ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್ – ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ
ಹಮಾಸ್ ಹಾಗೂ ಇಸ್ರೇಲ್ ನಡುವಿನ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡುವ ಪಣ ತೊಟ್ಟಿರುವ ಇಸ್ರೇಲ್ ಹಮಾಸ್ ಮೇಲೆ ದಾಳಿ ಮಾಡುತ್ತಲೇ ಇದೆ. ಬುಧವಾರ ಮತ್ತೆ ಗಾಜಾಪಟ್ಟಿಯ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದೆ.
ಇಸ್ರೇಲ್ ಬುಧವಾರ ನಡೆಸಿದ ವಾಯುದಾಳಿಯಲ್ಲಿ ಹಮಾಸ್ ಉಗ್ರರ ಟಾಪ್ ಕಮಾಂಡರ್ ಇಬ್ರಾಹಿಂ ಬ್ಯಾರಿ ಹತ್ಯೆಗೀಡಾದ್ದಾನೆ. ಇಸ್ರೇಲ್ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಈತ ಪ್ರಮುಖ ಮಾರ್ಗದರ್ಶಕನೂ ಆಗಿದ್ದ ಎನ್ನಲಾಗಿದೆ. ಅಲ್ಲದೇ ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ ಅಲ್ ಜಜೀರಾ ಕುಟುಂಬದ 19 ಮಂದಿ, ಸುಮಾರು 50 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಇಸ್ರೇಲ್ ಒತ್ತಾಯಕ್ಕೆ ಮಣಿದು ಹಮಾಸ್ ಗೆ ಉಗ್ರ ಪಟ್ಟ ಕಟ್ಟುತ್ತಾ ಭಾರತ? – ಪ್ರಧಾನಿ ಮೋದಿ ಮುಂದಿನ ನಡೆಯೇನು?
ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಬ್ಯಾರಿಯನ್ನು ತೊಡೆದುಹಾಕಲು ನಿರಾಶ್ರಿತರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಪಡೆಗಳು ತಿಳಿಸಿವೆ. ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಸೇವಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ದೇಹಗಳು ಮತ್ತು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಹಮಾಸ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗವಾಗಿರುವ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್, ಗಾಜಾವನ್ನು ಇಸ್ರೇಲಿ ಪಡೆಗಳು ಸ್ಮಶಾನವಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಹಮಾಸ್ ನಡೆಸುತ್ತಿರುವ ಗಜಾನ್ ಆರೋಗ್ಯ ಸಚಿವಾಲಯವು, ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸತ್ತು, 150 ಮಂದಿ ಗಾಯಗೊಂಡಿದ್ದಾರೆ ಎಂದಿದೆ. ಇದು ಇಸ್ರೇಲಿನ ಘೋರ ಹತ್ಯಾಕಾಂಡ. ಇನ್ನೂ ಹೆಚ್ಚಿನ ಮಂದಿ ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಇಸ್ರೇಲ್ ಗಾಜಾ ನಿವಾಸಿಗಳಿಗೆ ಪ್ರದೇಶವನ್ನು ತೊರೆಯುವಂತೆ ಎಚ್ಚರಿಕೆ ನೀಡಿದೆ. ಆದ್ರೆ ಕೆಲವು ಕುಟುಂಬಗಳು ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ.