ಇಸ್ರೇಲ್ ದಾಳಿಯಲ್ಲಿ ಮತ್ತೆ 175ಕ್ಕೂ ಹೆಚ್ಚು ಮಂದಿ ದುರ್ಮರಣ – ಐವರು ಒತ್ತೆಯಾಳುಗಳು ಸಾವು
ಇಸ್ರೇಲ್ ಹಾಗೂ ಹಮಾಸ್ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದೆ. ಗಾಜಾದಲ್ಲಿ ಮತ್ತೆ ಗುಂಡಿನ ಸದ್ದು ಕೇಳಲು ಪ್ರಾರಂಭವಾಗಿದೆ. ಅದರಂತೆ ಶುಕ್ರವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳಾಗಿವೆ.
ಕದನ ವಿರಾಮದ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ತೀವ್ರ ದಾಳಿ ನಡೆಸುತ್ತಿದ್ದಾರೆ. ದಾಳಿ ಪುನಾರಾಂಭವಾದ ಬಳಿಕ 175ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ವಿಶ್ವದಾದ್ಯಂತ ಪತನಗೊಂಡಿದ್ದ UFO, ಅನ್ಯಗ್ರಹ ಜೀವಿಗಳ ಶವಗಳು ಅಮೆರಿಕ ವಶದಲ್ಲಿ!
ಒಂದು ಕಡೆ ಹಮಾಸ್, ಇಸ್ರೇಲ್ ದಾಳಿ ಮುಂದುವರಿದಿದ್ದರೆ, ಇನ್ನೊಂದೆಡೆ ಗಾಜಾಪಟ್ಟಿಯಲ್ಲಿ ಐವರು ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಐವರು ಒತ್ತೆಯಾಳುಗಳು ಸಾವನ್ನಪ್ಪಿರುವ ಬಗ್ಗೆ ಇಸ್ರೇಲ್ ಸೇನೆ ಖಚಿತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಒತ್ತೆಯಾಳುಗಳಾದ ಎಲಿಯಾಹು ಮಾರ್ಗಲಿಟ್, ಮಾಯಾ ಗೊರೆನ್, ರೋನೆನ್ ಎಂಗಲ್ ಮತ್ತು ಆರ್ಯೆ ಜಲ್ಮನೋವಿಟ್ಜ್ ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಇಸ್ರೇಲ್ ರಕ್ಷಣಾ ಪಡೆ ಹಾಗೂ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸೇನಾ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ. ಒಫಿರ್ ತ್ಸರ್ಪಾತಿ ಎಂದು ಗುರುತಿಸಲಾದ 5ನೇ ವ್ಯಕ್ತಿಯ ಮೃತದೇಹವನ್ನು ಇಸ್ರೇಲ್ ಸೇನೆ ಮರಳಿ ಪಡೆದಿದೆ.