ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

ಇಸ್ರೇಲ್ & ಗಾಜಾ ಪಟ್ಟಿ ನಡುವಿನ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಇಸ್ರೇಲ್, ಗಾಜಾದ ಮೇಲೆ ಮತ್ತೆ ದಾಳಿ ಆರಂಭಿಸಿದ್ದು, ಗಾಜಾದ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 322 ಮಕ್ಕಳು ಸಾವನ್ನಪ್ಪಿದ್ದಾರೆ. 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನಿಂದ ಮುಂಬೈ ಪಾರು – KKR ಬ್ಯಾಟಿಂಗ್ ಬಲ ಕುಗ್ಗಿಸಿದ ಮುಂಬೈ ಇಂಡಿಯನ್ಸ್ ಬೌಲರ್ಸ್
ಹಮಾಸ್ & ಇಸ್ರೇಲ್ ನಡುವೆ ಶಾಂತಿ ಮಾತುಕತೆ ಸರಿಹೊಂದುತ್ತಿಲ್ಲ. ಎರಡು ಸೇನೆಗಳ ನಡುವೆ ಭಾರಿ ಘೋರ ಹಿಂಸಾಚಾರ ಶುರುವಾಗಿದೆ. ಈ ಯುದ್ಧದ ಪರಿಣಾಮ ಗಾಜಾ ಪಟ್ಟಿ ಇದೀಗ ನರಕದ ರೂಪ ಪಡೆದಿದೆ. ಮಾ.23 ರಂದು ದಕ್ಷಿಣ ಗಾಜಾದಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಮಕ್ಕಳೂ ಈ ಅಂಕಿ ಅಂಶಗಳಲ್ಲಿ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ. ಈ ಮಕ್ಕಳಲ್ಲಿ ಹೆಚ್ಚಿನವರು ಸ್ಥಳಾಂತರಗೊಂಡು ತಾತ್ಕಾಲಿಕ ಡೇರೆಗಳು, ಹಾನಿಗೊಳಗಾದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.
ಹಮಾಸ್ ಜೊತೆಗಿನ ಸುಮಾರು ಎರಡು ತಿಂಗಳ ಯುದ್ಧ ವಿರಾಮವನ್ನು ಕೊನೆಗೊಳಿಸಿದ ಇಸ್ರೇಲ್, ಮಾ.18 ರಂದು ಗಾಜಾದ ಮೇಲೆ ತೀವ್ರವಾದ ಬಾಂಬ್ ದಾಳಿಯನ್ನು ಪುನರಾರಂಭಿಸಿತು. ಸುಮಾರು 18 ತಿಂಗಳ ಯುದ್ಧದ ನಂತರ, 15,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. 34,000 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.