ಮಧ್ಯಗಾಜಾದಲ್ಲಿ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ – 68 ಪ್ಯಾಲೆಸ್ಟೀನಿಯನ್ನರು ಸಾವು!
ಹಮಾಸ್ ಹಾಗೂ ಇಸ್ರೇಲ್ ನಡುವಿನ ದಾಳಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ಬಂಡುಕೋರರ ನಿಯಂತ್ರಣದಲ್ಲಿರುವ ಗಾಜಾದ ಮಧ್ಯಭಾಗದಲ್ಲಿ ಇಸ್ರೇಲ್ ಸೇನೆ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಈ ಭೀಕರ ದಾಳಿಯಲ್ಲಿ 68 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜಗತ್ತಿನ ಪಾಲಿಗೆ ಅತ್ಯಂತ ನಿರ್ಣಾಯಕವಾಗಲಿದೆ 2024 – ಅಮೆರಿಕ ಸೇರಿ 40 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆ
ಮಧ್ಯ ಗಾಜಾದ ಪೂರ್ವಕ್ಕಿರುವ ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ಈ ದಾಳಿ ನಡೆದಿದೆ. ಘಟನೆಯಲ್ಲಿ 12 ಮಹಿಳೆಯರು, 7 ಮಕ್ಕಳು ಸೇರಿ 68 ಜನರು ಮೃತಪಟ್ಟಿದ್ದಾರೆ. ಗಾಜಾದ ಆರೋಗ್ಯ ಸಚಿವಾಲಯ ಈ ವಿಷಯವನ್ನು ಖಚಿತಪಡಿಸಿದೆ. ಈ ವಾರಾಂತ್ಯದಲ್ಲಿ 15 ಇಸ್ರೇಲಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಅದು ಹೇಳಿದೆ.
ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆ ಒತ್ತಡ ಹಾಕುತ್ತಿದ್ದರೂ, ಇದಕ್ಕೆ ಸೊಪ್ಪು ಹಾಕದೆ ಇಸ್ರೇಲ್ ಗಾಜಾದಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಗಾಜಾದಲ್ಲಿರುವ ಎಂಟು ನಿರಾಶ್ರಿತರ ಶಿಬಿರಗಳಲ್ಲಿರುವ ಹಲವರು ಆಹಾರ, ಔಷಧ ಸೇರಿದಂತೆ ಇನ್ನಿತರೆ ಅವಶ್ಯಕ ವಸ್ತುಗಳಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆಯು (ಯುಎನ್ಆರ್ಡಬ್ಲ್ಯುಎ) ನೀಡುವ ಸಹಾಯವನ್ನೇ ಅವಲಂಬಿಸಿದ್ದಾರೆ.
ಇಲ್ಲಿಯವರೆಗೂ ಗಾಜಾದ ಹಲವು ಪ್ರದೇಶಗಳು ನಾಶವಾಗಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಗಾಜಾದಿಂದ 23 ಲಕ್ಷ ಜನರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.