ಮುಂಬೈ ದಾಳಿಕೋರ LeT ಉಗ್ರ ಸಂಘಟನೆ ನಿಷೇಧಿಸಿದ ಇಸ್ರೇಲ್ – ಭಾರತಕ್ಕಾಗಿ ಪಾಕಿಸ್ತಾನಕ್ಕೆ ಪೆಟ್ಟು..?

ಮುಂಬೈ ದಾಳಿಕೋರ LeT ಉಗ್ರ ಸಂಘಟನೆ ನಿಷೇಧಿಸಿದ ಇಸ್ರೇಲ್ – ಭಾರತಕ್ಕಾಗಿ ಪಾಕಿಸ್ತಾನಕ್ಕೆ ಪೆಟ್ಟು..?

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ನಿರ್ಣಾಯಕ ಹಂತ ತಲುಪಿದೆ. ಪರಸ್ಪರ ಸಂಧಾನ ಏರ್ಪಟ್ಟಿದ್ದು, 4 ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಗಾಜಾಪಟ್ಟಿಗೆ ಅಗತ್ಯ ವಸ್ತುಗಳ ರವಾನೆ, ಹಮಾಸ್ ಉಗ್ರರ ವಶದಲ್ಲಿ ಇರುವ 50 ಒತ್ತೆಯಾಳುಗಳ ಬಿಡುಗಡೆ ಸೇರಿದಂತೆ ಹಲವು ತೀರ್ಮಾನಗಳನ್ನ ಕೈಗೊಳ್ಳಲಾಗಿದೆ. ಈ ಮೂಲಕ ಕಳೆದ 6 ವಾರಗಳಿಂದ ನಡೆಯುತ್ತಿರುವ ಯುದ್ಧ ಒಂದು ತಾರ್ಕಿಕ ಮಟ್ಟಕ್ಕೆ ಬಂದು ನಿಂತಿದೆ. ಒಂದ್ಕಡೆ ಯುದ್ಧ ನಾನಾ ದಿಕ್ಕಿಗೆ ತಿರುಗುತ್ತಿದ್ರೆ ಮತ್ತೊಂದೆಡೆ ಇಸ್ರೇಲ್ ಸರ್ಕಾರ ಭಾರತದ ಪರ ಮಹತ್ವದ ನಿರ್ಧಾರ ಘೋಷಿಸಿದೆ. ಭಾರತೀಯರ ಪಾಲಿಗೆ ಪ್ರೇತಾತ್ಮಗಳಂತೆ ಕಾಡುವ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯನ್ನ ನಿಷೇಧಿಸಲು ಮುಂದಾಗಿದೆ. ಮುಂಬೈ ದಾಳಿಯ ಕರಾಳ ದಿನದ ಹೊತ್ತಲ್ಲೇ ಇಸ್ರೇಲ್ ಇಂಥಾ ನಿರ್ಧಾರ ಕೈಗೊಂಡಿದೆ.

ಹಮಾಸ್ ವಿರುದ್ಧ ಬಹುತೇಕ ಜಯ ಸಾಧಿಸಿರುವ ಇಸ್ರೇಲ್ ಸರ್ಕಾರ ಇದೀಗ ಭಾರತದ ಪರ ವಹಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯರ ಹತ್ಯೆಗೆ ಕಾರಣವಾದ ಲಷ್ಕರ್ ಇ ತೊಯ್ಬಾ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ತನ್ನ ದೇಶದಲ್ಲೂ ನಿಷೇಧ ಹೇರಿದೆ. 2008ರ ನವೆಂಬರ್ 26 ರಂದು ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯ ವಾರ್ಷಿಕ ಕರಾಳ ದಿನಗಳ ನೆನಪಿಗೆ ಕೆಲವೇ ದಿನ ಬಾಕಿ ಉಳಿದಿರುವ ಹೊತ್ತಲ್ಲೇ ಇಸ್ರೇಲ್ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಆದ್ರೆ   ಎಲ್ ಇ ಟಿ ಸಂಘಟನೆಯನ್ನ ನಿಷೇಧ ಮಾಡಿ ಅಂತಾ ಇಸ್ರೇಲ್ ಸರ್ಕಾರಕ್ಕೆ ಭಾರತ ಮನವಿಯನ್ನೇ ಮಾಡಿರಲಿಲ್ಲ. ಆದರೂ ಕೂಡ ಯಹೂದಿ ರಾಷ್ಟ್ರ ಇಂಥಾದ್ದೊಂದು ತಿರ್ಮಾನಕ್ಕೆ ಬಂದಿದ್ದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನ ನಿಷೇಧಿಸುವುದಾಗಿ ಘೋಷಣೆ ಮಾಡಿರುವ ಇಸ್ರೇಲ್ ರಾಯಭಾರಿ ಕಚೇರಿ ಈ ಬಗ್ಗೆ ಭಾರತ ಸರ್ಕಾರಕ್ಕೆ ವರದಿಯನ್ನೂ ನೀಡಿದೆ. ಎಲ್ ಇ ಟಿ ಕಾನೂನುಬಾಹಿರ ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿದ್ದು, ಇದರ ಬಗ್ಗೆ ಭಾರತ ಸರ್ಕಾರವು ಒಂದು ನಿರ್ಧಾರಕ್ಕೆ ಬರಬೇಕು. ಉಗ್ರ ಸಂಘಟನೆ ಎಂದು ನಿಷೇಧಿಸುವ ಕ್ರಮಕ್ಕೆ ಭಾರತದ ಯಾವುದೇ ಒತ್ತಡ ಇಲ್ಲ. ನಾವೇ ಸ್ವತಃ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈಗಾಗಲೇ ಎಲ್ ಇ ಟಿ ನಿಷೇಧ ಮಾಡಲು ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದಿದೆ. ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ನಿಷೇಧಿಸಲು ಪಟ್ಟಿ ಮಾಡುತ್ತದೆ. ಆದರೆ ಇದೇ ಮೊದಲ ಬಾರಿಗೆ ವಿದೇಶಿ ರಾಷ್ಟ್ರಕ್ಕೆ ತೊಂದರೆ ನೀಡಿದ ಸಂಘಟನೆಯ ಹೆಸರನ್ನ ಪಟ್ಟಿ ಮಾಡಿದೆ. ಈ ನಿಷೇಧವನ್ನು ನವೆಂಬರ್​​ 26ರಂದು ಮಾಡಲು ನಿರ್ಧರಿಸಿದೆ. ಯಾಕಂದ್ರೆ ನವೆಂಬರ್ 26 ಭಾರತದ ಪಾಲಿಗೆ ಅತ್ಯಂತ ಕರಾಳ ದಿನವಾಗಿದೆ. ಅಂದೇ ಮುಂಬೈನಲ್ಲಿ ಎಲ್ ಇಟಿ ಸಂಘಟನೆ ಮಾರಣಹೋಮ ನಡೆಸಿತ್ತು.

ಇದನ್ನೂ ಓದಿ : ಭಾರತಕ್ಕೆ ಬರುತ್ತಿದ್ದ ಹಡಗು ಕೆಂಪು ಸಮುದ್ರದಲ್ಲಿ ಹೌತಿಗಳಿಂದ ಹೈಜಾಕ್ – ಇಸ್ರೇಲ್ ಮೇಲಿನ ಸಿಟ್ಟಿಗೆ ಜಲಮಾರ್ಗ ಬಂದ್?

2008ರಲ್ಲಿ ಮುಂಬೈನಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆ ನಡೆಸಿದ್ದ ದಾಳಿಯಲ್ಲಿ 6 ಮಂದಿ ಯಹೂದಿಗಳೂ ಕೂಡ ಸಾವನ್ನಪ್ಪಿದ್ದರು. ಮುಂಬೈ ಭಯೋತ್ಪಾದನಾ ದಾಳಿಯ 15ನೇ ವರ್ಷದ ಸ್ಮರಣಾರ್ಥವಾಗಿ ಇಸ್ರೇಲ್ ದೇಶವು ಎಲ್ ಇಟಿಯನ್ನ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿರೋದಾಗಿ ಹೇಳಿದೆ. ಅಷ್ಟಕ್ಕೂ ಈ ಎಲ್ ಇಟಿ ಉಗ್ರ ಸಂಘಟನೆ ಹೆಸ್ರು ಕೇಳಿದ್ರೇನೆ ಭಾರತೀಯ ರಕ್ತ ಕುದಿಯುತ್ತೆ. ಯಾಕಂದ್ರೆ 2008ರಲ್ಲಿ ಇದೇ ಸಂಘಟನೆಯ ಉಗ್ರರ ಮುಂಬೈನಲ್ಲಿ ರಕ್ತಪಾತ ನಡೆಸಿದ್ದರು. ಇದೇ ನವೆಂಬರ್ ತಿಂಗಳಿನಲ್ಲೇ ನಡೆದಿದ್ದ ಈ ಘೋರ ದುರಂತಕ್ಕೆ ದಶಕವೇ ತುಂಬಿದ್ರೂ ಆ ಕರಾಳ ನೆನಪು ಮಾತ್ರ ಇನ್ನೂ ಮಾಸಿಲ್ಲ. ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್‌ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮವನ್ನೇ ನಡೆಸಿದ್ದರು. ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬೈಯ ಮೇಲೆ ಭೀಕರ ದಾಳಿ ನಡೆಸಿದ್ದರು. ನಾಲ್ಕು ದಿನಗಳ ಕಾಲ ನಡೆದ ನಿಜಕ್ಕೂ ಇಂದಿಗೂ ಭಾರತೀಯರನ್ನ ಬೆಚ್ಚಿ ಬೀಳಿಸುವಂತಿದೆ.

2008ರ ನವೆಂಬರ್ 21ರಂದು ಪಾಕಿಸ್ತಾನದ 10 ಉಗ್ರರು ಭಾರತಕ್ಕೆ ಬೋಟ್‌ ಮೂಲಕ ಎಂಟ್ರಿಯಾಗಿದ್ರು. ಬಳಿಕ ಗುರುತು ಮರೆಸಿಕೊಂಡು ಮುಂಬೈನಲ್ಲಿ ಸುತ್ತಾಡುತ್ತಿದ್ದ ಉಗ್ರರು 3 ದಿನಗಳ ಕಾಲ ಅಟ್ಟಹಾಸ ಮೆರೆದಿದ್ದರು. ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್‌ ಸ್ಫೋಟ ಮಾಡಿ ಮತ್ತು ಗುಂಡಿನ ದಾಳಿ ನಡೆಸಿದ್ದರು. ಉಗ್ರರ ದಾಳಿಯಿಂದಾಗಿ ವಿವಿಧ ದೇಶಗಳ ಪ್ರಜೆಗಳೂ ಸೇರಿದಂತೆ 166 ಜನ ಸಾವನ್ನಪ್ಪಿದ್ದರು. ಹಾಗೇ 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೇಶದ ವಾಣಿಜ್ಯೋದ್ಯಮದ ಹೆಮ್ಮೆಯಾಗಿ ತಲೆಯೆತ್ತಿ ನಿಂತಿದ್ದ ತಾಜ್‌, ಒಬೇರಾಯ್‌ ನಂತಹ ಹೋಟೆಲ್‌ ಗಳ ಮೇಲೆ ಉಗ್ರರು ಫೈರಿಂಗ್ ಮಾಡಿದ್ದರು. ಬಾಂಬ್‌ ಬ್ಲಾಸ್ಟ್‌ಗೆ ಹೋಟೆಲ್ ಗಳು ಹೊತ್ತಿ ಉರಿದಿದ್ದವು. ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿ ಹಲವಾರು ಜನ ನರಕಯಾತನೆ ಅನುಭವಿಸಿದ್ದರು.  ಜನರ ರಕ್ಷಣೆಗೆ ಆಗಮಿಸಿದ ಪೊಲೀಸರ ಪೈಕಿ ನಾಲ್ವರು ಪೊಲೀಸರು, ಹಾಗೂ ಯೋಧ ಸಂದೀಪ್ ಉನ್ನಿಕೃಷ್ಣನ್ ಗುಂಡಿನ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ್ದರು.

2008ರ ನವೆಂಬರ್ 26ರಂದು ನಡೆದಿದ್ದ ಉಗ್ರರ ಕ್ರೌರ್ಯವನ್ನ ಇಡೀ ವಿಶ್ವವೇ ಖಂಡಿಸಿತ್ತು. 10 ಉಗ್ರರ ಪೈಕಿ 9 ಜನರನ್ನ ಭಾರತೀಯ ರಕ್ಷಣಾ ಪಡೆಯ ವೀರರು ಹತ್ಯೆ ಮಾಡಿದ್ದರು. ಆದ್ರೆ ಉಗ್ರ ಅಜ್ಮಲ್‌ ಕಸಬ್‌ ಒಬ್ಬನನ್ನ ಮಾತ್ರ ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಬಳಿಕ ಈತನನ್ನು 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಪಾಕಿಸ್ತಾನದಲ್ಲಿ ಬೇರೂರಿರುವ ಈ ಉಗ್ರ ಸಂಘಟನೆ ಉದ್ದೇಶವೇ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.

ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಲ್ಲಿ 1990 ರಲ್ಲಿ ರೂಪುಗೊಂಡ ಲಷ್ಕರ್ ಎ ತೊಯ್ಬಾ ಸಂಘಟನೆ ಬಳಿಕ ಪಾಕಿಸ್ತಾನದ ಲಾಹೋರ್ ಬಳಿಯ ಮುರಿಡ್ಕೆಯಲ್ಲಿ ನೆಲೆಗೊಂಡಿದೆ. ಭಾರತದ ಜಮ್ಮು ಕಾಶ್ಮೀರದಲ್ಲಿ ಪದೇಪದೆ ದಾಳಿ ನಡೆಸುತ್ತಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ LETಯನ್ನ ಭಾರತದಲ್ಲಿ ಕಾನೂನುಬಾಹಿರ ಎಂದು ಘೋಷಿಸಿಲಾಗಿದೆ. 2001 ರಂದು ಅಮೆರಿಕ ಭಯೋತ್ಪಾದಕರ ಹೊರಗಿಡುವ ಪಟ್ಟಿಯಲ್ಲಿ ಎಲ್ ಇಟಿಯನ್ನ ಸೇರಿಸಿದೆ. ಬ್ರಿಟನ್‌ ನಲ್ಲೂ ನಿಷೇಧಿತ ಸಂಘಟನೆಯಾಗಿದ್ದು, 2005 ರಲ್ಲಿ ವಿಶ್ವಸಂಸ್ಥೆಯೂ ನಿಷೇಧ ಹೇರಿದೆ. 2002ರಲ್ಲಿ ಪಾಕಿಸ್ತಾನ ಎಲ್ ಇಟಿಯನ್ನ ನಿಷೇಧಿಸಿದ್ರೂ ಲಷ್ಕರ್ ಉಗ್ರರು ಈಗಲೂ ಪಾಕಿಸ್ತಾನದಲ್ಲೇ ನೆಲೆಗೊಂಡಿರೋದು ಗುಟ್ಟೇನು ಅಲ್ಲ. ಈ ಲಷ್ಕರ್ ಎ ತೊಯ್ಬಾದ ಸಂಘಟನೆಯ ಉಗ್ರರು ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯನ್ನು ನಂಬುವುದಿಲ್ಲ. ಅವರ ಸಿದ್ಧಾಂತದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರ ಆಳ್ವಿಕೆಯಲ್ಲಿರುವ ಮುಸ್ಲಿಮರ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ. ಅವರು ತಮ್ಮ ಗುರಿಯನ್ನು ಸಾಧಿಸಲು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಲು ಸಿದ್ಧರಿರುತ್ತಾರೆ. ಭಾರತವನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಇವರು ಜಮ್ಮು ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗೇ ಭಾರತದ ನವದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ವಾರಣಾಸಿ, ಕೋಲ್ಕತ್ತಾ, ಗುಜರಾತ್ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಸಾಲು ಸಾಲು ದಾಳಿಗಳನ್ನೂ ನಡೆಸಿದ್ದಾರೆ.  ಎಲ್ಇಟಿ ವರದಿ ಪ್ರಕಾರ ಪಾಕಿಸ್ತಾನದಾದ್ಯಂತ 2,200 ಕಚೇರಿಗಳನ್ನ ಈ ಉಗ್ರರು ಹೊಂದಿದ್ದಾರೆ. ಈ ಸಂಘಟನೆಯು ಉಗ್ರಗಾಮಿ ಕಾರ್ಯಕರ್ತರು ಮತ್ತು ಧಾರ್ಮಿಕ ವಿದ್ವಾಂಸರಿಗೆ ತರಬೇತಿ ನೀಡುತ್ತಾರೆ.

ಎಲ್‌ಇಟಿಯ ಹಣದ ಮುಖ್ಯ ಮೂಲ ಐಎಸ್‌ಐ. ಸೌದಿ ಅರೇಬಿಯಾ ಕೂಡ ಹಣವನ್ನು ಒದಗಿಸುತ್ತದೆ. AK ಸರಣಿಯ ರೈಫಲ್‌ಗಳು, LMG/HMG ಗಳು, ಹ್ಯಾಂಡ್ ಗ್ರೆನೇಡ್‌ಗಳು, ರಾಕೆಟ್‌ಗಳು, ಪಿಸ್ತೂಲ್‌ಗಳು, ಮೋರ್ಟಾರ್‌ಗಳು, ಟ್ಯಾಂಕ್ ವಿರೋಧಿ ಗಣಿಗಳು, ಸಿಬ್ಬಂದಿ ವಿರೋಧಿ ಗಣಿಗಳು, ವಿಮಾನ ವಿರೋಧಿ ಗನ್, ರಿಮೋಟ್ ಕಂಟ್ರೋಲ್ ಸಾಧನ, ಸ್ಫೋಟಕ ಸಾಧನಗಳು ಮತ್ತು ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನ ಹೊಂದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಪದೇಪದೆ ದಾಳಿ ನಡೆಸೋದು ಮುಸ್ಲಿಮೇತರ ನಾಗರಿಕರನ್ನು ಹತ್ಯೆ ಮಾಡುವ ಮೂಲಕ ಕ್ರೌರ್ಯ ಮರೆಯುತ್ತಿದ್ದಾರೆ. ಇದೀಗ ಇಂತಹ ಸಂಘಟನೆಯನ್ನ ಇಸ್ರೇಲ್ ನಿಷೇಧಿಸುವುದಾಗಿ ಘೋಷಿಸಿದೆ. ಕೆಲ ತಿಂಗಳ ಹಿಂದಷ್ಟೇ ಇದೇ ಇಸ್ರೇಲ್ ಸರ್ಕಾರ ಹಮಾಸ್ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುವಂತೆ ಭಾರತಕ್ಕೆ ಆಗ್ರಹಿಸಿತ್ತು. ಹಮಾಸ್ ಸಂಘಟನೆಯನ್ನ ನಿಷೇಧಿಸುವ ಸಮಯ ಬಂದಿದೆ ಎಂದು ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಹೇಳಿಕೆ ನೀಡಿದ್ದರು. ಆದ್ರೆ ಪ್ರಧಾನಿ ನರೇಂದ್ರ ಮೋದಿ ಹಮಾಸ್ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುತ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

Shantha Kumari