‘ಆಪರೇಷನ್‌ ಅಜಯ್‌’- ಮೊದಲ ವಿಮಾನದಲ್ಲಿ ಇಸ್ರೇಲ್‌ನಿಂದ 212 ಭಾರತೀಯರು ತಾಯ್ನಾಡಿಗೆ ವಾಪಸ್

‘ಆಪರೇಷನ್‌ ಅಜಯ್‌’- ಮೊದಲ ವಿಮಾನದಲ್ಲಿ ಇಸ್ರೇಲ್‌ನಿಂದ 212 ಭಾರತೀಯರು ತಾಯ್ನಾಡಿಗೆ ವಾಪಸ್

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಸ್ರೇಲ್‌ನಿಂದ ದಹೆಲಿಗೆ ಬಂದಿಳಿದಿದೆ.

ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಬರೋಬ್ಬರಿ 18 ಸಾವಿರ ಭಾರತೀಯರು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಆಪರೇಷನ್‌ ಅಜಯ್‌ ಕಾರ್ಯಾಚರಣೆ ಆರಂಭಿಸಿದೆ. ಈ ಕಾರ್ಯಾಚರಣೆಯಡಿ ಮೊದಲ ವಿಮಾನ ಮೊದಲ ವಿಶೇಷ ವಿಮಾನ ಟೆಲ್‌ ಅವೀವ್‌ನಿಂದ ಗುರುವಾರ ರಾತ್ರಿ ಸುಮಾರು 212 ಭಾರತೀಯರನ್ನು ಹೊತ್ತು ಶುಕ್ರವಾರ ಬೆಳಗ್ಗೆ ಹೊಸದಿಲ್ಲಿ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಆಪರೇಷನ್‌ ಅಜಯ್‌ ಕಾರ್ಯಾಚರಣೆಯಲ್ಲಿ ಪ್ರಯಾಣಿಕರನ್ನು ‘ಮೊದಲು ಬಂದವರಿಗೆ ಆದ್ಯತೆ’ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹಸುಗೂಸು ಸೇರಿದಂತೆ 212 ಮಂದಿ ಭಾರತೀಯರು ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. ಭಾರತದ ಪ್ರಜೆಗಳನ್ನು ಸ್ವಾಗತಿಸಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.

ಇದನ್ನೂ ಓದಿ: ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ – ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

”ಇಸ್ರೇಲ್‌ನಲ್ಲಿ ಸುಮಾರು 18 ಸಾವಿರ ಭಾರತೀಯರು ಸಿಲುಕಿದ್ದು, ಅವರ ಸುರಕ್ಷತೆಗೆ ಕೇಂದ್ರ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸದ್ಯಕ್ಕೆ ಯಾವುದೇ ಭಾರತೀಯ ತೊಂದರೆಗೆ ಸಿಲುಕಿರುವ ಬಗ್ಗೆ ವರದಿಗಳು ಬಂದಿಲ್ಲ. ನಮ್ಮ ರಾಯಭಾರ ಕಚೇರಿ ಹೊರಡಿಸಿದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದೇವೆ. ಮೊದಲ ಹಂತದಲ್ಲಿ 212 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

”ಸದ್ಯ ವಿಶೇಷ ವಿಮಾನವು ಟೆಲ್‌ ಅವೀವ್‌ ತಲುಪಿದೆ. ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಯ ವಿಮಾನಗಳನ್ನೂ ‘ಆಪರೇಷನ್‌ ಅಜಯ್‌’ಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಆರಿಂದಮ್‌ ಬಾಗ್ಚಿ ಹೇಳಿದ್ದಾರೆ. ಕಾರ್ಯಾಚರಣೆಯ ವೆಚ್ಚವನ್ನು ಸರಕಾರವೇ ಭರಿಸಲಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾದ ಬಳಿಕ ಏರ್‌ ಇಂಡಿಯಾ ತನ್ನ ವಿಮಾನಯಾನ ಸೇವೆಯನ್ನು ಬಹುತೇಕ ಸ್ಥಗಿತಗೊಳಿಸಿದೆ.

‘ಆಪರೇಷನ್‌ ಅಜಯ್‌’ ಕಾರ್ಯಾಚರಣೆಗೆ ವೇಗ ನೀಡಲು ಭಾರತೀಯ ವಾಯುಪಡೆಯು ಸಿ-130ಜೆ ಸೂಪರ್‌ ಹರ್ಕ್ಯೂಲಸ್‌, ಸಿ-17 ಗ್ಲೋಬ್‌ ಮಾಸ್ಟರ್‌ ಸೇರಿದಂತೆ ಕೆಲವು ಸಾರಿಗೆ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಅಗತ್ಯಬಿದ್ದಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುವುದು ಎಂದು ಐಎಎಫ್‌ ಮೂಲಗಳು ಹೇಳಿವೆ. ಜತೆಗೆ ನೌಕಾಪಡೆಯ ಹಡಗುಗಳು ಕೂಡ ಸನ್ನದ್ಧವಾಗಿವೆ. ಈ ವರ್ಷದ ಏಪ್ರಿಲ್‌ನಲ್ಲಿ ಸಂಘರ್ಷ ಪೀಡಿತ ಸುಡಾನ್‌ನಿಂದ ಭಾರತೀಯರನ್ನು ಕರೆತರಲು ಭಾರತೀಯ ವಾಯುಪಡೆಯು ‘ಆಪರೇಷನ್‌ ಕಾವೇರಿ’ ಕೈಗೊಂಡಿತ್ತು.

Shwetha M