9ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್‌ – ಹಮಾಸ್‌ ವಾರ್-  ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

9ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್‌ – ಹಮಾಸ್‌ ವಾರ್-  ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಭೀಕರ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದೆ. ಪ್ಯಾಲೆಸ್ತೀನ್ ನಿರ್ನಾಮಕ್ಕೆ ಇಸ್ರೇಲ್ ಪಣತೊಟ್ಟಿದೆ. ಇಸ್ರೇಲ್ ಸೈನಿಕರು ಗಾಜಾಪಟ್ಟಿ ಗಡಿಯಲ್ಲಿ ಹಮಾಸ್ ಉಗ್ರರ ಹೆಡೆಮುರಿ ಕಟ್ಟುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಪ್ಯಾಲೇಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ  ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಅಮೆರಿಕದ ಪ್ರಜೆಗಳು ಬಲಿಯಾಗಿದ್ದಾರೆ.ಈ ರಕ್ತಸಿಕ್ತ ಯುದ್ಧದಲ್ಲಿ ಇದುವರೆಗೆ ಬರೋಬ್ಬರಿ 3,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇನ್ನು ಇಸ್ರೇಲ್ ಭೂ ಸೇನೆ ನೆಲದ ದಾಳಿಗೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಇಸ್ರೇಲ್ ಸೈನಿಕರು ಕಾದುಕುಳಿತಿದ್ದಾರೆ. ಗಾಜಾ ಪಟ್ಟಿ ಬಳಿ ನೂರಾರು ಟ್ಯಾಂಕರ್, ಲಕ್ಷಾಂತರ ಸೈನಿಕರು ಜಮಾವಣೆಗೊಂಡಿದ್ದಾರೆ. ಗಾಜಾದ ಉತ್ತರದಿಂದ ದಕ್ಷಿಣಕ್ಕೆ ತೆರಳಲು ಜನರಿಗೆ ಇಸ್ರೇಲ್ ಸೇನೆ ಸೂಚಿಸಿದೆ. ವಿದ್ಯುತ್, ನೀರು ಸೇರಿ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ನಿಲ್ಲಿಸಲಾಗಿದ್ದು, ಅನ್ನ-ನೀರಿಲ್ಲದೆ ಹಮಾಸ್ ಸೇನೆ ಪರದಾಡುತ್ತಿದೆ.

ಇದನ್ನೂ ಓದಿ: ಇಸ್ರೋ ತಂತ್ರಜ್ಞಾನಕ್ಕೆ ಫುಲ್‌ ಡಿಮ್ಯಾಂಡ್!‌ – ‘ಚಂದ್ರಯಾನ-3’ ರಾಕೆಟ್ ನೋಡಿ ತಂತ್ರಜ್ಞಾನ ಕೇಳಿತ್ತು ಅಮೆರಿಕ

ರಣಭೀಕರ ಯುದ್ಧದಲ್ಲಿ 20ಕ್ಕೂ ಹೆಚ್ಚು ಅಮೆರಿಕದ ಪ್ರಜೆಗಳು ಸಾವನ್ನಪ್ಪುತ್ತಿದ್ದಂತೆ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಅಮೆರಿಕ ಇಸ್ರೇಲ್‌ಗೆ ವಿಶೇಷ ಹಡಗನ್ನು ಕಳುಹಿಸಿದೆ. ನೂರಾರು ಅಮೆರಿಕನ್ನರನ್ನು ಹೊತ್ತ ಮೊದಲ ವಿಶೇಷ ಹಡಗು ಅಮೆರಿಕದತ್ತ ಪಯಣ ಬೆಳೆಸಿದೆ. ಮತ್ತೊಂದೆಡೆ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಮುಂದುವರೆದಿದೆ. ಹೆಣಗಳ ಅಂತ್ಯಕ್ರಿಯೆಗೂ ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗಿದೆ. ಐಸ್‌ಕ್ರೀಮ್ ಟ್ರಕ್‌ಗಳಲ್ಲಿ ಮೃತ ದೇಹಗಳನ್ನು ಸಂಗ್ರಹಿಸಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಮಾಸ್ ವಿರುದ್ಧ ಇಸ್ರೇಲ್ ಮಿಲಿಟರಿ ಕಾರ್ಯಚರಣೆ ಮುಂದುವರೆದಿದೆ. ಗಡಿಯಲ್ಲಿ ಮಾರಣಹೋಮ ನಡೆಸುತ್ತಿದ್ದ 330ಕ್ಕೂ ಹೆಚ್ಚು ಬಂಡುಕೋರರನ್ನು ಇಸ್ರೇಲ್ ಸೈನಿಕರು ಬಂಧಿಸಿದ್ದಾರೆ. ಬಂಧಿತ ಬಂಡುಕೋರರಿಂದ ಭಾರೀ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ಜೀವಂತ ಗುಂಡುಗಳು ವಶಕ್ಕೆ ಪಡೆದ ಫೋಟೋಗಳನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇತ್ತ ಲೆಬನಾನಿನ ಗಡಿಯಿಂದ ಇಸ್ಲಾಮಿಕ್ ಗುಂಪುಗಳು ರಾಕೆಟ್ ಉಡಾಯಿಸಿದ್ದು, ವಾಯುವ್ಯ ಇಸ್ರೇಲ್‌ನಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ.

Shwetha M