ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ದತೆ – ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ

ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ದತೆ – ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಗಗನಯಾನಿಗಳನ್ನು ಹೊತ್ತ ಮಾಡ್ಯೂಲ್ ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ ಕ್ಲಸ್ಟರ್ಡ್ ಡಿಪ್ಲಾಯ್ ಮೆಂಟ್ ಪರೀಕ್ಷೆಯನ್ನು ಇಸ್ರೋ ನಡೆಸಿದ್ದು, ಇದು ಯಶಸ್ವಿಯಾಗಿದೆ.

ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಗಗನಯಾನ ಕಾರ್ಯಾಚರಣೆಗೆಂದು  ಇಸ್ರೋ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮತ್ತು ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ (ಟಿಬಿಆರ್‌ಎಲ್) ಪರೀಕ್ಷಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಮಿಲಿಯನ್ ಗಟ್ಟಲೆ ಕುಸಿಯಿತು ಜನನ ಪ್ರಮಾಣ – ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಜಪಾನ್?

ಗಗನಯಾನಿಗಳನ್ನು ಹೊತ್ತ ಈ ಮಾಡ್ಯೂಲ್ ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ನೆಲಕ್ಕೆ ಇಳಿಯುವಾಗ ಇರಬಹುದಾದ ಭೌತಿಕ ಸ್ಥಿತಿಯನ್ನು, ತೆರೆದ ಪ್ರಯೋಗಾಲಯದಲ್ಲಿ ನಿರ್ಮಿಸಿ ಈ ಪರೀಕ್ಷೆ ನಡೆಸಲಾಗಿದೆ. ಈ ಪ್ರಯೋಗಾಲಯದಲ್ಲಿ ಇರುವ ಹಳಿಗಳ ಮೇಲೆ ರಾಕೆಟ್ ಚಾಲಿತ ಯಂತ್ರವನ್ನು ಚಲಾಯಿಸಲಾಗಿದೆ. ಯಂತ್ರದ ಹಿಂಭಾಗದಲ್ಲಿ ಈ ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿತ್ತು. ಈ ಪ್ಯಾರಾಚೂಟ್‌ಗಳು ಪರೀಕ್ಷೆ ನಡೆಸುವ ವೇಳೆ ಸರಿಯಾಗಿ ಕೆಲಸ ಮಾಡಿವೆ ಅಂತಾ ಇಸ್ರೋ ಹೇಳಿದೆ.

ಮಾನವಸಹಿತ ಬಾಹ್ಯಾಕಾಶ ಯಾನವನ್ನು ಸಾಧ್ಯವಾಗಿಸುವುದು ಗಗನಯಾನ ಯೋಜನೆಯ ಮುಖ್ಯ ಉದ್ದೇಶ. ಮೂವರು ಗಗನಯಾನಿಗಳನ್ನು 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಗುತ್ತದೆ. ಮೂರು ದಿನಗಳ ಬಳಿಕ ಅವರು ಭೂಮಿಗೆ ವಾಪಸಾಗಲಿದ್ದಾರೆ. ದೇಶದ ಮೊದಲ ಮಾನವಸಹಿತ ಗಗನಯಾನವು 2024ರ ಕೊನೆಯಲ್ಲಿ ಕೈಗೂಡಲಿದೆ ಎಂದು ಇಸ್ರೋ ತಿಳಿಸಿದೆ.

ಗಗನಯಾನಿಗಳನ್ನು ಹೊತ್ತ ಕೋಶವು ಭೂಮಿಗೆ ಇಳಿಯುವಾಗ ಒಟ್ಟು 10 ಪ್ಯಾರಾಚೂಟ್‌ಗಳು ಹಲವು ಹಂತಗಳಲ್ಲಿ ಕೆಲಸ ಮಾಡುತ್ತವೆ. ಮೊದಲ ಎರಡು ಹಂತದಲ್ಲಿ ಕೆಲಸ ಮಾಡುವ ಒಟ್ಟು ನಾಲ್ಕು ಪ್ಯಾರಾಚೂಟ್‌ಗಳ ವ್ಯವಸ್ಥೆಯನ್ನು ಮಾರ್ಚ್ 1 ಮತ್ತು ಮಾರ್ಚ್ 3ರಂದು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

 

suddiyaana