ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್‌ ಸೇನೆ!

ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್‌ ಸೇನೆ!

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಭೀಕರ ಯುದ್ಧ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇಸ್ರೇಲ್‌ ಸೇನೆ ಹಮಾಸ್‌ ವಿರುದ್ಧ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಸ್ರೇಲ್  ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಶುಕ್ರವಾರ (ಡಿಸೆಂಬರ್ 15) ಇಸ್ರೇಲ್ ಸೇನೆಯು ಆಕಸ್ಮಿಕವಾಗಿ ತನ್ನದೇ ದೇಶದ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಇನ್ನುಮುಂದೆ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾದ ಅವಶ್ಯಕತೆ ಇಲ್ಲ!

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ,  ಇಸ್ರೇಲಿ ಸೈನಿಕರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ತಮಗೆ ಅಪಾಯ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇದು ನಮಗೆಲ್ಲರಿಗೂ ದುಃಖಕರ ಘಟನೆಯಾಗಿದೆ ಮತ್ತು ಈ ಘಟನೆಗೆ ಎಲ್ಲದಕ್ಕೂ IDF ಕಾರಣವಾಗಿದೆ ಎಂದು ಹಗರಿ ಹೇಳಿದ್ದಾರೆ.

ಮೃತರನ್ನು ಸಮರ್ ತಲಲ್ಕಾ, 22, ಯೋಟಮ್ ಹೈಮ್, 28, ಮತ್ತು ಅಲೋನ್ ಶಮ್ರಿಜ್, 26 ಎಂದು ಗುರುತಿಸಲಾಗಿದೆ. ದೊಡ್ಡ ಪ್ರಮಾದ ನಡೆದುಹೋಗಿದೆ, ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಹಿಂದಿರುಗಿಸುವ ಅತ್ಯುನ್ನತ ಪ್ರಯತ್ನದೊಂದಿಗೆ ಮುಂದುವರಿಯುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರತಿಜ್ಞೆ ಮಾಡಿದರು.

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಮಾರಣಾಂತಿಕ ದಾಳಿಯನ್ನು ನಡೆಸಿತು, ಇದರಲ್ಲಿ ಅನೇಕ ಜನರು ಸಾವನ್ನಪ್ಪಿದರು ಮತ್ತು ಇನ್ನೂರಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು.

ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿತು. ಅಂದಿನಿಂದ, ಒಂದು ವಾರದ ಕದನ ವಿರಾಮ ಹೊರತುಪಡಿಸಿ ಯುದ್ಧ ಮುಂದುವರೆದಿದೆ.

ಅಕ್ಟೋಬರ್ 7 ರಿಂದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 18,787 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಇಸ್ರೇಲ್​ನಲ್ಲಿ ಸಾವಿನ ಸಂಖ್ಯೆ ಸುಮಾರು 1,200 ಆಗಿದೆ.

Shwetha M