2030ಕ್ಕೆ ಬಾಹ್ಯಾಕಾಶ ಪ್ರವಾಸೋದ್ಯಮ – ಒಂದು ಟಿಕೆಟ್ ಬೆಲೆ ಎಷ್ಟು ಗೊತ್ತಾ?
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಇದೀಗ ಮತ್ತೊಂದು ಸಾಹಸಕ್ಕೆ ಅಣಿಯಾಗಿದೆ. 2030ರ ವೇಳೆಗೆ ಬಾಹ್ಯಾಕಾಶ ಪ್ರವಾಸೋದ್ಯಮ ನಡೆಸಲು ಇಸ್ರೋ ಮುಂದಾಗಿದ್ದು, ಬಾಹ್ಯಾಕಾಶ ಪಯಣ ಕೈಗೊಳ್ಳಲು ಇಚ್ಛಿಸುವವರಿಗೆ ಶುಲ್ಕವನ್ನು ನಿಗದಿಪಡಿಸಿದೆ.
ಬಾಹ್ಯಾಕಾಶ ಪ್ರವಾಸೋದ್ಯಮ ಯೋಜನೆ ಬಹುಕೋಟಿ ವೆಚ್ಚದ್ದಾಗಿದ್ದು, ಬಾಹ್ಯಾಕಾಶ ಪಯಣ ಕೈಗೊಳ್ಳಲು ಇಚ್ಛಿಸುವ ಪ್ರತಿ ವ್ಯಕ್ತಿಗೂ 6 ಕೋಟಿ ರೂ. ಶುಲ್ಕ ವಿಧಿಸುವ ಸಾಧ್ಯತೆಯಿದೆ. ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ, ಇಸ್ರೋ ನಿಗದಿ ಮಾಡುವ ದರವೇ ಅತ್ಯಂತ ಕಡಿಮೆಯಾಗಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುವಕರಿಲ್ಲದೆ ಕಂಗೆಟ್ಟ ಚೀನಾದಿಂದ ಹೊಸ ಪ್ರಯೋಗ – ವಯಸ್ಸಾದವರನ್ನೇ ಮತ್ತಷ್ಟು ದುಡಿಸಲು ಪ್ಲ್ಯಾನ್!
ಈ ಬಗ್ಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿದ್ದು, ಈಗಾಗಲೇ ಬಾಹ್ಯಾಕಾಶ ಪ್ರವಾಸೋದ್ಯಮ ಕುರಿತ ಆರಂಭಿಕ ಕೆಲಸಗಳು ಶುರುವಾಗಿವೆ. ಸ್ವದೇಶಿ ತಂತ್ರಜ್ಞಾನ ಬಳಕೆ ಮಾಡಿ ಸಿದ್ಧಪಡಿಸಲಾಗುವ ವ್ಯವಸ್ಥೆಯನ್ನೇ ಅದರಲ್ಲಿ ಬಳಸಲಾಗುತ್ತದೆ. ಜತೆಗೆ ಗಗನನೌಕೆಯನ್ನು ಪುನರ್ ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇಸ್ರೋ ಬಾಹ್ಯಾಕಾಶ ಪ್ರವಾಸದ ಅವಧಿ ನಿಗದಿಪಡಿಸಿದ್ದು, ಒಂದು ಪ್ರವಾಸವನ್ನು 15 ನಿಮಿಷಕ್ಕೆ ನಿಗದಿಪಡಿಸಿದೆ. ಕೆಲ ನಿಮಿಷಗಳ ಕಾಲ ಗುರುತ್ವಾಕರ್ಷಣ ಬಲ ಕಡಿಮೆ ಇರುವ ಪ್ರದೇಶದಲ್ಲಿ ಕಳೆಯುವ ಯೋಜನೆಯೂ ಇದೆ. ಭೂಮಿಯಿಂದ 100 ಕಿಮೀ ಎತ್ತರ ಅಂದರೆ ಉಪ ಕಕ್ಷೆಯ ವ್ಯಾಪ್ತಿಗೆ ಕರೆದೊಯ್ಯಲಾಗುತ್ತದೋ ಅಥವಾ ಬಾಹ್ಯಾಕಾಶದ ಅಂಚಿಗೆ (ಭೂಮಿಯಿಂದ 400 ಕಿಮೀ ಎತ್ತರ) ತೆರಳಲಾಗುತ್ತದೆಯೋ ಎಂಬ ಬಗ್ಗೆ ಸೋಮನಾಥ್ ಹೆಚ್ಚಿನ ಮಾಹಿತಿ ನೀಡಿಲ್ಲ.
ಇಸ್ರೋದ ಜೊತೆಗೆ ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಪ್ರವಾಸೋದ್ಯಮ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಇವೆ. ಅದಕ್ಕಾಗಿ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆ್ಯಂಡ್ ಅಥೊರೈಸೇಷನ್ ಸೆಂಟರ್ ಕಾರ್ಯನಿರತವಾಗಿದೆ ಎಂದು ಮೂಲಗಳು ತಿಳಿಸಿವೆ .
ಬಾಹ್ಯಾಕಾಶ ಪ್ರವಾಸೋದ್ಯಮ ಪರಿಕಲ್ಪನೆ ಹೊಸದೇನಲ್ಲ. 2001ರಲ್ಲಿ ಹಣಕಾಸು ವಿಶ್ಲೇಷಕ ಡೆನಿಸ್ ಟಿಟೋ ಅವರು ತಮ್ಮ 60ನೇ ವಯಸ್ಸಿನಲ್ಲಿ 20 ಮಿಲಿಯನ್ ಡಾಲರ್ ಶುಲ್ಕ ನೀಡಿ ಸುಯೆಜ್ ಗಗನ ನೌಕೆಯಲ್ಲಿ ಹಾರಾಟ ನಡೆಸಿ, ಮೊದಲ ಬಾಹ್ಯಾಕಾಶ ಪ್ರವಾಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಾದ ಬಳಿಕ ಬ್ಲೂ ಒರಿಜಿನ್, ವರ್ಜಿಲ್ ಗಲಾಕ್ಟಿಕ್ ಮತ್ತು ಸ್ಪೇಸ್ ಎಕ್ಸ್ ಈ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಹಲವು ಆಫರ್ಗಳನ್ನು ನೀಡುತ್ತಿವೆ.