ಹಮಾಸ್‌, ಇಸ್ರೇಲ್‌ ನಡುವಿನ ಕದನ ವಿರಾಮ ಅಂತ್ಯ – ಗಾಜಾದಲ್ಲಿ ಮತ್ತೆ ಘರ್ಷಣೆ ಆರಂಭ

ಹಮಾಸ್‌, ಇಸ್ರೇಲ್‌ ನಡುವಿನ ಕದನ ವಿರಾಮ ಅಂತ್ಯ – ಗಾಜಾದಲ್ಲಿ ಮತ್ತೆ ಘರ್ಷಣೆ ಆರಂಭ

ಇಸ್ರೇಲ್​ ಹಾಗೂ ಹಮಾಸ್  ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದೆ.  ಗಾಜಾದಲ್ಲಿ ಮತ್ತೆ ಘರ್ಷಣೆ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.

ಮಾನವೀಯತೆಯ ಆಧಾರದಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಹಾಗೂ ಇಸ್ರೇಲ್‌ ನಡುವೆ ಕದನ ವಿರಾಮ ಘೋಷಿಸಲಾಗಿತ್ತು. ನವೆಂಬರ್ 24 ರಂದು ಮೊದಲು ನಾಲ್ಕು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು. ಅದಾದ ಬಳಿಕ ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಒಂದು ವಾರದ ಬಳಿಕ ಒಪ್ಪಂದ ಅಂತ್ಯಗೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇಸ್ರೇಲ್- ಹಮಾಸ್‌ ಕದನ ವಿರಾಮ – 12 ಒತ್ತೆಯಾಳು ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ನಿಂದ 30 ಪ್ಯಾಲೇಸ್ಟಿನಿಯನ್ ಕೈದಿಗಳು ರಿಲೀಸ್

ಶುಕ್ರವಾರ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಬೆಳಗ್ಗೆ 7 ಗಂಟೆಯೊಳಗೆ ಹಮಾಸ್ ಇಸ್ರೇಲ್ ಗೆ ನೀಡಿಲ್ಲ. ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಹೆಚ್ಚುವರಿಯಾಗಿ ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

ಎಂಟು ಇಸ್ರೇಲಿ ಒತ್ತೆಯಾಳುಗಳನ್ನು ಏಳು ದಿನಗಳ ಕಾಲ ನಡೆದ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸೆರೆಯಿಂದ ಬಿಡುಗಡೆ ಮಾಡಲಾಯಿತು. ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ನರ ನಡುವಿನ ದಶಕಗಳಲ್ಲಿ ಮಾರಣಾಂತಿಕ ಹೋರಾಟವನ್ನು ವಿರಾಮಗೊಳಿಸಿರುವ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ಶುಕ್ರವಾರ ಮುಂಜಾನೆ 30 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್​ಗಳಿಂದ ದಾಳಿ ನಡೆಸಿ 1,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಳಿಕ ಇಸ್ರೇಲ್ ನಡೆಸಿದ ಪ್ರತಿದಾಳೀಯಲ್ಲಿ ಗಾಜಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಅಷ್ಟೇ ಅಲ್ಲದೆ ಯುದ್ಧವನ್ನು ಆರಂಭಿಸಿದವರು ನಾವಲ್ಲ ಆದರೆ ನಮ್ಮಿಂದಲೇ ಅಂತ್ಯವಾಗುತ್ತದೆ ಎಂದು ಕೂಡ ಹೇಳಿದ್ದಾರೆ.

Shwetha M