ಗಾಜಾ ಆಸ್ಪತ್ರೆ ಮೇಲಿನ ವೈಮಾನಿಕ ದಾಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು – ದಾಳಿ ಮಾಡಿದವರು ಇಸ್ರೇಲಿಗರಲ್ಲವಾ?
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ತಾರಕ್ಕೇರಿದೆ. ಈ ಕದನದಲ್ಲಿ ಸಾವಿರಾರು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಮಂಗಳವಾರ ದಕ್ಷಿಣ ಗಾಜಾದಲ್ಲಿರುವ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ಭಾರೀ ಪ್ರಮಾಣದ ವಾಯು ದಾಳಿ ನಡೆಸಿದೆ. ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದು ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದ ಬಳಿಕ ಒಂದೇ ಸ್ಥಳದಲ್ಲಿ ದಾಖಲಾದ ಹೆಚ್ಚಿನ ಸಾವಿನ ಪ್ರಮಾಣವಾಗಿದೆ.
ಯುದ್ಧ ಆರಂಭವಾದಾಗಿನಿಂದ ಸ್ಥಳಾಂತರಗೊಂಡಿದ್ದ 35,000ಕ್ಕೂ ಹೆಚ್ಚು ಜನರು ಇಲ್ಲಿನ ಆಸ್ಪತ್ರೆಗಳಲ್ಲಿ ಹಾಗೂ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದರು. ಹೀಗೆ ಅಲ್ ಅಹ್ಲಿ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಸುಮಾರು 4500 ಮಂದಿ ಆಶ್ರಯ ಪಡೆದುಕೊಂಡಿದ್ದರು. ಈ ಪ್ರದೇಶವನ್ನು ದಾಳಿ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದ್ದರೂ ಅದರ ಮೇಲೆ ದಾಳಿ ನಡೆಸಲಾಗಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಆರೋಪಿಸಿದೆ. ಆದರೆ ಇಸ್ರೇಲ್ ಈ ಆರೋಪವನ್ನು ತಳ್ಳಿಹಾಕಿದೆ. ನಾವು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ. ಹಮಾಸ್ ರಾಕೆಟನ್ನು ತಪ್ಪಾಗಿ ಉಡಾವಣೆ ಮಾಡಿದ್ದರಿಂದ ಅವಘಡ ಘಟಿಸಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.
ಇದನ್ನೂ ಓದಿ: ವಿಮಾನದ ಶೌಚಾಲಯದಲ್ಲಿ ಬಾಂಬ್ ಇರುವ ಶಂಕೆ – ಪರಿಶೀಲನೆ ನಡೆಸಿದಾಗ ಅಧಿಕಾರಿಗಳಿಗೆ ಸಿಕ್ಕಿದ್ದು ಅಡಲ್ಟ್ ಡೈಪರ್!
ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಮಾತನಾಡಿ, ವೈಮಾನಿಕ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳಿಂದ ದೇಹಗಳನ್ನು ತೆಗೆಯುತ್ತಿದ್ದಾರೆ. ಇಸ್ರೇಲ್‌ನ 11 ದಿನಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 3,000 ಜನರು ಸಾವನ್ನಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಈ ಕುರಿತಾಗಿ ಪರಿಶೀಲನೆ ನಡೆಸುವುದಾಗಿ ಇಸ್ರೇಲ್ ಪ್ರತಿಕ್ರಿಯೆ ನೀಡಿದೆ. ಅಲ್ಲದೆ, ಈ ದಾಳಿಯ ಸಮಯದಲ್ಲಿ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶ್ವಸಂಸ್ಥೆ ನಿರಾಶ್ರಿತರ ಕೇಂದ್ರಕ್ಕೂ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ಪ್ಯಾಲೇಸ್ತೀನ್ ಸರ್ಕಾರ 3 ದಿನಗಳ ಮೌನಾಚರಣೆ ಘೋಷಣೆ ಮಾಡಿದೆ. ಈ ನಡುವೆ ಇಸ್ರೇಲ್ ಸತತ ದಾಳಿಯಿಂದಾಗಿ ಗಾಜಾ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಲುಪಿದೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ನೀರು, ಆಹಾರ ಹಾಗೂ ವಿದ್ಯುತ್ ಕೊರತೆ ಎದುರಾಗಿದೆ. ಗಾಜಾದಲ್ಲಿ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಇವುಗಳ ಅಡಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇಸ್ರೇಲ್ ಗಿಂದು ಬೈಡನ್ ಭೇಟಿ
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷ ಬಿಗಡಾಯಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬುಧವಾರ ಇಸ್ರೇಲ್’ಗೆ ಭೇಟಿ ನೀಡುತ್ತಿದ್ದಾರೆ. ಪ್ಯಾಲೆಸ್ತೀನಿಗಳ ಜೊತೆಗಿನ ಯುದ್ಧದಲ್ಲಿ ಇಸ್ರೇಲ್’ಗೆ ಬೆಂಬಲ ಸೂಚಿಸುವ ಸಲುವಾಗಿ ಬೈಡೆನ್ ಭೇಟಿ ನೀಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಭೇಟಿ ವೇಳೆ ಇಸ್ರೇಲ್ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.