್ತಿಯೊಬ್ಬನ ತಲೆಯನ್ನು ಪ್ಲಾಸ್ಟಿಕ್ ಚೀಲದ ಒಳಗೆ ಇಡುವ ರೀತಿಯಾಗಿದ್ದು, ಅಪಾಯಕಾರಿ ಆಗಿರುತ್ತದೆ. ಈ ಅಪಾಯವನ್ನು ತಪ್ಪಿಸಲು, ನಿದ್ರಿಸುವ ಗಗನಯಾತ್ರಿಗಳ ಮುಖದ ಬಳಿ ಫ್ಯಾನ್ ಅಳವಡಿಸಲಾಗುತ್ತದೆ. ಅಲ್ಲದೆ ಇಸಿಎಲ್ಎಸ್ಎಸ್ ಗಗನಯಾತ್ರಿಗಳು ಬಳಸುವ ನೀರಿನಲ್ಲಿ ಬಹುತೇಕ 90ರಷ್ಟು ಮರುಬಳಕೆ ಮಾಡಬಹುದು. ಆದ್ರೆ ಮರುಬಳಕೆಗೆ ಲಭ್ಯವಾಗುವ ನೀರನ್ನು ತಕ್ಷಣವೇ ಸೇವಿಸಲು ಸಾಧ್ಯವಿಲ್ಲ. ಯಾಕೆಂದರೆ, ಅದು ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಅದನ್ನು ಶುದ್ಧೀಕರಿಸಬೇಕಾಗುತ್ತದೆ. ಹಾಗೇ ಪ್ಯಾಕೇಜಿಂಗ್, ಆಹಾರ ಇಡುವ ಸಂಗ್ರಾಹಕಗಳು, ಪ್ಲಾಸ್ಟಿಕ್ ಚೀಲಗಳು, ಹೈಜೀನ್ ವೈಪ್‌ಗಳು, ಬಳಸಿದ ಬಟ್ಟೆಗಳು, ಹಾಗೂ ಮಲ ತ್ಯಾಜ್ಯಗಳು ಬಾಹ್ಯಾಕಾಶದಲ್ಲಿ ಘನ ತ್ಯಾಜ್ಯಗಳಾಗಿರುತ್ತವೆ. ಇಂತಹ ತ್ಯಾಜ್ಯಗಳನ್ನು ಕಲೆಹಾಕಿ, ಅದನ್ನು ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟ ವಾಹನಕ್ಕೆ ಕಾಯಲಾಗುತ್ತದೆ. ಈ ತ್ಯಾಜ್ಯ ವಿಲೇವಾರಿ ಬಾಹ್ಯಾಕಾಶ ವಾಹನ ಮರಳಿ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ ಬಳಿಕ, ತ್ಯಾಜ್ಯ ಮತ್ತು ಸಂಗ್ರಹಣಾ ವ್ಯವಸ್ಥೆಗಳು ಎರಡೂ ಸುಟ್ಟು ನಾಶವಾಗುತ್ತವೆ. ಈ ರೀತಿಯಲ್ಲಿ, ಬಾಹ್ಯಾಕಾಶದಲ್ಲಿ ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆ ಒಂದು ತೆರೆದ ವ್ಯವಸ್ಥೆಯಂತೆ ಕಾರ್ಯಾಚರಿಸುತ್ತದೆ. ಇದೆಲ್ಲದರ ಹೊರತಾಗಿಯೂ ಇಸ್ರೋ ಮುಂದೆ ಹಲವು ಚಾಲೆಂಜ್ ಗಳಿವೆ.

ಗಗನಯಾನ ಯೋಜನೆಗೆ ಇಸ್ರೋ ಮುಂದೆ ಸಾಲು ಸಾಲು ಸವಾಲುಗಳಿವೆ. ರಾಕೆಟ್ ಉಡಾವಣೆಗಳಲ್ಲಿರುವ ಅಪಾಯಗಳನ್ನೂ ಪರಿಗಣಿಸಿ, ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಕೌಶಲ್ಯ, ಪ್ರಾವೀಣ್ಯತೆ, ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಿದೆ. ಯಾಕಂದ್ರೆ ಈ ಮಹತ್ವಾಕಾಂಕ್ಷಿ ಯೋಜನೆ ಕೇವಲ ರಾಕೆಟ್‌ಗಳು, ಬಾಹ್ಯಾಕಾಶ ನೌಕೆಗಳು ಮಾತ್ರವಲ್ಲದೆ, ಮಾನವರನ್ನೂ ಒಳಗೊಂಡಿರಲಿದೆ. ಅದಕ್ಕಾಗಿ ರಾಕೆಟ್‌ಗಳಲ್ಲಿ ಉಡಾವಣೆಯ ವೇಳೆ ವೈಫಲ್ಯ ಅಥವಾ ಅಪಾಯಗಳನ್ನು ತಪ್ಪಿಸುವಂತಹ, ಅವುಗಳನ್ನು ನಿರ್ವಹಿಸುವಂತಹ ತಂತ್ರಜ್ಞಾನಗಳನ್ನು ಅಳವಡಿಸುವುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಗಗನಯಾತ್ರಿಗಳನ್ನು ರಕ್ಷಿಸುವ ಸಲುವಾಗಿ ಮಾಹಿತಿಗಳನ್ನು ವಿಶ್ಲೇಷಿಸುವಂತಹ, ಸಮಸ್ಯೆಗಳನ್ನು ಎದುರು ನೋಡುವಂತಹ, ಕ್ಷಿಪ್ರ ನಿರ್ಧಾರಗಳನ್ನು ಕೈಗೊಳ್ಳುವಂತಹ ತಂತ್ರಜ್ಞಾನಗಳನ್ನು ಸಕ್ರಿಯವಾಗಿ ಅಭಿವೃದ್ಧಿ ಪಡಿಸುತ್ತಿದೆ.

ಗಗನಯಾನ ಯೋಜನೆಗೆ ತಂತ್ರಜ್ಞಾನಗಳ ಅಭಿವೃದ್ಧಿ ಜೊತೆ ಜೊತೆಗೆ ಸಾಕಷ್ಟು ತಯಾರಿಗಳನ್ನು ಇಸ್ರೋ ಮಾಡಿಕೊಳ್ತಿದೆ. ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿರುವ ಲೋ ಅರ್ಥ್ ಆರ್ಬಿಟ್ ಅಂದ್ರೆ ಭೂಮಿಯ ಕೆಳ ಕಕ್ಷೆಯಲ್ಲಿ ಬದುಕಲು ಗಗನಯಾತ್ರಿಗಳಿಗೆ ಗಾಳಿ, ನೀರು ಮತ್ತು ಆಹಾರದ ಅವಶ್ಯಕತೆಯಿರುತ್ತದೆ. ಆದರೆ ಭೂಮಿಯ ರೀತಿ ಬಾಹ್ಯಾಕಾಶದಲ್ಲಿ ಈ ಅವಶ್ಯಕತೆಗಳನ್ನು ಪೂರೈಸಲು ಯಾವುದೇ ವಾತಾವರಣ ಇರುವುದಿಲ್ಲ. ಅದರ ಬದಲಿಗೆ, ಗಗನಯಾತ್ರಿಗಳು ತಮ್ಮ ಗಾಳಿ, ನೀರು ಮತ್ತು ಆಹಾರದ ಪೂರೈಕೆಗೆ, ತ್ಯಾಜ್ಯ ನಿರ್ವಹಣೆಗೆ ಜೀವ ಬೆಂಬಲ ವ್ಯವಸ್ಥೆಗಳ ಮೇಲೆ ಅವಲಂಬಿತರಾಗಿರುತ್ತಾರೆ. ಚಂದ್ರಯಾನ, ಸೂರ್ಯಯಾನ ಸಕ್ಸಸ್ ಬಳಿಕ ಗಗನಯಾನ ಯೋಜನೆ ಮೇಲೆ ಇಸ್ರೋ ಕಂಪ್ಲೀಟ್ ಒತ್ತು ನೀಡಿದೆ. ಬಾಹ್ಯಾಕಾಶಕ್ಕೆ ಮಾನವರನ್ನು ಕರೆದೊಯ್ಯುವ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಗುರಿ ಹೊಂದಿದೆ. 2025ರ ವೇಳೆಗೆ ಸಿಬ್ಬಂದಿಗಳನ್ನು 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಕಳುಹಿಸುವ ಉದ್ದೇಶ ರೂಪಿಸಿದೆ. ಸೋಮನಾಥ್ ಅವರು ಇಸ್ರೋ ಈ ಯೋಜನೆಗಾಗಿ ಅವಶ್ಯಕ ವಸ್ತುಗಳು ಮತ್ತು ತಂತ್ರಜ್ಞಾನಗಳನ್ನು ದೇಶೀಯವಾಗಿ ನಿರ್ಮಿಸಲಿದ್ದು, ಅದಕ್ಕಾಗಿ ತಾನು ಹೊಂದಿರುವ ಜ್ಞಾನವನ್ನು ವಿನಿಯೋಗಿಸಿ, ಸ್ಥಳೀಯ ಉದ್ದಿಮೆಗಳನ್ನು ಬಳಸಿಕೊಳ್ಳುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಸಕಲ ತಯಾರಿ ಮಾಡಿಕೊಳ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಬರೆಯಲಿರುವ ಹೊಸ ಇತಿಹಾಸಕ್ಕೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ.

Shantha Kumari