ಗಾಜಾ ಪಟ್ಟಿ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್ – 24 ಗಂಟೆಗಳಲ್ಲಿ 700 ಮಂದಿ ಸಾವು
ಹಮಾಸ್ ಹಾಗೂ ಇಸ್ರೇಲ್ ನಡುವಿನ ಕಾದಾಟ ತೀವ್ರಗೊಂಡಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡಬೇಕೆಂದು ಇಸ್ರೇಲ್ ಪಣತೊಟ್ಟಿದೆ. ಹೀಗಾಗಿ ಇಸ್ರೇಲ್ ಗಾಜಾಪಟ್ಟಿ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಮಂಗಳವಾರ ಕೂಡ ಗಾಜಾ ನಗರದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಹಮಾಸ್ ಉಗ್ರರೇ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಸೇನೆ ಹಮಾಸ್‌ನ 400 ಪ್ರಮುಖ ಉಗ್ರರನ್ನು ಗುರಿಯಾಗಿಸಿ ಮಂಗಳವಾರ ರಾತ್ರೋರಾತ್ರಿ ಗಾಜಾ ನಗರದ ಮೇಲೆ ದಾಳಿ ನಡೆಸಿದೆ. ಆದರೆ, ದಾಳಿಯಲ್ಲಿ 700ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ಸಾವಿರಾರು ಜನರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲು ಕೂಡ ಆಗುತ್ತಿಲ್ಲ. ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಮರ ಆರಂಭವಾದ ಬಳಿಕ ಇಸ್ರೇಲ್ ನಡೆಸಿದ ಭೀಕರ ದಾಳಿ ಇದಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 7 ದೇಶಗಳ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಶ್ರೀಲಂಕಾ – ಭಾರತೀಯರಿಗೂ ಸಿಗಲಿದ್ಯಾ ಈ ಸೌಲಭ್ಯ?
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧ ಆರಂಭವಾಗಿ ಇಂದಿಗೆ 20 ದಿನಗಳು ಕಳೆದಿದ್ದು, ದಾಳಿಯಲ್ಲಿ ಇದುವರೆಗೆ ಇದುವರೆಗೆ 7,100 ಜನ ಮೃತಪಟ್ಟಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್ ಸತತ ದಾಳಿಗೆ 5,700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.
ಇನ್ನು ಇಸ್ರೇಲ್ ಹಾಗೂ ಹಮಾಸ್ ನಡುವಿನ ನಿಲ್ಲದ ಯುದ್ಧದ ಬಗ್ಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕಳವಳ ವ್ಯಕ್ತಪಡಿಸಿದೆ. ನಿರಂತರವಾಗಿ ನಡೆಯುತ್ತಿರುವ ಬಾಂಬ್ ದಾಳಿಗಳಿಂದ ಗಾಜಾದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಯುದ್ಧ ಆ ಪ್ರದೇಶದಲ್ಲಿ ವ್ಯಾಪಕ ಸಂಘರ್ಷವನ್ನು ಉಂಟು ಮಾಡಬಹುದು ಎಂದು ಹೇಳಿದೆ.