ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ ಇಸ್ರೇಲ್ – ಐವರು ಭಯೋತ್ಪಾದಕರ ಹತ್ಯೆ
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರ ದಿನದಿಂದ ದಿನಕ್ಕೆ ಒಂದೊಂದು ದಿಕ್ಕು ಪಡೆಯುತ್ತಿದೆ. ಇಸ್ರೇಲ್ ಗಾಜಾದಲ್ಲಿ ನಿರಂತರ ಒಂದಲ್ಲ ಒಂದು ಕಾರ್ಯಚರಣೆ ಮಾಡುತ್ತಿದೆ. ಇಸ್ರೇಲ್ನ್ನು ಕೆಣಕಿದ ಹಮಾಸ್ ಉಗ್ರರನ್ನು ಸರ್ವನಾಶ ಮಾಡುವ ಪಣತೊಟ್ಟ ಇಸ್ರೇಲ್ ಇದೀಗ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದೆ. ಇದೀಗ ಇಸ್ರೇಲ್ ಸೇನೆ ಜೆನಿನ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 5 ಪ್ಯಾಲೇಸ್ಟಿನಿಯನ್ ಭಯೋತ್ಪಾದಕರ ಹತ್ಯೆ ಮಾಡಿರುವುದಾಗಿ ಹೇಳಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಶುಕ್ರವಾರ ತಡರಾತ್ರಿ ಜೆನಿನ್‌ನಲ್ಲಿ ಭೀಕರ ದಾಳಿ ನಡೆಸಿದೆ. ಈ ದಾಳಿಯ ಸಮಯದಲ್ಲಿ ಐವರು ಪ್ಯಾಲೇಸ್ಟಿನಿಯನ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇಸ್ರೇಲ್ ಸೇನೆಯ ಕಾರ್ಯಾಚರಣೆಯ ವೇಳೆ ಹಲವಾರು ಭಯೋತ್ಪಾದಕರು ಸ್ಥಳೀಯ ಆಸ್ಪತ್ರೆಯಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದಾಗ ಅವರನ್ನು ಕೊಲ್ಲಲಾಯಿತು. ಈ ವೇಳೆ ಹಲವರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇದನ್ನೂ ಓದಿ: ಗಾಜಾದ ಅತಿ ದೊಡ್ಡ ಆಸ್ಪತ್ರೆ ಕೆಳಗೆ ಹಮಾಸ್ ಕೇಂದ್ರ ಕಚೇರಿ – ಉಗ್ರರಿಗಾಗಿ ರೋಗಿಗಳ ಮಾರಣಹೋಮ?
ಅಂತೆಯೇ ದಾಳಿಯ ಸಮಯದಲ್ಲಿ, ಇಸ್ರೇಲಿ ಡ್ರೋನ್ ಸೈನಿಕರ ಮೇಲೆ ಗುಂಡು ಹಾರಿಸುತ್ತಿರುವ ಭಯೋತ್ಪಾದಕರ ಗುಂಪನ್ನು ಹೊಡೆದು ಹಾಕಿದೆ. ಕಾರ್ಯಾಚರಣೆ ವೇಳೆ ಇತರೆ ಪ್ಯಾಲೆಸ್ಟೀನಿಯಾದವರು ಇಸ್ರೇಲ್ ಸೈನಿಕರ ಮೇಲೆ ಸ್ಫೋಟಕಗಳನ್ನು ಎಸೆದರು. ಜೆನಿನ್‌ನ ಇಬ್ನ್ ಸಿನಾ ಆಸ್ಪತ್ರೆಯ ದಿಕ್ಕಿನಲ್ಲಿ ಹಲವಾರು ಬಂದೂಕುಧಾರಿಗಳು ಕಾರುಗಳು ಮತ್ತು ಆಂಬ್ಯುಲೆನ್ಸ್‌ನಲ್ಲಿ ಓಡಿಹೋದರು. ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಒಬ್ಬ ಭಯೋತ್ಪಾದಕ ಸಿಕ್ಕಿಬಿದ್ದಿದ್ದಾನೆ. ಆತನ ವಾಹನವನ್ನು ತಪಾಸಣೆ ನಡೆಸಿದಾಗ ಮೂರು ಎಂ-16 ರೈಫಲ್‌ಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಸೇನೆ ಐಡಿಎಫ್ ಮಾಹಿತಿ ನೀಡಿದೆ.
ಇತರ ಭಯೋತ್ಪಾದನಾ ಕಾರ್ಯಾಚರಣೆಗಳಲ್ಲಿ, ಹೆಬ್ರಾನ್‌ನಲ್ಲಿನ ಭದ್ರತಾ ಪಡೆಗಳು ಜೆರುಸಲೆಮ್‌ನ ದಕ್ಷಿಣದ ಚೆಕ್‌ಪಾಯಿಂಟ್‌ನಲ್ಲಿ ಗುರುವಾರ ಗುಂಡಿನ ದಾಳಿಗೆ ಕಾರಣವಾದ ಮೂವರು ಭಯೋತ್ಪಾದಕರ ಮನೆಗಳನ್ನು ಇಸ್ರೇಲ್ ಸೇನೆ ಕೆಡವಿ ಹಾಕಿದೆ. ಇನ್ನು ಇಸ್ರೇಲ್ ಮಿಲಿಟರಿ ಪೋಲೀಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ 20 ವರ್ಷದ ಅವ್ರಹಾಂ ಫೆಟೆನಾ ಕಾರ್ಯಾಚರಣೆ ವೇಳೆ ಹತ್ಯೆಯಾಗಿದ್ದು, ಇನ್ನೂ ಐವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಹಮಾಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ದಾಳಿಯ ಸಮಯದಲ್ಲಿ ಜುಡಿಯಾ ಮತ್ತು ಸಮರಿಯಾದ ಸುತ್ತಮುತ್ತ ಒಟ್ಟಾರೆ 21 ಪ್ಯಾಲೆಸ್ಟೀನಿಯನ್ನರನ್ನು ಬಂಧಿಸಲಾಯಿತು, ಅವರಲ್ಲಿ ಆರು ಮಂದಿ ಹಮಾಸ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.