ಮತ್ತೆ ಇರಾನ್- ಇಸ್ರೇಲ್ ಸಂಘರ್ಷ ಶುರು! – ಟೆಹರಾನ್ ಮೇಲೆ ಇಸ್ರೇಲ್ನಿಂದ ಕ್ಷಿಪ್ಪಣಿ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದೆ. ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ವಿರುದ್ಧ ಮುನ್ನೆಚ್ಚರಿಕಾ ದಾಳಿ ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮಗನ ಯಶಸ್ಸು ನೋಡುವ ಮೊದಲೇ ಅನಾರೋಗ್ಯಕ್ಕೆ ಬಲಿಯಾದ ತಂದೆ – ಅಪ್ಪನ ಅಂತ್ಯಕ್ರಿಯೆ ಮುಗಿಸಿ ತಂಡಕ್ಕೆ ಮರಳಿದ ರಿಂಕು ಸಿಂಗ್
2025ರ ಜೂನ್ನಲ್ಲಿ 12 ದಿನಗಳ ಕಾಲ ನಡೆದ ಇರಾನ್–ಇಸ್ರೇಲ್ ವಾಯುಯುದ್ಧದ ಬಳಿಕ ಈ ದಾಳಿ ನಡೆದಿದೆ. ಇರಾನ್ ತನ್ನ ಅಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಮುಂದುವರಿಸಿದರೆ ಮತ್ತೆ ದಾಳಿ ನಡೆಸುವುದಾಗಿ ಅಮೆರಿಕಾ ಮತ್ತು ಇಸ್ರೇಲ್ ಮುಂಚೆಯೇ ಎಚ್ಚರಿಸಿದ್ದವು. ಇಂದು (ಇರಾನ್ ರಾಜಧಾನಿ ಟೆಹರಾನ್ ನಗರದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭವನ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಇಸ್ರೇಲ್ ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ.
ಶನಿವಾರ ನಡೆದ ಇಸ್ರೇಲ್ ಕಾರ್ಯಾಚರಣೆ ಅಮೆರಿಕದ ಜೊತೆ ಸಂಯೋಜಿತವಾಗಿತ್ತು ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ತಿಂಗಳುಗಳ ಕಾಲ ಯೋಜಿತವಾಗಿದ್ದು, ದಾಳಿ ದಿನಾಂಕವನ್ನು ವಾರಗಳ ಹಿಂದೆ ನಿಗದಿಪಡಿಸಲಾಗಿತ್ತು ಎಂದು ಹೇಳಲಾಗಿದೆ. ಈ ತಿಂಗಳಷ್ಟೇ ಅಮೆರಿಕಾ ಮತ್ತು ಇರಾನ್ ಹಲವು ವರ್ಷಗಳ ವಿವಾದವನ್ನು ರಾಜತಾಂತ್ರಿಕವಾಗಿ ಪರಿಹರಿಸಲು ಮಾತುಕತೆ ಪುನರಾರಂಭಿಸಿತ್ತು. ಆದರೆ ಈ ದಾಳಿಯ ಹಿನ್ನೆಲೆ ಮಾತುಕತೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಇರಾನ್ ಮೇಲಿನ ದಾಳಿ ಬೆನ್ನಲ್ಲೇ ಇಸ್ರೇಲ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ತುರ್ತುಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ಇಸ್ರೇಲ್ ನಿರ್ಬಂಧಿಸಿದೆ. ಇನ್ನು ಇಸ್ರೇಲ್ ನಡೆಸಿದ ದಾಳಿ ವೇಳೆ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ತೇಹ್ರಾನ್ನಲ್ಲಿ ಇಲ್ಲ ಎಂದು ವರದಿಯಾಗಿದೆ. ಅಮೆರಿಕಾ ಅಧಿಕಾರಿಗಳು ನ್ಯೂಯಾರ್ಕ್ ಟೈಮ್ಸ್ ಮತ್ತು ರಾಯಟರ್ಸ್ಗೆ ನೀಡಿರುವ ಮಾಹಿತಿಯ ಪ್ರಕಾರ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ನೋಡಿರಿ

