ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯನ್ನು ನಿಷೇಧಿಸಿದ ಇಸ್ರೇಲ್! – ಭಾರತ ಮನವಿ ಮಾಡದಿದ್ದರೂ ಈ ನಿರ್ಧಾರ ಕೈಗೊಂಡಿದ್ದೇಕೆ?
2008 ನವೆಂಬರ್ 26 ಮುಂಬೈ ನಗರದಲ್ಲಿ ನಡೆಯಬಾರದ ಘೋರ ದುರಂತವೊಂದು ನಡೆದುಹೋಗಿತ್ತು. ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಿದ್ದರು. ಸತತ ಮೂರು ದಿನಗಳ ಕಾಲ ದೇಶದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮವನ್ನೇ ನಡೆಸಿದ್ದರು. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಭಯೋತ್ಪಾದನಾ ದಾಳಿಯಾಗಿ ನಡೆದು ನವೆಂಬರ್ 26 ಕ್ಕೆ 15 ವರ್ಷವಾಗುತ್ತದೆ. ಈ ಕರಾಳ ದಿನದ ಸ್ಮರಣಾರ್ಥ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ನಿಷೇಧಿಸುವುದಾಗಿ ಇಸ್ರೇಲ್ ಘೋಷಿಸಿದೆ. ಮುಂಬೈ ದಾಳಿ ಖಂಡನೀಯ ಎಂದು ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ದಣಿದಿದ್ದ ರಾಹುಲ್ ಗಾಂಧಿ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ
ಹೌದು, ಇಸ್ರೇಲ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ನಿಷೇಧಿಸುವುದಾಗಿ ಘೋಷಿಸಿದೆ. ಭಾರತ ಸರ್ಕಾರದ ಯಾವುದೇ ಮನವಿ ಮಾಡದಿದ್ದರೂ ಕೂಡ ಸ್ವ ಇಚ್ಛೆಯಿಂದ ಇಸ್ರೇಲ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಲಷ್ಕರ್-ಎ-ತೈಯ್ಬಾ ಸಂಘಟನೆಯನ್ನು ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪೂರೈಸಿದೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ಪಟ್ಟಿ ಮಾಡಿದೆ. ನೂರಾರು ಭಾರತೀಯ ನಾಗರಿಕರು ಮತ್ತು ಇತರರ ಹತ್ಯೆಗೆ ಈ ಭಯೋತ್ಪಾದಕ ಸಂಘಟನೆ ಹೊಣೆಯಾಗಿದೆ ಎಂದು ತಿಳಿಸಿದೆ.
ಭಯೋತ್ಪಾದಕ ಸಂಘಟನೆ ದಾಳಿಯ ಸಂತ್ರಸ್ತರು, ಇಸ್ರೇಲ್ ಸೇರಿದಂತೆ ಮುಂಬೈ ದಾಳಿಯಲ್ಲಿ ಬದುಕುಳಿದ ಮತ್ತು ದುಃಖಿತ ಕುಟುಂಬಗಳಿಗೆ ಇಸ್ರೇಲ್ ಸಂತಾಪ ಸೂಚಿಸಿದೆ. ಭವಿಷ್ಯದ ಶಾಂತಿಯುತ ಸಮಾಜದ ಭರವಸೆಯಲ್ಲಿ ನಾವು ನಿಮ್ಮೊಂದಿಗೆ ಒಂದಾಗಿದ್ದೇವೆ ಎಂದು ಹೇಳಿದೆ.